ಕರ್ತವ್ಯನಿರತ ಪಂ ಸಿಬ್ಬಂದಿ ಮೇಲೆ ದೌರ್ಜನ್ಯ ; ಉಪಾಧ್ಯಕ್ಷ ವಿರುದ್ಧ ಕೇಸು

ಸಾಂದರ್ಭಿಕ ಚಿತ್ರ

ಬೆಳ್ತಂಗಡಿ : ಇಂದಬೆಟ್ಟು ಗ್ರಾಮ ಪಂಚಾಯತಿನ ಪರಿಶಿಷ್ಟ ಜಾತಿಗೆ ಸೇರಿದ ಕರ್ತವ್ಯನಿರತ ಸಿಬ್ಬಂದಿಯೊಬ್ಬರಿಗೆ ಇದೇ ಗ್ರಾಮ ಪಂಚಾಯತಿನ ಉಪಾಧ್ಯಕ್ಷ ನೀರು ಬಿಡುವ ವಿಚಾರದಲ್ಲಿ ತಗಾದೆ ಎತ್ತಿ ಹಲ್ಲೆಗೈದನೆಂದು ಆರೋಪಿಸಲಾಗಿದೆ.  ಇಂದಬೆಟ್ಟು ಗ್ರಾಮ ಪಂಚಾಯತಿನ ಸ್ವಚ್ಛತಾ ಸಿಬ್ಬಂದಿ ಪರಿಶಿಷ್ಟ ಜಾತಿಯ ಸಂಜೀವ ಎಂಬವರಿಗೆ ಇದೇ ಪಂಚಾಯತಿನ ಉಪಾಧ್ಯಕ್ಷ ಇಬ್ರಾಹಿಂ ಎಂಬಾತ ನೀರು ಬಿಡುವ ವಿಚಾರದಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಪಂಚಾಯತಿನ ಸ್ವಚ್ಛತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಜೀವ ಅವರನ್ನು ವಾರದ ಹಿಂದೆ ತಾತ್ಕಾಲಿಕವಾಗಿ ನೀರು ಸರಬರಾಜು ಮಾಡುವ ಕೆಲಸ ವಹಿಸಿಕೊಡಲಾಗಿತ್ತು. ಗುರುವಾರ ಸಂಜೆ ಸುಮಾರು 5 ಗಂಟೆ ಹೊತ್ತಿಗೆ ಪಂಚಾಯತಿ ಉಪಾಧ್ಯಕ್ಷ ಇಬ್ರಾಹಿಂ ಅವರು ಸಿಬ್ಬಂದಿ ಸಂಜೀವ ಮೊಬೈಲಿಗೆ ಕರೆ ಮಾಡಿ ಈಗಲೇ ಜನತಾ ಕಾಲೊನಿಗೆ ಬರುವಂತೆ ಕರೆದು 5 ಸೆಂಟ್ಸ್ ಕಾಲೊನಿಗೆ ಮೊದಲೇ ನೀರು ಬಿಟ್ಟಿದ್ದರೂ “ವಾಪಾಸು ನೀರು ಬಿಡು, ಬಿಡದಿದ್ದರೆ ನಿನಗೆ ಬುದ್ಧಿ ಕಲಿಸಲು ಗೊತ್ತು” ಎಂದು ತನ್ನ ಅಂಬಾಸಿಡರ್ ಕಾರು ಚಲಾಯಿಸಿ ಡಿಕ್ಕಿ ಹೊಡೆಯಲು ಬಂದಂತೆ ವೇಗವಾಗಿ ಬಂದು ಆತಂಕ ಹುಟ್ಟಿಸಿದ್ದು, ಸಂಜೀವ ಅವರು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಪಂಚಾಯತ್ ಉಪಾಧ್ಯಕ್ಷನಿಂದ ದೌರ್ಜನ್ಯಕ್ಕೊಳಗಾದ ಸಿಬ್ಬಂದಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಂತೆ ಪರಿಶಿಷ್ಟರ ಮೇಲಿನ ದೌರ್ಜನ್ಯ ವಿರೋಧಿ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ.

 

LEAVE A REPLY