`ಗಾಂಧಿ ಹೀರೋ ಮಾಡುವ ಭರದಲ್ಲಿ ಅಂಬೇಡ್ಕರಗೆ ಅನ್ಯಾಯ’

ಜನನುಡಿ ಸಮಾವೇಶ ಉದ್ಘಾಟಿಸಿದ ಲಿಂಬಾಳೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಗಾಂಧೀಜಿಯನ್ನು ಏಕ ಮಾತ್ರ ಮಹಾತ್ಮಾ ಮಾಡುವ ಭರದಲ್ಲಿ ಅಂದಿನ ಮಾಧ್ಯಮಗಳು ಬಾಬಾಸಾಹೇಬ ಅಂಬೇಡ್ಕರರಿಗೆ ಅನ್ಯಾಯ ಎಸಗಿವೆ ಎಂದು ಮರಾಠಿ ಲೇಖಕ ಶರಣುಕುಮಾರ್ ಲಿಂಬಾಳೆ ಅಭಿಪ್ರಾಯಪಟ್ಟಿದ್ದಾರೆ.

“ಮಾಧ್ಯಮಗಳು ಅಂಬೇಡ್ಕರ್ ಅವರಿಗೆ ಪ್ರಾಮುಖ್ಯತೆ ಕೊಡಲಿಲ್ಲ. ಗಾಂಧಿಯವರನ್ನು ದಲಿತರ ಏಕಮೇವ ನಾಯಕ ಎಂದು ಬಿಂಬಿಸಿದವು. ಈ ಕಾರಣಕ್ಕಾಗಿಯೇ ಮಾರ್ಟಿನ್ ಲೂಥರ್ ಕಿಂಗ್ ಅವರು ಭಾರತಕ್ಕೆ ಬಂದಾಗ ಮೊದಲು ಭೇಟಿ ಮಾಡಿದ್ದು ಗಾಂಧೀಜಿಯವರನ್ನೇ” ಎಂದು ಮಂಗಳೂರಿನ ಶಾಂತಿಕಿರಣದಲ್ಲಿ ಅಭಿಮತ ಸಂಸ್ಥೆಯು ಅಂಬೇಡ್ಕರ್-125 ಸ್ಮರಣೆಯೊಂದಿಗೆ ಆಯೋಜಿಸಿದ್ದ ಜನನುಡಿ-2016 ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಲಿಂಬಾಳೆ ಹೇಳಿದರು.

“ಗಾಂಧೀಜಿ ನೂರಾರು ವರ್ಷಗಳ ಕಾಲ ಭಾರತೀಯರ ಮೇಲೆ ದಬ್ಬಾಳಿಕೆ ನಡೆಸಿದ ಬ್ರಿಟಿಷರ ವಿರುದ್ಧ ಹೋರಾಡಿ ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿತು. ಆದರೆ, ಬಾಬಾ ಸಾಹೇಬ್ ಹೋರಾಡಿದ್ದು ಸಾವಿರಾರು ವರ್ಷಗಳ ಕಾಲದಿಂದ ದಬ್ಬಾಳಿಕೆ ನಡೆಸ್ತಿರುವ ಮೇಲ್ವರ್ಗಗಳ ವಿರುದ್ಧ. ಅವರ ಹೋರಾಟ ಇವತ್ತಿಗೂ ಜಾರಿಯಲ್ಲಿದೆ. ಸಾಮಾಜಿಕವಾಗಿ ನಾವಿನ್ನೂ ಸ್ವತಂತ್ರರಾಗಿಲ್ಲ. ಸಾಮಾಜಿಕ ಸ್ವಾತಂತ್ರ್ಯ ದೊರೆಯದ ಹೊರತು ಯಾವ ರಾಷ್ಟ್ರವೂ ಸಂಪೂರ್ಣ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ” ಎಂದವರು ಹೇಳಿದರು.

limbale

“ಸಾಮ್ರಾಜ್ಯಶಾಹಿ ಎಂಬುದೇ ಬಹುದೊಡ್ಡ ಮೋಸದ ಪರಿಕಲ್ಪನೆ. ಆದರೆ ಅದಕ್ಕಿಂತ ದೊಡ್ಡದು ಸಾಮಾಜಿಕ ಅಸಮಾನತೆ. ಇಂತಹ ಸಮಾವೇಶದ ಆಶಯಗಳು ಅಸಮಾನತೆಯ ವಿರುದ್ಧ ದನಿ ಎತ್ತಿರುವುದು ಗಮನಾರ್ಹ” ಎಂದರು.

