ನ್ಯೂಜಿಲೆಂಡ್ ಸೋಲಿಸಿ ಭಾರತ ಸೆಮಿಫೈನಲ್ಲಿಗೆ

ಐಸಿಸಿ ಮಹಿಳಾ ವಿಶ್ವಕಪ್

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಮಿಥಾಲಿ ಭರ್ಜರಿ ಶತಕ

ಸತತ ಎರಡು ಪಂದ್ಯಗಳಲ್ಲಿ ಸೋತು ನಾಕೌಟ್ ಹಂತ ಪ್ರವೇಶಿಸುವುದೇ ಅನುಮಾನವೆನಿಸಿದ್ದ ಭಾರತದ ವನಿತೆಯರು,  ಶನಿವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಪ್ರಬಲ ನ್ಯೂಜಿಲೆಂಡ್ ವಿರುದ್ಧ 182 ರನ್ ಭರ್ಜರಿ ಜಯ ಗಳಿಸುವ ಮೂಲಕ ಸೆಮಿಫೈನಲ್ ಎಂಟ್ರಿಯಾಗಿದ್ದಾರೆ.  ಬ್ಯಾಟಿಂಗ್ ಹಾಗೂ ಬೌಲಿಂಗಿನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಮಿಥಾಲಿ ಪಡೆ ನ್ಯೂಜಿಲೆಂಡ್ ತಂಡದ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಅಧಿಕಾರಯುತವಾಗಿಯೇ ಸೆಮಿಫೈನಲ್ ಪ್ರವೇಶಿಸಿದೆ.

ಲಂಡನ್ ಡರ್ಬಿ ಕೌಂಟಿ ಗ್ರೌಂಡಿನಲ್ಲಿ ನಡೆದ ಈ ಪಂದ್ಯ ಲೀಗ್ ಕೊನೆಯ ಪಂದ್ಯವಾದರೂ ಕ್ವಾರ್ಟರ್ ಫೈನಲ್ಲಿನಷ್ಟೇ ಮಹತ್ವದಾಗಿತ್ತು. ಉಭಯತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಗೆಲುವಿನ ಲಯ ಕಳೆದುಕೊಂಡಿದ್ದ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ ವಾಗಿತ್ತು. ಸೆಮಿಫೈನಲ್ ಕನಸ್ಸಿನಲ್ಲೇ ಈ ಪಂದ್ಯವನ್ನು ಆಡಿದ ಭಾರತ ಸೋಲಿನ ಸರಪಳಿಯಿಂದ ಹೊರಬಂದು ಅದ್ಭುತ ಗೆಲುವನ್ನು ತನ್ನದಾಗಿಸಿಕೊಂಡಿತು.

ನ್ಯೂಜಿಲೆಂಡ್ ತಂಡದ ನಾಯಕಿ ಸುಝೀ ಬೇಟ್ಸ್  ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.  ಸುಝೀ ಬೇಟ್ಸ್  ಅವರ ನಿರ್ಧಾರ ಆರಂಭದಲ್ಲಿ ಸಮರ್ಥನಿಯವಾಗಿತ್ತು.  ಭಾರತದ ಆರಂಭಿಕ ಆಟಗಾರ್ತಿಯರಾದ  ಸ್ಮೃತಿ ಮಂಧಾನ  ಹಾಗೂ ಪೂನಮ್ ರಾವತ್ ಅವರ ವಿಕೆಟ್ ಕೇವಲ 21 ರನ್ನಿಗೆ ಕಳೆದು ಕೊಂಡಿತು. ಈ ಸಂಕಷ್ಟಮಯ ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿದ ನಾಯಕಿ ಮಿಥಾಲಿರಾಜ್ ತಂಡಕ್ಕೆ ಆಪತ್ಭಾಂದವರಾದರು.

ಮಿಥಾಲಿ ಶತಕ

 ಹಿಂದಿನ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ  69 ರನ್ ಬಾರಿಸಿದ್ದ ಮಿಥಾಲಿರಾಜ್, ಏಕದಿನ ಕ್ರಿಕೆಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ವಿಶ್ವದಾಖಲೆ ಬರೆದಿದ್ದರು. ಈ ಪಂದ್ಯದಲ್ಲೂ ತಂಡ ಕುಸಿತದ ಹಾದಿಯಲ್ಲಿದ್ದಾಗ ಮಿಥಾಲಿರಾಜ್ ಮೂರನೇ ವಿಕೆಟಿಗೆ ಹರ್ಮನ್ ಪ್ರೀತ್ ಕೌರ್ ಅವರೊಂದಿಗೆ ಚೇತರಿಕೆಯ ಆಟವಾಡಿದರು.  ಮಿಥಾಲಿ-ಹರ್ಮನ್ ಜೋಡಿ 132 ರನ್ ಜೊತೆಯಾಟ ನೀಡಿದರು.

