ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ, ಕೊಚ್ಚಿಗೆ ಬದಲು ಮುಂಬೈಗೆ

ಮುಂಬೈ : ಸೌದಿ ಅರೇಬಿಯಾದ ದಮ್ಮಾಮ್ ನಗರದಿಂದ ಕೊಚ್ಚಿಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರು ವಿಮಾನದಲ್ಲಿಯೇ ಪ್ರಸವಿಸಿದ ನಂತರ  ವಿಮಾನವನ್ನು  ಕೊಚ್ಚಿಯ ಬದಲು ಮುಂಬೈಯಲ್ಲಿ ಇಳಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ತಮ್ಮ ವಿಮಾನದಲ್ಲಿ ಹುಟ್ಟಿದ ಈ ಗಂಡು ಮಗುವಿಗೆ ಉಡುಗೊರೆಯಾಗಿ ಜೆಟ್ ಏರ್ ವೇಸ್ ತನ್ನ ಎಲ್ಲಾ ವಿಮಾನಗಳಲ್ಲಿ ಉಚಿತ ಲೈಫ್ ಟೈಮ್ ಪ್ರಯಾಣ ಪಾಸ್ ಒದಗಿಸುವುದಾಗಿ ಹೇಳಿದೆ.

ವಿಮಾನದಲ್ಲಿ ಒಟ್ಟು 162 ಪ್ರಯಾಣಿಕರಿದ್ದರು. ಮಹಿಳೆಗೆ ಅವಧಿಪೂರ್ವ ಪ್ರಸವವಾಯಿತೆಂದು ಹೇಳಲಾಗಿದೆ. ವಿಮಾನವು ಭೂಮಿಯಿಂದ 35000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಮಹಿಳೆಗೆ  ಪ್ರಸವ ವೇದನೆ ಆರಂಭವಾಗಿತ್ತು. ವಿಮಾನದ ಪರಿಚಾರಿಕೆಯರ ಹಾಗೂ ವಿಮಾನದಲ್ಲಿದ್ದ ಪ್ಯಾರಾಮೆಡಿಕ್ ಒಬ್ಬರ ಸಹಾಯದಿಂದ ಮಹಿಳೆಯ ಹೆರಿಗೆ ಸುಸೂತ್ರವಾಗಿ ನಡೆಸಲಾಯಿತು.