ಭಯೋತ್ಪಾದನೆ ವಿಷಯದಲ್ಲಿ ಶೀಘ್ರವೇ ಭಾರತ-ಚೀನಾ ಚರ್ಚೆ

ನವದೆಹಲಿ : ಭಯೋತ್ಪಾದನಾ ಚಟುವಟಿಕೆ ವಿರುದ್ಧ ಹೋರಾಟದ ವಿಷಯದಲ್ಲಿ ಕೆಲವು ಸಮಯದಿಂದ ನೆನೆಗುದಿಗೆ ಬಿದ್ದಿರುವ ದ್ವಿಪಕ್ಷೀಯ ಮಾತುಕತೆಗೆ ಭಾರತ ಮತ್ತು ಚೀನಾ ಮುಂದಿನ ವಾರ ಚಾಲನೆ ನೀಡುವ ಸಾಧ್ಯತೆ ಇದೆ.

ಫೆ 22ರಂದು ಬೀಜಿಂಗಿನಲ್ಲಿ ಚೀನಾ ವಿದೇಶ ಸಚಿವ ಝಾಂಗ್ ಯೆಸೂೈಯನ್ನು ಭೇಟಿಯಾಗಲಿರುವ ಭಾರತ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಭಯೋತ್ಪಾದನೆ ಹತ್ತಿಕ್ಕುವ ವಿಷಯದಲ್ಲಿ ಎರಡೂ ದೇಶಗಳ ಮಧ್ಯೆ ಆರು ತಿಂಗಳ ಬಳಿಕ ಇಂತಹದೊಂದು ಮಹತ್ವದ ಸಭೆ ನಡೆಲಿದೆ. ಈ ವಿಷಯವಾಗಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಕಳೆದ ವರ್ಷದ ಆಗಸ್ಟಿನಲ್ಲಿ ಚರ್ಚಿಸಿದ್ದರು.

ಜೈಶಂಕರ್ ಮತ್ತು ಝಾಂಗ್ ಎರಡೂ ರಾಷ್ಟ್ರಗಳ ಮಧ್ಯೆ ಘರ್ಷಣೆಗೆ ಕಾರಣವಾಗಿರುವ ವಿಷಯಗಳ ಸಹಿತ ಇತರ ಕೆಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ.