`3 ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್’

ವಿಜಯಪುರ : ರಾಜ್ಯದ ಎಲ್ಲ ಜಿಲ್ಲಾ ಮುಖ್ಯ ಕಚೇರಿಗಳಲ್ಲಿ ಮುಂದಿನ ಮೂರು ತಿಂಗಳೊಳಗೆ ಸಬ್ಸಿಡಿ ದರದಲ್ಲಿ ಊಟ ಲಭ್ಯವಿರುವ ಇಂದಿರಾ ಕ್ಯಾಂಟೀನ್ ತೆರೆದುಕೊಳ್ಳಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಖಾದರ್ ತಿಳಿಸಿದರು. ಇಂದಿರಾ ಕ್ಯಾಂಟೀನ್ ತೆರೆಯಲು ಸರ್ಕಾರದಿಂದ ಪ್ರಕ್ರಿಯೆ ಆರಂಭಗೊಂಡಿದೆ ಎಂದವರು, ರಾಜ್ಯ ಎಲ್ಲ ಬಡ ಕುಟುಂಬಗಳಿಗೆ ಪ್ರಧಾನಮಂತ್ರಿಯ ಉಜ್ವಲ ಯೋಜನೆಯಡಿ ಅಡುಗೆ ಅನಿಲದ ಸಂಪರ್ಕ ಸಿಕ್ಕಿಲ್ಲ ಎಂದು ಆರೋಪಿಸಿದರು.

“ಇದು ಬಡ ಕುಟುಂಬಗಳ ವಿರುದ್ಧ ತಾರತಮ್ಯ ಮತ್ತು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಎಲ್ಲ ಬಡ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ನೀಡಬೇಕು” ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ಉತ್ತರಿಸಿದರು. ಕೇಂದ್ರ ಸರ್ಕಾರ ರಾಜ್ಯದ `ಆಯ್ದ’ ಸುಮಾರು 10 ಲಕ್ಷ ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ನೀಡಿದೆ. ರಾಜ್ಯ ಸರ್ಕಾರ ಸುಮಾರು 30 ಲಕ್ಷ ಗ್ಯಾಸ್ ಸಂಪರ್ಕ ನೀಡಿದೆ. ಉಳಿದವರಿಗೆ ಸೀಎಂ ಅನಿಲ ಭಾಗ್ಯ ಯೋಜನೆಯಡಿ ಎಲ್ಪಿಜಿ ಸಂಪರ್ಕ ನೀಡಲಾಗುವುದು. “ರಾಜ್ಯದ ಬಡ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ನೀಡುವ ಉದ್ದೇಶಕ್ಕಾಗಿ ಮುಂದಿನ 15 ದಿನದೊಳಗೆ ಅರ್ಜಿ ಆಹ್ವಾನಿಸಲಾಗುವುದು” ಎಂದರು.ತನ್ನ ಸಚಿವಾಲಯ ಇದುವರೆಗೆ ಸುಮಾರು 10 ಲಕ್ಷ ಬೋಗಸ್ ಪಡಿತರ ಚೀಟಿ ರದ್ದುಗೊಳಿಸಿದ್ದು, ಇದರಿಂದ ಅನ್ನಭಾಗ್ಯದ ಸುಮಾರು 40,000 ಟನ್ ಅಕ್ಕಿ ಉಳಿತಾಯವಾಗಿದೆ ಎಂದು ಖಾದರ್ ತಿಳಿಸಿದರು.ಸುಮಾರು 24,000 ಪಡಿತರ ಚೀಟಿ ಅಂಗಡಿಗಳಲ್ಲಿ `ಸೇವಾ ಸಿಂಧು’ ಕೇಂದ್ರ ತೆರೆಯುವ ಪ್ರಕ್ರಿಯೆ ಮುಂದುವರಿದಿದ್ದು, ಭವಿಷ್ಯದಲ್ಲಿ ಪಡಿತರ ಅಂಗಡಿಯಲ್ಲಿ ತಿಂಗಳ ರೇಶನ್ ಜೊತೆಗೆ ಪಾನ್ ಮತ್ತು ಆಧಾರ್ ಕಾರ್ಡಿನಂತಹ ಇತರ ಸೇವೆಗಳು ಲಭ್ಯವಾಗಲಿವೆ ಎಂದು ಸಚಿವ ತಿಳಿಸಿದರು. ಈಗ ಬೆಂಗಳೂರಿನಲ್ಲಿ ಮಾತ್ರ ಇಂತಹ 10 ಕೇಂದ್ರಗಳಿವೆ.