“ಸಾಹಿತ್ಯ ಮುನುಷ್ಯ ಕೇಂದ್ರಿತವಾಗಿ ರಬೇಕು. ದೇವರ ಬಗ್ಗೆ ಅಲ್ಲ. ರಾಮಾಯಣದಲ್ಲಿ ನಮ್ಮವನಾದ ಶಂಭೂಕನನ್ನು ಕೊಲ್ಲಲಾಗುತ್ತದೆ. ಮಹಾಭಾರತದಲ್ಲಿ ಏಕಲವ್ಯನಿದ್ದಾನೆ. ಭಗವದ್ಗೀತೆಯಲ್ಲಿ ಚಾತುರ್ವರ್ಣದ ತಾರತಮ್ಯವನ್ನು ಎತ್ತಿಹಿಡಿಯಲಾಗಿದೆ. ಇಂಥ ಸಾಹಿತ್ಯ ಕೃತಿಗಳು ನಮಗೆ ಬೇಡ. ಅನಂತರ ಕೂಡ ಮೇಲ್ವರ್ಗದ ಜನಗಳದ್ದು ರಮ್ಯ ಕಲ್ಪನೆಯೇ ಹೊರತು ಗಟ್ಟಿಯಾದ ವಿಚಾರಗಳಿಲ್ಲ. ನಮ್ಮ ನೋವುಗಳಿಗೆ, ಸಂಕಷ್ಟಗಳಿಗೆ ಜಾಗವೇ ಇಲ್ಲ. ನಮಗೆಲ್ಲೂ ಅಂಬೇಡ್ಕರ್ ಸಿಗಲೇ ಇಲ್ಲ” ಎಂದು ಲಿಂಬಾಳೆ ನುಡಿದರು.

“ಸಾವಿರಾರು ವರ್ಷಗಳ ಕಾಲ ಯಾವುದನ್ನು ಸಾಹಿತ್ಯಲೋಕದಿಂದ ದೂರ ಇಡಲಾಗಿತ್ತೋ ಅದನ್ನು ಬರೆದೆವು. ಹಾಗೆ ದಲಿತ ಸಾಹಿತ್ಯವು ಹುಟ್ಟಿಕೊಂಡಿತು. ನಾವೇ ಪ್ರಕಾಶಿಸಿದೆವು. ಸಾಹಿತ್ಯ ಸಮ್ಮೇಳನಗಳನ್ನೂ ಮಾಡಿದೆವು” ಎಂದರು. “ತಮ್ಮನ್ನು ಮುಖ್ಯವಾಹಿನಿ ಎಂದು ಕರೆದುಕೊಳ್ಳುವವರು ಮಹಿಳೆಯರ ಬಗ್ಗೆ ಬರೆದಿಲ್ಲ, ಆದಿವಾಸಿಗಳ ಬಗ್ಗೆ ಬರೆದಿಲ್ಲ, ದೀನ ದಲಿತರ ಬಗ್ಗೆ ಬರೆದಿಲ್ಲ, ಅಲ್ಪಸಂಖ್ಯಾತರ ಬಗ್ಗೆ ಬರೆದಿಲ್ಲ. ಅವರು ಬರೆದಿದ್ದೆಲ್ಲ ದೇವರು ದೊರೆಗಳ ಬಗ್ಗೆಯಷ್ಟೆ” ಎಂದವರು ಹೇಳಿದರು.

“ದಲಿತರು ಬರೆದಂತೆ ಅಲ್ಪಸಂಖ್ಯಾತ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಬರೆಯುತ್ತಿಲ್ಲ. ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸಮಗ್ರವಾಗಿ ಬರೆಯಲು ಶುರುಮಾಡಿದರೆ ಸಾಹಿತ್ಯಲೋಕದ ಚಹರೆಯೇ ಬದಲಾಗಿಬಿಡುತ್ತದೆ. ಅವರೂ ಸಹ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು” ಎಂದರು.

“ಜನಸಮುದಾಯಗಳ ನಡುವೆ ಅಸಹನೆ ಹೆಚ್ಚಾಗುತ್ತಾ, ಸಮುದಾಯಗಳು ತಮ್ಮ ಐಡೆಂಟಿಟಿ ಪ್ರಜ್ಞೆಯನ್ನು ಅಸ್ತಿತ್ವದ ಪ್ರಶ್ನೆಯಾಗಿ ಮಾಡಿಕೊಳ್ಳುತ್ತಿರುವ ಕಾಲದಲ್ಲಿ ಸೌಹಾರ್ದತೆ ಘಾಸಿಗೊಳ್ಳುತ್ತೆ ಎಂಬ ಆತಂಕವಿದೆ. ಪರಿಸ್ಥಿತಿ ಮತ್ತಷ್ಟು ಛಿದ್ರಗೊಂಡಿದೆ. ಆದರೆ ಛಿದ್ರಗೊಳಿಸುವ ಶಕ್ತಿಗಳನ್ನು ಅವು ಬೆಚ್ಚಿ ಬೀಳುವಷ್ಟು ಗಟ್ಟಿಯಾಗಿ ಅನ್ಯಾಯಕ್ಕೊಳಗಾದವರು ಪ್ರಶ್ನಿಸುತ್ತಿದ್ದಾರೆ ಎಂಬುದು ಭರವಸೆ ಮೂಡಿಸಿದೆ” ಅಧ್ಯಕ್ಷತೆ ವಹಿಸಿದ ಹಿರಿಯ ಲೇಖಕಿ ಡಾ ವಿಜಯ ಹೇಳಿದರು.