ಉತ್ತಮವಾಗಿ ಆಡುತ್ತಿದ್ದ ಹರ್ಮನ್ ಪ್ರೀತ್ ಕೌರ್ 90 ಎಸೆತ ಗಳಲ್ಲಿ 60 ರನ್ ಗಳಿಸಿ ಔಟಾದ ನಂತರ ಮಿಥಾಲಿ ಐದನೇ ವಿಕೆಟಿಗೆ ಕನ್ನಡತಿ  ವೇದಾ ಕೃಷ್ಣಮೂರ್ತಿ ಜೊತೆಗೂಡಿ 108 ರನ್ ಸೇರಿಸಿದರು. ನ್ಯೂಜಿಲೆಂಡ್ ಎಸೆತಗಾರ್ತಿಯರನ್ನು ಸಂಯಮದಿಂದಲೆ ಎದುರಿಸಿದ  ಮಿಥಾಲಿರಾಜ್ ಆಕರ್ಷಕ ಶತಕ ಸಿಡಿಸಿದರು. 123 ಎಸೆತಗಳನ್ನು ಎದುರಿಸಿದ ಮಿಥಾಲಿ ತನ್ನ ಅಮೋಘ ಆಟದಿಂದ 11 ಬೌಂಡರಿಗಳ ನೆರವಿನಿಂದ 109 ರನ್ ಬಾರಿಸಿದರು.184 ಪಂದ್ಯಗಳಲ್ಲಿ ಇದು ಮಿಥಾಲಿರಾಜ್ ಬಾರಿಸಿದ ಆರನೇ ಶತಕವಾಗಿದೆ.

ನಾಯಕಿ ಮಿಥಾಲಿರಾಜ್ ಅವರಿಗೆ ಉತ್ತಮ ಸಾಥ್ ನೀಡಿದ ವೇದಾ  ಹೊಡಿಬಡಿಯ ಆಟವನ್ನು ಈ ಪಂದ್ಯದಲ್ಲಿ ಪ್ರದರ್ಶಿಸಿದರು. ಕೇವಲ 45 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್  ಸಹಾಯದಿಂದ ವೇದಾ 70 ರನ್ ಗಳನ್ನು ಹೊಡೆದರು.

ಮಿಥಾಲಿ, ಹರ್ಮನ್ ಹಾಗೂ ವೇದಾ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 265 ರನ್ನುಗಳ ಬೃಹತ್ ಮೊತ್ತವನ್ನೇ ಸೇರಿಸಿತು.

ಮಿಥಾಲಿ ಪಡೆ ನೀಡಿದ 265 ರನ್ ಗಳ ಟಾರ್ಗೆಟ್ ನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಮುಗ್ಗರಿಸಿತು. ತಂಡದ ಮೊತ್ತ 7 ರನ್ ಆಗುವಷ್ಟರಲ್ಲೇ ಆರಂಭಿಕ ಆಟಗಾರ್ತಿಯರಿಬ್ಬರನ್ನು ಭಾರತದ ವೇಗಿಗಳು  ಪೆವಿಲಿಯನ್ನಿಗೆ ಕಳುಹಿಸಿದರು. ನಂತರ ದಾಳಿಗಿಳಿದ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ನ್ಯೂಜಿಲೆಂಡ್ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಕೇವಲ 15 ರನ್ನಿಗೆ 5 ವಿಕೆಟ್ ಪಡೆದು ರಾಜೇಶ್ವರಿ ಬೌಲಿಂಗಿನಲ್ಲಿ ಮಿಂಚಿದರು. ಭಾರತದ ಶಿಸ್ತುಬದ್ದ ಬೌಲಿಂಗಿಗೆ ಬೆಚ್ಚಿದ ನ್ಯೂಜಿಲೆಂಡ್ ಕೇವಲ 79 ರನ್ನುಗಳಿಗೆ ಆಲೌಟ್ ಆಗಿ 186 ರನ್ ಗಳ ಅಂತರದಲ್ಲಿ ಮಿಥಾಲಿ ಪಡೆಗೆ ಶರಣಾಯಿತು.

ಶತಕದೊಂದಿಗೆ ಭಾರತ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ನಾಯಕಿ ಮಿಥಾಲಿರಾಜ್ ಪಂದ್ಯಶ್ರೇಷ್ಠೆ ಪ್ರಶಸ್ತಿಯಿಂದ ಪುರಸ್ಕೃತರಾದರು.