ಚೀನಾವನ್ನು ಹಿಂದಿಕ್ಕುತ್ತಿರುವ ಭಾರತ

ವಾಯು ಮಾಲಿನ್ಯ

ಕಳೆದ ವಾರ ರಾಜಧಾನಿ ದೆಹಲಿಯಲ್ಲಿ ಉಂಟಾದ ವಾಯು ಮಾಲಿನ್ಯಕ್ಕೆ ಹೆದರಿ ನಾಲ್ಕು ಸಾವಿರ ಶಾಲೆಗಳನ್ನು ಮುಚ್ಚಲಾಯಿತು. ವಾಯು ಮಾಲಿನ್ಯ ಮತ್ತು ಗಾಳಿಯ ಗುಣಮಟ್ಟದಲ್ಲಿನ ಕುಸಿತ ಆಡಳಿತ ವ್ಯವಸ್ಥೆ ಮತ್ತು ಜನಸಾಮಾನ್ಯರನ್ನು ಕಂಗೆಡಿಸಿದೆ. ಮತ್ತೊಂದೆಡೆ ವಾಯು ಮಾಲಿನ್ಯ ಉಂಟುಮಾಡುವ ಮಾನವ ನಿರ್ಮಿತ ಗಂಧಕ ದ್ವಿ ಆಕ್ಸೈಡ್ (ಎಸ್ ಒ2) ಪ್ರಮಾಣವನ್ನು ಸೃಷ್ಟಿಸುವಲ್ಲಿ ಭಾರತ ಚೀನಾ ದೇಶವನ್ನೂ ಹಿಂದಿಕ್ಕಿದೆ.

ಮೇರಿಲ್ಯಾಂಡ್ ವಿಶ್ವಿದ್ಯಾಲಯದ ಅಧ್ಯಯನವೊಂದರ ಅನುಸಾರ ಚೀನಾದ ಎಸ್ ಒ2  ಪ್ರಮಾಣ  2007ರ ನಂತರದಲ್ಲಿ ಶೇ 75ರಲ್ಲಿ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಭಾರತದಲ್ಲಿ ಈ ಪ್ರಮಾಣ ಶೇ 50ರಷ್ಟು ಹೆಚ್ಚಾಗಿದೆ. 2010ರಲ್ಲಿ ಭಾರತ ಅಮೆರಿಕವನ್ನು ಹಿಂದಿಕ್ಕಿ ದಾಖಲೆ ಸ್ಥಾಪಿಸಿತ್ತು. ಕಲ್ಲಿದ್ದಲು ಅತ್ಯಧಿಕವಾಗಿ ಬಳಸುವ ರಾಷ್ಟ್ರಗಳ ಪೈಕಿ ಎರಡನೆ ಸ್ಥಾನ ಗಳಿಸಿತ್ತು. ಕಲ್ಲಿದ್ದಲು ಬಳಕೆಯಿಂದ ಗಂಧಕದ ಪ್ರಮಾಣ ಹೆಚ್ಚಾಗಿದ್ದು, ಕಲ್ಲಿದ್ದಲು ದಹಿಸುವುದರಿಂದ ಗಂಧಕ ದ್ವಿ ಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತದೆ. 1952ರಲ್ಲಿ ಲಂಡನ್ ನಗರದಲ್ಲಿ ಇದರಿಂದಲೇ ಒಂದೂವರೆ ಲಕ್ಷ ಜನರು ಬಲಿಯಾಗಿದ್ದರು.

2005-2016ರ ಅವಧಿಯಲ್ಲಿ ಚೀನಾ ಮತ್ತು ಭಾರತದಲ್ಲಿ ಎಸ್ ಒ2 ಪ್ರಮಾಣವನ್ನು ಅಳತೆ ಮಾಡಿರುವ ನಾಸಾ ಉಪಗ್ರಹದ ಮಾಹಿತಿಯ ಅನುಸಾರ ಚೀನಾದಲ್ಲಿ ಈ ಪ್ರಮಾಣ ಸತತವಾಗಿ ಕಡಿಮೆಯಾಗುತ್ತಿದ್ದು ಭಾರತದಲ್ಲಿ ಹೆಚ್ಚಾಗುತ್ತಿದೆ. ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆಯ ಘಟಕಗಳನ್ನು ಸ್ಥಾಪಿಸುವುದೇ ಎಸ್ ಒ2 ಪ್ರಮಾಣದ ಹೆಚ್ಚಳಕ್ಕೆ ಕಾರಣ ಎಂದು ನಾಸಾ ಮೂಲಗಳು ತಿಳಿಸಿವೆ. ಆದರೆ ಎಸ್ ಒ2 ಮಾಲಿನ್ಯ ಉಂಟಾಗುವ ಸ್ಥಳಗಳಲ್ಲಿ ಜನಸಾಂದ್ರತೆ ಭಾರತದಲ್ಲಿ ಚೀನಾಗಿಂತಲೂ ಕಡಿಮೆ ಇರುವುದು ಸಮಾಧಾನಕರ ಅಂಶ. ಭಾರತದಲ್ಲಿ 33 ದಶಲಕ್ಷ ಜನರು ಎಸ್ ಒ2 ಮಾಲಿನ್ಯಕ್ಕೆ ಸಮೀಪದಲ್ಲೇ ಇದ್ದು ಬಲಿಯಾಗುತ್ತಿದ್ದಾರೆ. ಚೀನಾದಲ್ಲಿ 99 ದಶಲಕ್ಷ ಜನರು ತುತ್ತಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚೀನಾ ವಾಯುಮಾಲಿನ್ಯ ನಿಯಂತ್ರಿಸಲು ಕೆಲವು ಕಠಿಣ ನಿಯಮಗಳನ್ನು ಪಾಲಿಸುತ್ತಿದೆ. ಕಲ್ಲಿದ್ದಲು ಸ್ಥಾವರಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ವಾಯುಮಾಲಿನ್ಯ ತಗ್ಗಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಸಾಧನೆ ಕಳಪೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ನಿರ್ಮಿಸುತ್ತಿದೆ. ನವೀಕೃತ ಇಂಧನವನ್ನು ಭಾರತ ಸರ್ಕಾರ ಹೆಚ್ಚು ಪ್ರೋತ್ಸಾಹಿಸುತ್ತಿದ್ದರೂ ಕಲ್ಲಿದ್ದಲು ಬಳಕೆಯ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.