ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆ ಮಾತ್ರ ಮಾನವ ಹಕ್ಕುಗಳನ್ನು ಸಮರ್ಥವಾಗಿ ನಿಭಾಯಿಸಿತ್ತು

ಕಾರ್ಗಿಲ್ ವೀರ ಮಲ್ಲಿಕ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಮಾತ್ರ ಮಾನವ ಹಕ್ಕುಗಳನ್ನು ಸಮರ್ಥವಾಗಿ ನಿಭಾಯಿಸಿದ ದೇಶವಾಗಿದೆ ಎಂದು ಭಾರತೀಯ ಸೇನೆಯ ನಿವೃತ್ತ ಮುಖ್ಯಸ್ಥ ವೇದಪ್ರಕಾಶ್ ಮಲ್ಲಿಕ್ ಹೇಳಿದ್ದಾರೆ.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದರ್ಭ `ಆಪರೇಶನ್ ವಿಜಯ ಕಾರ್ಯಾಚರಣೆ’ ನೇತೃತ್ವವನ್ನು ವಹಿಸಿದ್ದ ವೇದಪ್ರಕಾಶ್ ಅವರು ಅಂದು ಸೇನೆ ನಿರ್ವಹಿಸಿದ ಪರಿ ಅಭೂತಪೂರ್ವವಾದುದು ಎಂದರು.

ಪುರಭವನದಲ್ಲಿ ದ ಕ ಜಿಲ್ಲಾ ಮಾಜಿ ಸೈನಿಕರ ಸಂಘ ಮತ್ತು ವಿವಿಧ ಸಂಘಟನೆಗಳ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿದ್ದ ಆಪರೇಶನ್ ವಿಜಯ್ ಕಾರ್ಯಾಚರಣೆ ಕುರಿತು ಸಂವಾದ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಸೇನೆಯ ವಾಹನದ ಮುಂಭಾಗದಲ್ಲಿ ಕಾಶ್ಮೀರಿ ಯುವಕನೊಬ್ಬನನ್ನು ಕಟ್ಟಿ ಕರೆದೊಯ್ಯುತ್ತಿರುವ ಸೇನೆಯ ಅಮಾನವೀಯ ಕೃತ್ಯದ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ಇಂತಹ ಆರೋಪಗಳನ್ನು ಮಾಡುವ ಮುಂಚೆ ಭಾರತೀಯ ಸೇನೆಯ ಬಗ್ಗೆ ಸಮಗ್ರ ಅರಿವನ್ನು ಹೊಂದಿರಬೇಕಾಗುತ್ತದೆ. ಸೈನಿಕರು ಅಲ್ಲಿ ಎಂತಹ ಸನ್ನಿವೇಶದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ ಅನ್ನುವುದು ಅರಿತುಕೊಳ್ಳಬೇಕು. ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸುತ್ತಿದ್ದರೆ ಅದನ್ನು ಹೇಗೆ ತಡೆಯಬೇಕು ಅನ್ನೊದನ್ನು ಸೈನಿಕರು ತಮ್ಮದೇ ರೀತಿಯಲ್ಲಿ ಮಾಡಿತೋರಿಸಿದ್ದಾರೆ. ಯಾಕೆಂದರೆ ನಮ್ಮ ಭೂಮಿಯನ್ನು, ನಮ್ಮ ಜನರನ್ನು ರಕ್ಷಣೆ ಮಾಡಲು ಅವರಿಗೆ ಇದಕ್ಕಿಂತ ಬೇರೆ ದಾರಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ” ಎಂದರು.

ಕಾಶ್ಮೀರಿ ಪ್ರತ್ಯೇಕತಾವಾದಿಗಳ ಬಗ್ಗೆ ಮಾತನಾಡಿದ ಅವರು, “ಕಾಶ್ಮೀರದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕಲು ಕಾರಣರಾದ ಪ್ರತ್ಯೇಕತಾವಾದಿಗಳನ್ನು ಮಟ್ಟ ಹಾಕಲು ಜೈಲಿಗೆ ಕಳುಹಿಸುವುದೊಂದೇ ದಾರಿ” ಎಂದರು. “ನನಗೆ ಅಧಿಕಾರವಿರುತ್ತಿದ್ದಲ್ಲಿ ನಾನು ಅವರನ್ನು ಬಂಧಿಸಿ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ತರುತ್ತಿದ್ದೆ” ಎಂದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ವಾಯುಸೇನೆ, ಭೂಸೇನೆ ಮತ್ತು ನೌಕಾ ಸೇನೆಯ ಶೌರ್ಯ ಅಭೂತಪೂರ್ವ ಎಂದರು.