“ಅಂಬೇಡ್ಕರ್ ಅವರನ್ನು ದಲಿತ ನಾಯಕ, ಸಂವಿಧಾನ ಶಿಲ್ಪಿ, ರಾಜಕೀಯ ನಾಯಕ ಎಂದಷ್ಟೇ ಗುರುತಿಸುತ್ತಿದ್ದೇವೆ. ಆದರೆ ಅವರು ಅದನ್ನೆಲ್ಲಾ ಮೀರಿದವರು. ನಿಜವಾದ ಅರ್ಥದಲ್ಲಿ ಒಬ್ಬ ದಾರ್ಶನಿಕ. ಆದ್ದರಿಂದಲೇ ಅವರಿಗೆ ಒಂದು ಸಮುದಾಯವನ್ನು ಇಡಿಯಾಗಿ, ಅದರ ಎಲ್ಲ ಆಯಾಮಗಳಲ್ಲಿ ನೋಡಲು ಸಾಧ್ಯವಾಯಿತು” ಎಂದರು.

“ಭಾಷಣಗಳನ್ನು ಕೇಳಿ ಹೋದರೆ ಉಪಯೋಗವಾಗಲಿಲ್ಲ. ಚರ್ಚೆಗೆ ಮಾತ್ರ ಇಂತಹ ಕಾರ್ಯಕ್ರಗಳು ಸೀಮಿತ ಆಗಬಾರದು. ಆಶಯಗಳ ಈಡೇರಿಕೆಗೆ ಎಲ್ಲರೂ ತಮ್ಮದೇ ಆದ ನಿಟ್ಟಿನಲ್ಲಿ ಕೆಲಸ ಮಾಡಬೇಕು” ಎಂದು ಮುಖ್ಯ ಅತಿಥಿ, ಮಾಜಿ ಸಚಿವ ಬಿ ಎ ಮೊಯಿದ್ದೀನ್ ಹೇಳಿದರು.

“ಸಮಾಜದಲ್ಲಿ ಅರಿವನ್ನ ಬಿತ್ತುವ ಅರಿವು ಆಗಬೇಕಿದೆ. ಇದಕ್ಕಾಗಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ. ಶ್ರೀಮಂತರಿಗೆ, ಬಡವರಿಗೆ ಬೇರೆ ಬೇರೆ ರೀತಿ ಶಿಕ್ಷಣ ಸಿಗುತ್ತಿದೆ. ಮೂಲ ಹಂತದಲ್ಲಿ ಸಮಾನತೆ ತರದಿದ್ದರೆ, ಪ್ರತಿ ಪ್ರಜೆಗೆ ಸಮಾನತೆಯ, ಗುಣಮಟ್ಟದ ಶಿಕ್ಷಣ ಕೊಡದಿದ್ದರೆ ಅಸಮಾನತೆ ನಿರಂತರ” ಎಂದು ಮಂಗಳೂರು ವಿ ವಿ ಕಾಲೇಜಿನ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ನಿರ್ದೇಶಕ ನಾಗಪ್ಪ ಗೌಡ ನುಡಿದರು.

ಕರಾವಳಿಯಲ್ಲಿ ನಡೆಯುತ್ತಿರುವ ಕೋಮುವಾದದ ವಿರುದ್ಧ ಜನನುಡಿ ಕಾರ್ಯಕ್ರಮ ಆರಂಭವಾಯಿತು. ಸಾಹಿತ್ಯ, ಕೋಮುವಾದದ ಕುರಿತು ಕಾರ್ಯಕ್ರಮಗಳನ್ನು ಜನನುಡಿ ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಮುಕ್ತ ಚರ್ಚೆ ಮತ್ತು ಸಂವಾದ ಕಾರ್ಯಕ್ರಮದ ಉದ್ದೇಶ ಎಂದು ಲೇಖಕಿ ಎಚ್ ಎಸ್ ಅನುಪಮ ನುಡಿದರು.