`ಕಾನೂನು ಪಾಲನೆ ವಿದ್ಯಾರ್ಥಿಗಳ ಕರ್ತವ್ಯ’

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : “ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಉದ್ಯೋಗ ಗಳಿಸುವ ಹೊಸ್ತಿಲಲ್ಲಿ ಅಪಘಾತಕ್ಕೀಡಾಗಿ ಮೃತರಾದರೆ ಹೆತ್ತವರಿಗಿಂತ ದೇಶಕ್ಕೇ ಅಧಿಕ ನಷ್ಟ ” ಎಂದು ಮಂಗಳೂರು ಉತ್ತರ ಸಂಚಾರಿ ಪೊಲೀಸ್ ನಿರೀಕ್ಷಕ ಮಂಜುನಾಥ್ ಹೇಳಿದರು.

ಮುಲ್ಕಿ ವಿಜಯಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಶುಕ್ರವಾರ ನಡೆದ ಸಂಚಾರ ವಿಭಾಗದ ರಸ್ತೆ ಕಾನೂನು ಮಾಹಿತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

“ಯುವ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಸರಕಾರವು ಶೈಕ್ಷಣಿಕ ವ್ಯವಸ್ಥೆ ಉನ್ನತೀಕರಣಗೊಳಿಸಲು ಬಹಳಷ್ಟು ಹಣ ವೆಚ್ಚಮಾಡುತ್ತಿದ್ದು, ಯುವ ಸಮಾಜ ಅಭಿವೃದ್ಧಿಗೊಂಡರೆ ಮಾತ್ರ ಈ ಋಣ ಸಂದಾಯ ಸಾಧ್ಯ. ಈ ಬಗ್ಗೆ ಯುವ ಸಮಾಜ ತಿಳಿದುಕೊಂಡು ಕಾನೂನು ಪಾಲನೆ ಮಾಡುವ ಮೂಲಕ ತಾವೂ ಅಭಿವೃದ್ಧಿಯಾಗಿ ಕುಟುಂಬ ಹಾಗೂ ದೇಶದ ಉನ್ನತ ಭವಿಷ್ಯಕ್ಕೆ ಕಾರಣಕರ್ತರಾಗಬೇಕು ” ಎಂದರು.

ವಿಜಯಾ ಪದವಿ ಕಾಲೇಜು ಪ್ರಾಂಶುಪಾಲ ನಾರಾಯಣ ಪೂಜಾರಿ ಪ್ರಸ್ತಾವಿಸಿ, “ಇಂದು ಯುವ ಸಮಾಜ ರಸ್ತೆ ನಿಯಮಗಳ ಬಗ್ಗೆ ಅಸಡ್ಡೆ ತೋರಿಸುತ್ತಿರುವ ಕಾರಣ ಬೆಳೆದ ಮಕ್ಕಳು ಮನೆಗೆ ಬೆಳಕಾಗುವ ಮೊದಲೇ ಅಪಘಾತಕ್ಕೆ ಬಲಿಯಾಗುತ್ತಿರುವುದು ದುರಂತವಾಗಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ರಸ್ತೆ ಕಾನೂನುಗಳ ಬಗ್ಗೆ ಅರಿವುಮೂಡಿಸಿಕೊಂಡು ಪಾಲನೆ ಮಾಡಲು ಈ ಶಿಬಿರ ಸಹಕಾರಿಯಾಗಲಿದೆ ” ಎಂದರು.