ಹೋಟೆಲ್ ಉದ್ಯಮಕ್ಕೆ ಆತಂಕ ಹುಟ್ಟಿಸಿದ ಇಂದಿರಾ ಕ್ಯಾಂಟೀನ್

ಸಾಂದರ್ಭಿಕ ಚಿತ್ರ

ಬೆಂಗಳೂರು : ಇನ್ನು ಕೆಲವೇ ದಿನಗಳಲ್ಲಿ ಸರ್ಕಾರದ `ಇಂದಿರಾ ಕ್ಯಾಂಟೀನ್’ಗಳು ಅಸ್ತಿತ್ವಕ್ಕೆ ಬರಲಿದ್ದು, ಇದರಿಂದಾಗಿ ತಮ್ಮ ವ್ಯವಹಾರಕ್ಕೆ ಏಟು ಬೀಳಲಿದೆ ಎಂದು ಖಾಸಗಿ ಹೊಟೇಲಿಗರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. “ಹೋಟೆಲ್ ಉದ್ಯಮವು ಜಿಎಸ್ಟಿಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಈ ಹೊತ್ತಲ್ಲೇ ಸಬ್ಸಿಡಿ ದರದ ಇಂದಿರಾ ಕ್ಯಾಂಟೀನುಗಳು ತಮ್ಮ ಉದ್ಯಮದ ಮೇಲೆ ಮತ್ತೊಂದು ಆಘಾತ ನೀಡಲಿದೆ” ಎಂದಿದ್ದಾರೆ. ಇಂದಿರಾ ಕ್ಯಾಂಟುಗಳಲ್ಲಿ 5 ರೂಗೆ ತಿಂಡಿ-ತನಸು ಮತ್ತು 10 ರೂಗೆ ಊಟ ಲಭ್ಯವಾಗಲಿದೆ.  “ಇದು ಬರೇ ಚುನಾವಣಾ ಗಿಮಿಕ್ಸ್. ಸರ್ಕಾರ ಇದನ್ನು ದೀರ್ಘಕಾಲ ಮುಂದುವರಿಸಿಕೊಂಡು ಹೋಗಲಿಕ್ಕಿಲ್ಲ” ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘಟನೆ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಸಂದೇಹ ವ್ಯಕ್ತಪಡಿಸಿದರು.