ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ : ಪಾಕಿಸ್ತಾನಕ್ಕಿಂತಲೂ ಭಾರತ ಹಿಂದೆ

ವಿಶೇಷ ವರದಿ

ಅಭಿವೃದ್ಧಿ ಒಳಗೊಳ್ಳುವಿಕೆ ಸೂಚ್ಯಂಕವನ್ನು 12 ರೀತಿಯ ಸಾಧನೆಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಭಾರತ ಈ ಸೂಚ್ಯಂಕದ ಪಟ್ಟಿಯಲ್ಲಿ 60ನೆಯ ಸ್ಥಾನದಲ್ಲಿದ್ದು 79 ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಚೀನಾ ಮತ್ತು ಪಾಕಿಸ್ತಾನಕ್ಕಿಂತಲೂ ಹಿಂದಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ವರದಿಯಲ್ಲಿ ಹೇಳಲಾಗಿದೆ.

ವೇದಿಕೆ ಸಿದ್ಧಪಡಿಸಿರುವ 2017ರ ಅಭಿವೃದ್ಧಿ ಒಳಗೊಳ್ಳುವಿಕೆಯ ವರದಿಯನ್ನು ಕಳೆದ ಸೋಮವಾರ ಬಿಡುಗಡೆ ಮಾಡಲಾಗಿದ್ದು ಅನೇಕ ರಾಷ್ಟ್ರಗಳು ಆರ್ಥಿಕ ಅಭಿವೃದ್ಧಿಗೆ ಇರುವ ಅವಕಾಶಗಳನ್ನು ಬಳಸಿಕೊಳ್ಳುವುದರಲ್ಲಿ ವಿಫಲವಾಗುತ್ತಿವೆ  ಎಂದು ಹೇಳಿದೆ.

ದಶಕಗಳ ಕಾಲ ಆಡಳಿತ ವ್ಯವಸ್ಥೆಗಳಲ್ಲಿ ಅಳವಡಿಸಿಕೊಂಡು ಬಂದಿರುವ ಅಭಿವೃದ್ಧಿ ಮಾರ್ಗದ ಸಾಧನ ಮತ್ತು ವಿಧಾನಗಳಲ್ಲಿ ಬದಲಾವಣೆ ಅತ್ಯಗತ್ಯವಾಗಿದ್ದು ಇದು ಸಾಧ್ಯವಾಗದೆ ಅನೇಕ ದೇಶಗಳು ಬಡತನ ನಿವಾರಣೆಯಲ್ಲಿ ವಿಫಲವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜಿಡಿಪಿ ಒಂದನ್ನೇ ಅವಲಂಬಿಸುವ ಬದಲು ಆರ್ಥಿಕ ಅಭಿವೃದ್ಧಿಯನ್ನು ಅಳೆಯಲು ಸಮಗ್ರ ಮಾಪಕ ಸೂತ್ರಗಳನ್ನು ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಒಳಗೊಳ್ಳುವ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದ್ದು ಇದರಲ್ಲಿ ಅಭಿವೃದ್ಧಿ ಮತ್ತು ಸಮಾನತೆಯ ನೆಲೆಯಲ್ಲಿ ಒಳಗೊಳ್ಳುವಿಕೆಯನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ.

79 ಅಭಿವೃದ್ಧಿ ಶೀಲ ರಾಷ್ಟ್ರಗಳ ಪೈಕಿ ಲಿಥುವೇನಿಯಾ ಪ್ರಥಮ ಸ್ಥಾನದಲ್ಲಿದ್ದು ಅಜರ್ಬೇಜಾನ್ ಮತ್ತು ಹಂಗೆರಿ ಕ್ರಮವಾಗಿ ಎರಡನೆ ಮತ್ತು ಮೂರನೆಯ ಸ್ಥಾನದಲ್ಲಿವೆ. ಚೀನಾ 15ನೆಯ ಸ್ಥಾನ, ನೇಪಾಲ್ 27, ಬಾಂಗ್ಲಾದೇಶ 36 ಮತ್ತು ಪಾಕಿಸ್ತಾನ 52ನೆಯ ಸ್ಥಾನ ಪಡೆದಿದ್ದು ಭಾರತ 60ನೆಯ ಸ್ಥಾನ ಪಡೆದಿದೆ.

