ಭಾರತೀಯ ಭಾಷಾ ಅಧ್ಯಯನ ಕಟ್ಟಡ ಶೀಘ್ರ ಕಾರ್ಯಾರಂಭ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕಣ್ಣೂರು ವಿಶ್ವವಿದ್ಯಾಲಯದ ಪ್ರಥಮ ಭಾರತೀಯ ಭಾಷಾ ಅಧ್ಯಯನ ವಿಭಾಗದ ನೂತನ ಕಟ್ಟಡ ಶೀಘ್ರ ಕಾರ್ಯಾರಂಭಗೊಳ್ಳಲಿದೆಯೆಂದು ವಿ ವಿ ಅಭಿವೃದ್ಧಿ ಅಧಿಕಾರಿ ಜೇಮ್ಸ್ ತಿಳಿಸಿದ್ದಾರೆ.

ವಾರ್ಸಿಟಿಯ ನೂತನ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅವರು ಇತ್ತೀಚೆಗೆ ಮಂಜೇಶ್ವರಕ್ಕೆ ಆಗಮಿಸಿ ಕಟ್ಟಡ ಹಾಗೂ ಕಟ್ಟಡ ನಿರ್ಮಾಣಗೊಂಡ ಸ್ಥಳದ ಅವಲೋಕನ ನಡೆಸಿದರು. ಸ್ಥಳಾವಕಾಶ ಸೌಲಭ್ಯವಿಲ್ಲದೆ ಸದ್ಯ ಕಿರು ಕೊಠಡಿಯಲ್ಲಿ ಕಾರ್ಯಾಚರಿಸುತ್ತಿರುವ ಕಣ್ಣೂರು ವಿ ವಿ ಪ್ರಥಮ ಭಾರತೀಯ ಭಾಷಾ ಅಧ್ಯಯನಾಂಗವನ್ನು ಮಂಜೇಶ್ವರದಲ್ಲಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಕನ್ನಡಿಗ ಪ್ರತಿನಿಧಿಗಳು ಎರಡು ವರ್ಷಗಳಿಂದ ಆಗ್ರಹಿಸುತ್ತಿದ್ದರು.

ಈ ಪ್ರಯತ್ನಕ್ಕೆ ಅಧಿಕಾರಿಗಳಿಂದ ಇದೀಗ ಸಕಾರಾತ್ಮಕ ಸ್ಪಂದನೆ ಲಭಿಸಿದೆ. ಯೋಜನಾ ಸ್ಥಳಕ್ಕೆ ತಲುಪಿ ಅಭಿವೃದ್ಧಿ ಅಧಿಕಾರಿ ಕನ್ನಡ ಸಮನ್ವಯ ಸಮಿತಿಯ ಯುವ ಬಳಗದ ಪದಾಧಿಕಾರಿಗಳನ್ನು ಭೇಟಿಯಾದರು. ಶೀಘ್ರದಲ್ಲೇ ಭಾಷಾ ಅಧ್ಯಯನ ಕೇಂದ್ರ ಹಾಗೂ ನೂತನ ಕೋರ್ಸ್ ಆರಂಭಿಸುವುದಾಗಿ ಅಭಿವೃದ್ಧಿ ಅಧಿಕಾರಿ ಭರವಸೆ ನೀಡಿದ್ದಾರೆ. ನೂತನ ಕಟ್ಟಡಕ್ಕೆ ರಸ್ತೆ ಲಭಿಸಿದರೆ ಕೂಡಲೇ ಕಟ್ಟಡ ಉದ್ಘಾಟಿಸುವುದಾಗಿ ವಿ ವಿ ಅಭಿವೃದ್ಧಿ ಅಧಿಕಾರಿ ಭರವಸೆ ನೀಡಿದ್ದಾರೆ.

ನೂತನ ಕಟ್ಟಡವನ್ನು ರೂ 1.42 ಕೋಟಿ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕನ್ನಡ, ತುಳು, ಮಲಯಾಳಂ, ಕೊಂಕಣಿ, ಉರ್ದು, ಬ್ಯಾರಿ, ಮರಾಠಿ ಭಾಷೆಗಳಿಗೆ ಸಂಬಂಧಪಟ್ಟ ಕೃತಿಗಳು, ಏಳು ಭಾಷಾ ಸಂಸ್ಕøತಿಗಳ ಆಚರಣೆಗಳು ಮತ್ತು ಉತ್ಸವಗಳ ಬಗ್ಗೆ ಬೆಳಕು ಚೆಲ್ಲುವ ಛಾಯಾಚಿತ್ರಗಳು ಮೊದಲಾದವುಗಳನ್ನು ಈ ಕೇಂದ್ರದಲ್ಲಿ ಸಜ್ಜುಗೊಳಿಸುವ ಯೋಜನೆ ಇದೆ.