`ಅಮೆರಿಕಾದವರಿಗೆ ಮಾತ್ರ ಉದ್ಯೋಗ’ ಎನ್ನುವ ಟ್ರಂಪ್ ಘೋಷಣೆಯಿಂದ ಕಂಗೆಟ್ಟ ಭಾರತದ ಐಟಿ ಕಂಪೆನಿಗಳು

ನವದೆಹಲಿ : ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ಶುಕ್ರವಾರ ಮಾಡಿರುವ ಭಾಷಣದಲ್ಲಿ `ಅಮೆರಿಕನ್ ಸರಕನ್ನೇ ಖರೀದಿಸಿ, ಅಮೆರಿಕದವರಿಗೇ ನೌಕರಿ ಕೊಡಿ’  ಎಂಬ ಹೊರಡಿಸಿರುವ ಘೋಷಣೆ ಭಾರತೀಯ ಐಟಿ ಉದ್ಯಮ ಕ್ಷೇತ್ರವನ್ನು ಕಂಗೆಡಿಸಿದೆ.

ಆದಾಗ್ಯೂ, ಅಮೆರಿಕವು ಭಾರತದೊಂದಿಗೆ ಅರ್ಥಪೂರ್ಣ ವ್ಯಾಪಾರ-ವಹಿವಾಟು ಭಾಂಧವ್ಯ ಹೊಂದುವ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಆಶಾವಾದ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಮಾರುಕಟ್ಟೆಯ ಶೇ 60ರಷ್ಟು ಐಟಿ ಅಗತ್ಯಗಳನ್ನು ಭಾರತ ಪೂರೈಸುತ್ತಿದೆ.  ಭಾರತೀಯ ತಂತ್ರಜ್ಞಾನ ಕ್ಷೇತ್ರವು ಅಮೆರಿಕ ಆರ್ಥಿಕತೆಗೆ ಅತ್ಯಧಿಕ ಕೊಡುಗೆ ನೀಡುತ್ತಿದೆ. ಉದ್ಯೋಗ ಕ್ಷೇತ್ರಕ್ಕೂ ಇದರಿಂದ ಸಾಕಷ್ಟು ಪ್ರಯೋಜನವಾಗುತ್ತಿದೆ.

“ಭಾರತೀಯ ಐಟಿ ಕಂಪೆನಿಗಳು ಅಮೆರಿಕದ 200 ನಗರಗಳಲ್ಲಿ ಹರಡಿಕೊಂಡಿವೆ. ಇವುಗಳು ಅಮೆರಿಕದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಯೋಗದಾನ ನೀಡಿವೆ. ಅಮೆರಿಕನ್ನರ ಸಹಿತ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿವೆ. ಇದರಿಂದ ಬಿಲಿಯನ್ ಡಾಲರ್ ತೆರಿಗೆ ಪಾವತಿಯೂ ಆಗುತ್ತಿದೆ. ಆದ್ದರಿಂದ ನಮ್ಮಿಂದ ಅಮೆರಿಕಕ್ಕೆ ತೆರಿಗೆ ಮತ್ತು ಉದ್ಯೋಗ ಲಭಿಸಿದಂತಾಗಿದೆ” ಎಂದು ಪ್ರಸಾದ್ ಹೇಳಿದ್ದಾರೆ.