ರಾಜ್ಯ ಸರ್ಕಾರದಿಂದ ಸೀರೆ -ಪಂಚೆ ಭಾಗ್ಯ

ಬೆಂಗಳೂರು : ರಾಜ್ಯ ಅಸೆಂಬ್ಲಿ ಚುನಾವಣೆ ಹತ್ತಿರವಾಗುತ್ತಲೇ ಸರ್ಕಾರದಿಂದ ಮತ್ತೊಂದು `ಭಾಗ್ಯ’ ಯೋಜನೆ ಜಾರಿಯಾಗಲಿದೆ. ಜವುಳಿ ಇಲಾಖೆ ಪ್ರಸ್ತಾವಿತ ಈ ಹೊಸ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಸೀರೆಗಳು ಮತ್ತು ಪಂಚೆ ಲಭ್ಯವಾಗಲಿದೆ. ಇದು 550 ಕೋಟಿ ರೂ ಅಂದಾಜು ವೆಚ್ಚದ ಯೋಜನೆಯಾಗಿದೆ.

ಇದಕ್ಕೆ `ಇಂದಿರಾ ವಸ್ತ್ರ ಭಾಗ್ಯ’ ಹೆಸರಿಡಲಾಗಿದ್ದು, ಜವುಳಿ ಸಚಿವ ರುದ್ರಪ್ಪ ಲಮಾಣಿ ಯೋಜನೆಯ ಪ್ರಸ್ತಾವವನ್ನು ಕ್ಲಿಯರೆನ್ಸಿಗಾಗಿ ವಿತ್ತ ಇಲಾಖೆಗೆ ಕಳುಹಿಸಿದ್ದಾರೆ. ಒಂದೊಮ್ಮೆ ಕ್ಲಿಯರೆನ್ಸ್ ಸಿಕ್ಕಿದರೆ ಸರ್ಕಾರ ಈವರೆಗೆ ಅನುಷ್ಠಾನಗೊಳಿಸಿರುವ ಅನ್ನ ಭಾಗ್ಯ, ಕ್ಷೀರ ಭಾಗ್ಯ ಕೃಷಿ ಭಾಗ್ಯದಂತಹ ಯೋಜನೆಗಳ ಪಟ್ಟಿಗೆ ಮತ್ತೊಂದು ಭಾಗ್ಯ ಯೋಜನೆ ಸೇರಿಕೊಳ್ಳಲಿದೆ.

ಇಂದಿರಾ ಗಾಂಧಿಯವರ `ಸೊಸೈಟಿ ಸಾರಿ-ಧೋತಿ’ ಯೋಜನೆಯಿಂದ ಪ್ರೇರಿತರಾದ ಸಚಿವ ಲಮಾಣಿ ಈ ಬಗ್ಗೆ ಚಿಂತಿಸಿದ್ದಾರೆ. ಇಂದಿರಾ ವಸ್ತ್ರ

ಭಾಗ್ಯದಿಂದ  1.10 ಕೋಟಿ ಬಿಪಿಎಲ್ ಕುಟುಂಬಗಳಿಗೆ ಲಾಭವಾಗಲಿದೆ. ಪುರುಷರಿಗೆ ಒಂದು ಸೆಟ್ ಪಾಲಿ ಕಾಟನ್ ಪಂಚೆ ಮತ್ತು ಪಾಲಿ ವಿಸ್ಕೋಸ್ ಶರ್ಟ್ ಪೀಸ್ ಹಾಗೂ ಮಹಿಳೆಯರಿಗೆ ಪಾಲಿಸ್ಟರ್ ಸೀರೆ ಮತ್ತು ಪಾಲಿ ಕಾಟನ್ ರವಿಕೆ ಪೀಸ್ ಸಿಗಲಿದೆ.

ವಿತ್ತ ಇಲಾಖೆ ಹಸಿರು ನಿಶಾನೆ ನೀಡಿದ ಬಳಿಕ ಇದಕ್ಕೆ ಸಂಪುಟದಿಂದ ಕ್ಲಿಯರೆನ್ಸ್ ಪಡೆಯಲಾಗುವುದು. ಬಳಿಕ ಅಸೆಂಬ್ಲಿ ಚುನಾವಣೆಗೆ ಮುಂಚೆ ಬಿಪಿಎಲ್ ಕುಟುಂಬಗಳಿಗೆ ಪಡಿತರ ಅಂಗಡಿಗಳಲ್ಲಿ ಸೀರೆ ಮತ್ತು ಪಂಚೆ ಲಭ್ಯವಾಗಲಿದೆ.

“ಈ ಯೋಜನೆಯಿಂದ ಕೈಮಗ್ಗ ಆಶ್ರಯಿತ ಲಕ್ಷಾಂತರ ಕುಟುಂಬಗಳಿಗೆ ಲಾಭವಾಗಲಿದೆ. ನಾವು ಕೈಮಗ್ಗದಾರರಿಂದ ನೇರವಾಗಿ ವಸ್ತ್ರ ಖರೀದಿಸಲಿದ್ದೇವೆ” ಎಂದು ಲಮಾಣಿ ತಿಳಿಸಿದರು.

LEAVE A REPLY