ಮೇ 26ರಿಂದ ಭಾರತೀಯ ಮುಕ್ತ ಸರ್ಫಿಂಗ್ ಟೂರ್ನಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಭಾರತೀಯ ಸರ್ಫಿಂಗ್ ಒಕ್ಕೂಟವು ಸ್ಥಳೀಯ ಸರ್ಫಿಂಗ್ ಕ್ಲಬ್ಬುಗಳು, ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಸಹಕಾರದೊಂದಿಗೆ ಮೇ 26, 27 ಮತ್ತು 28ರಂದು ಸುರತ್ಕಲ್ ಸಮೀಪದ ಸಸಿಹಿತ್ಲು ಕಡಲತೀರದಲ್ಲಿ ಭಾರತೀಯ ಮುಕ್ತ ಸರ್ಫಿಂಗ್ ಸ್ಪರ್ಧೆಯನ್ನು ಸಂಘಟಿಸಿದೆ.

ಸ್ಪರ್ಧೆಗೆ ಸಂಬಂಧಿಸಿ ಪೂರ್ವಸಿದ್ಧತಾ ವಿಚಾರಗಳ ಬಗ್ಗೆ ಚರ್ಚಿಸಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಉಪ ಆಯುಕ್ತ ಕುಮಾರ್, ಸ್ಪರ್ಧೆಯು 16 ವರ್ಷದ ಕೆಳಗಿನ ವಿಭಾಗ, 14 ವರ್ಷದ ಕೆಳಗಿನ ವಿಭಾಗ ಮತ್ತು ಮುಕ್ತ ವಿಭಾಗವೆಂದು ಮೂರು ವಿಭಾಗಗಳಲ್ಲಿ ನಡೆಯಲಿದ್ದು,. ಸುಮಾರು 100 ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಸರ್ಫಿಂಗ್ ಪಂದ್ಯಾವಳಿಗೆ ಅಂದಾಜು ರೂ 70 ಲಕ್ಷ ಖರ್ಚಾಗುವ ಲೆಕ್ಕಾಚಾರವಿದೆ. ಪ್ರವಾಸೋದ್ಯಮ ಇಲಾಖೆಯು ರೂ 60 ಲಕ್ಷ ಬಿಡುಗಡೆ ಮಾಡಿದೆ.  ರೂ 10 ಲಕ್ಷ ಕೊರತೆಯನ್ನು ಪ್ರಾಯೋಜಕತ್ವದ ಮೂಲಕ ಭರಿಸುವ ಚಿಂತನೆಯಿದೆ ಎಂದು ಹೇಳಿದ್ದಾರೆ.