ಬ್ರಿಕ್ ರಾಷ್ಟ್ರಗಳಾದ ರಷ್ಯಾ ಮತ್ತು ಬ್ರೆಜಿಲ್ ಕ್ರಮವಾಗಿ 13 ಮತ್ತು 30ನೆಯ ಸ್ಥಾನದಲ್ಲಿವೆ.  ಮೊದಲ ಹತ್ತು ಸ್ಥಾನಗಳನ್ನು ಅಲಂಕರಿಸಿರುವ ರಾಷ್ಟ್ರಗಳಲ್ಲಿ ಪ್ರಮುಖವಾಗಿ ಪೋಲೆಂಡ್ 4, ರೊಮೇನಿಯಾ 5, ಉರುಗ್ವೇ 6, ಲಾಟ್ವಿಯಾ 7, ಪನಾಮ 8,  ಕೋಸ್ಟರಿಕಾ 9 ಮತ್ತು ಚಿಲಿ  10ನೆಯ ಸ್ಥಾನ ಪಡೆದಿವೆ.

ಕೇವಲ 3.38 ಅಂಕಗಳನ್ನು ಗಳಿಸುವ ಮೂಲಕ ಭಾರತ 60ನೆಯ ಸ್ಥಾನ ಪಡೆದಿದ್ದು, ದೇಶದ ಜಿಡಿಪಿ ಪ್ರಮಾಣ ವಿಶ್ವದ ಮೊದಲ ಹತ್ತು ರಾಷ್ಟ್ರಗಳಲ್ಲಿ ಒಂದಾಗಿದ್ದರೂ ಈ ಸೂಚ್ಯಂಕದಲ್ಲಿ ಹಿನ್ನಡೆ ಸಾಧಿಸಿದೆ.

ಭಾರತದಲ್ಲಿ ಬಡತನ ಕಡಿಮೆಯಾಗುತ್ತಿದ್ದರೂ ಜಿಡಿಪಿ ಮತ್ತು ಸಾಲದ ಅನುಪಾತ ಹೆಚ್ಚಾಗುತ್ತಿದೆ. ಇದರಿಂದ ಸರ್ಕಾರದ ಖರ್ಚು ವೆಚ್ಚಗಳ ಸ್ಥಿರತೆ ಪ್ರಶ್ನಾರ್ಹವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮುಂದುವರೆದ ರಾಷ್ಟ್ರಗಳ ಪೈಕಿ ನಾರ್ವೇ ಮೊದಲ ಸ್ಥಾನದಲ್ಲಿದ್ದು ಲಕ್ಷಂಬರ್ಗ್ 2, ಸ್ವಿಜರ್‍ಲೆಂಡ್ 3, ಐಸ್‍ಲೆಂಡ್ 4, ಡೆನ್ಮಾರ್ಕ್ 5, ಸ್ವೀಡನ್ 6, ನೆದರ್ಲೆಂಡ್ 7, ಆಸ್ಟ್ರೇಲಿಯಾ 8, ನ್ಯೂಜಿಲೆಂಡ್ 9 ಮತ್ತು  ಆಸ್ಟ್ರಿಯಾ 10ನೆಯ ಸ್ಥಾನದಲ್ಲಿವೆ.

ಆದರೆ ಬಡತನದ ಪ್ರಮಾಣದಲ್ಲಿ ತೀವ್ರವಾದ ವ್ಯತ್ಯಾಸ ಇರುವುದರಿಂದ ಮುಂದುವರೆದ ರಾಷ್ಟ್ರಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳೊಡನೆ ಹೋಲಿಸಲಾಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ತೆರಿಗೆ ಪದ್ಧತಿಯನ್ನು ಸುಧಾರಿಸುವ ಮೂಲಕ ಮೂಲಭೂತ ಸೌಕರ್ಯಗಳು, ಆರೋಗ್ಯ ರಕ್ಷಣೆ, ಮೂಲ ಸವಲತ್ತುಗಳು ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳ ಒದಗಿಸಬಹುದು ಎಂದು ವರದಿ ಹೇಳಿದೆ.

ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಮಾರ್ಗದಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ದೇಶಗಳು ಆಸಕ್ತಿ ವಹಿಸುತ್ತಿದ್ದರೂ ಸಮರ್ಪಕವಾಗಿ ಕಾರ್ಯಗತವಾಗುತ್ತಿಲ್ಲ ಎಂದು ವಿಶ್ವ ಆರ್ಥಿಕ ವೇದಿಕೆಯ ಸದಸ್ಯ ರಿಚರ್ಡ್ ಸಮನ್ಸ್ ಹೇಳಿದ್ದಾರೆ.

ಸಾಮಾಜಿಕ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಮೂಲಕ ಆರ್ಥಿಕ ನೀತಿಗಳನ್ನು ಹೆಚ್ಚು ಕಾರ್ಯಶೀಲವನ್ನಾಗಿ ರೂಪಿಸಬೇಕಾಗುತ್ತದೆ. ಹಾಗಾದಲ್ಲಿ ಮಾತ್ರ ಜನಸಾಮಾನ್ಯರ ಜೀವನ ಮಟ್ಟದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.