ಕಬ್ಬಿಣದ ಸರಳುಗಳನ್ನು ರಿಕ್ಷಾ ಟೆಂಪೋಗಳಲ್ಲಿ ಸಾಗಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ

ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಸಮೀಪ ಸಂಚರಿಸುತ್ತಿದ್ದ ಸ್ವಿಫ್ಟ್ ಕಾರೊಂದು ಹಠಾತ್ತನೆ ಬ್ರೇಕ್ ಹಾಕಿದ್ದ ಪರಿಣಾಮ ಹಿಂದಿನಿಂದ ಕಬ್ಬಿಣದ ಸರಳನ್ನು ಹೇರಿಕೊಂಡು ಬರುತ್ತಿದ್ದ ಓಮ್ನಿ ಕಾರಿನ ಚಾಲಕ ಕೂಡಾ ಬ್ರೇಕ್ ಹಾಕಿದ್ದರಿಂದ ಕಾರಿನ ಮೇಲಿದ್ದ ಕಬ್ಬಿಣದ ರಾಡ್‍ಗಳು ಸ್ವಿಫ್ಟ್ ಕಾರಿನ ಹಿಂಬದಿಯಿಂದ ನುಗ್ಗಿ ಮುಂಬದಿಯಿಂದ ಹೊರ ಬಂದು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿ ಕಾರಿನ ಗಾಜುಗಳು ಮಾತ್ರ ಪುಡಿಯಾಗಿವೆ ಎಂಬುದರ ಬಗ್ಗೆ ವರದಿಯಾಗಿದೆ.
ಕಳೆದ ವಾರ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಹ ವಾಹನಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಕಬ್ಬಿಣದ ಸರಳುಗಳನ್ನು ಸಾಗಿಸುವುದರ ಬಗ್ಗೆ ಹಾಗೂ ಇತರ ತೊಂದರೆ ಅಸ್ತವ್ಯಸ್ತ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ತಿಳಿಸಿದ್ದಾರೆ.
ನಿಜಕ್ಕೂ ಕಬ್ಬಿಣದ ಸರಳುಗಳನ್ನು ನಗರದೊಳಗೆ ಲಾರಿ ಟೆಂಪೊ ರಿಕ್ಷಾ ಬದಿಗಳಲ್ಲಿ ಕಟ್ಟಿ ಸಾಗಿಸಲಾಗುತ್ತಿದೆ. ಅದು ಸಹ ತೀರಾ ಜನ ಸಂದಣಿ ವಾಹನ ಸಾಂಧ್ರತೆ ಇರುವ ಪ್ರಮುಖ ರಸ್ತೆಗಳಲ್ಲಿ ಸಾಗಿಸುವುದರಿಂದ ಜನರ ಪ್ರಾಣಕ್ಕೆ ಕುತ್ತು. ಪಾದಚಾರಿಗಳಂತೂ ಇಂತಹ ವಾಹನಗಳನ್ನು ಕಂಡರೆ ಹೆದರುತ್ತಾರೆ. ಅಂತೂ ಕಬ್ಬಿಣದ ಸರಳುಗಳನ್ನು ಪ್ರಮುಖ ರಸ್ತೆಗಳಲ್ಲಿ ವಾಹನ ಬದಿಗಳಿಗೆ ಕಟ್ಟಿ ಸಾಗಿಸುವುದನ್ನು ನಿಲ್ಲಿಸಬೇಕಾಗಿದೆ. ವಾಹನದಲ್ಲಿ ಯಾಕೆ ಕೆಲವರು ಹಣ ಉಳಿಸಲು ತಮ್ಮ ಸೈಕಲಿನಲ್ಲೂ ಸಹ ಇಂತಹ ಸರಳುಗಳನ್ನು ಸಾಗಿಸಿ ಜನರ ಜೀವಕ್ಕೆ ಸಂಚಿಕಾರ ತಂದೊಡ್ಡುತ್ತಾರೆ? ಕಾರು ರಿಕ್ಷಾ ಸೈಕಲು ಸ್ಕೂಟರ್‍ಗಳಿಂದ ಒಬ್ಬರ ಜೀವಕ್ಕೆ ಪ್ರಾಣಕ್ಕೆ ಸಂಚಿಕಾರ ತರುವ ಕಬ್ಬಿಣದ ಸರಳುಗಳನ್ನು ಇನ್ನಿತರ ಡೇಂಜರಸ್ ವಸ್ತುಗಳನ್ನು ಹೀಗೆ ಸಾಗಿಸುವುದೇ ? ಕೆಲವರು ಬಾಡಿಗೆ ಉಳಿಸಲು ಅನಿಲ ತುಂಬಿದ ಹಂಡೆಗಳನ್ನು ಸಹ ಸಾಗಿಸುತ್ತಾರೆ. ಕೆಲವರು ದೊಡ್ಡ ಗಾತ್ರದ ಗಾಜುಗಳನ್ನು ಕೊಂಡೊಯ್ಯುತ್ತಾರೆ. ಇದಕ್ಕೆಲ್ಲ ಟ್ರಾಫಿಕ್ ಪೊಲೀಸರು ಕಡಿವಾಣ ಹಾಕಬೇಡವೇ ?

  • ಜೆ ಎಫ್ ಡಿಸೋಜ  ಅತ್ತಾವರ