ನ್ಯಾಯಯುತವಾದ ನ್ಯಾಯದ ಶೋಧದಲ್ಲಿ…

ಆನಂದ್ ಬಕ್ಷಿ ಬರೆದ ಹಾಡೊಂದರಲ್ಲಿ, ಕ್ಷಮಿಸುವುದಕ್ಕಿಂತಲೂ ಶಿಕ್ಷೆ ವಿಧಿಸುವುದೇ ಅನುಕೂಲಕರ ಎಂಬಂತಹ ಪರಿಸ್ಥಿತಿಯಲ್ಲಿ ನ್ಯಾಯಸ್ಥಾನವನ್ನು ಅಲಂಕರಿಸುವುದು ಎಷ್ಟು ಕಷ್ಟ ಎಂದು ಕಾವ್ಯಾತ್ಮಕವಾಗಿ ಹೇಳುತ್ತಾರೆ.

  • ಶೇಖರ್ ಗುಪ್ತ

    ಮಾಜಿ ಪ್ರಧಾನ ಸಂಪಾದಕರು, ಇಂಡಿಯನ್ ಎಕ್ಸಪ್ರೆಸ್

ಬೇಸರ ತರಿಸುವ ರಾಜಕೀಯ ಸಂವಾದದ ನಡುವೆ ಕ್ರಿಕೆಟ್ ನುಸುಳುವಂತೆ ನ್ಯಾಯಾಂಗದ ಬಗ್ಗೆ ಮಾತನಾಡುವಾಗ ಸಿನಿಮಾ ಸಹ ನುಸುಳುತ್ತದೆ. 1969ರ `ದೋ ಭಾಯಿ’ ಚಿತ್ರದಲ್ಲಿ ಆಶೋಕ್ ಕುಮಾರ್ ನ್ಯಾಯಾಧೀಶರಾಗಿಯೂ ಜಿತೇಂದ್ರ ಪೊಲೀಸ್ ಅಧಿಕಾರಿಯಾಗಿಯೂ ನಟಿಸಿದ್ದಾರೆ. ಅಣ್ಣತಮ್ಮಂದಿರ ಈ ಕಥಾವಸ್ತು ಹೊಸತೇನಲ್ಲ. ಆದರೆ ಈ ಚಿತ್ರದಲ್ಲಿ ಆನಂದ್ ಬಕ್ಷಿ ಬರೆದ ಹಾಡೊಂದರಲ್ಲಿ, ಕ್ಷಮಿಸುವುದಕ್ಕಿಂತಲೂ ಶಿಕ್ಷೆ ವಿಧಿಸುವುದೇ ಅನುಕೂಲಕರ ಎಂಬಂತಹ ಪರಿಸ್ಥಿತಿಯಲ್ಲಿ ನ್ಯಾಯಸ್ಥಾನವನ್ನು ಅಲಂಕರಿಸುವುದು ಎಷ್ಟು ಕಷ್ಟ ಎಂದು ಕಾವ್ಯಾತ್ಮಕವಾಗಿ ಹೇಳುತ್ತಾರೆ. ಒಬ್ಬ ಪತ್ರಿಕಾ ಸಂಪಾದಕರ ಸ್ಥಾನ ನ್ಯಾಯಾಧೀಶರಷ್ಟು ಉನ್ನತ ಅಲ್ಲದಿದ್ದರೂ, ಕೆಲವೊಮ್ಮೆ ಪ್ರಕಟಿಸುವುದನ್ನು ಬಿಟ್ಟು ವಿವರಣೆ ನೀಡುವುದಕ್ಕಿಂತಲೂ ಪ್ರಕಟಿಸಿ ಸುಮ್ಮನಾಗುವುದೇ ಲೇಸು ಎನಿಸುತ್ತದೆ. ಕೆಲವು ಸುದ್ದಿಗಳು ಒಪ್ಪುವಂತಿರುವುದಿಲ್ಲ ಎಂದು ಭಾವಿಸಿ ಪ್ರಕಟಿಸದೆ ಇರುವ ಸಂಪಾದಕರು ಹಲವರಿದ್ದಾರೆ.

1998ರಲ್ಲಿ ನ್ಯಾ ಎ ಎಸ್ ಆನಂದ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡ ಸಂದರ್ಭದಲ್ಲಿ ನಮ್ಮ ಕಾನೂನು ಸಂಪಾದಕರೊಬ್ಬರು ಆನಂದ್ ಅವರ ಪೂರ್ವಾಪರಗಳ ಅಧ್ಯಯನ ಮಾಡಿದ್ದರು. ನ್ಯಾ ಆನಂದ್ ಅವರ ಹಿತಾಸಕ್ತಿಗಳ ಸಂಘರ್ಷ, ಉಡುಗೊರೆಗಳ ಬಗ್ಗೆ ಕಾಣದ ಪಾರದರ್ಶಕತೆ ಮುಂತಾದ ಅಂಶಗಳನ್ನು ವರದಿಯಲ್ಲಿ  ಉಲ್ಲೇಖಿಸಲಾಗಿತ್ತು.  ಇದನ್ನು ಪ್ರಕಟಿಸುವ ಮುನ್ನ ಹತ್ತು ಹನ್ನೆರಡು ವಕೀಲರನ್ನು ಸಂಪರ್ಕಿಸಿದ್ದೆ. ಹತ್ತರಲ್ಲಿ ಎಂಟು ವಕೀಲರು ವರದಿಯನ್ನು ಪ್ರಕಟಿಸಲು ಒಪ್ಪಿರಲಿಲ್ಲ. ಇದಕ್ಕೆ ಕಾರಣ ನ್ಯಾಯಯುತವಾದುದೇನೂ ಅಲ್ಲ ಅಥವಾ ವಾಸ್ತವವೂ ಅಲ್ಲ. ಒಬ್ಬ ಅಮಾಯಕರಿಗೆ ನೋವುಂಟು ಮಾಡಿ ಒಂದು ಸಂಸ್ಥೆಯ ಘನತೆಗೆ ಧಕ್ಕೆ ತರಕೂಡದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಈ ಸಂದರ್ಭದಲ್ಲಿ ನನ್ನೊಡನೆ ಇಬ್ಬರು ಮಹಾನ್ ವ್ಯಕ್ತಿಗಳು ಸಂಪರ್ಕದಲ್ಲಿದ್ದರು. ವಾಜಪೇಯಿ ಸಂಪುಟದಲ್ಲಿದ್ದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಶೌರಿ. ಇಬ್ಬರಿಗೂ ಆನಂದ್ ಮತ್ತು ಅವರ ಕುಟುಂಬದವರ ನಿಕಟ ಪರಿಚಯವಿತ್ತು. ನಮ್ಮ ವರದಿಯ ಬಗ್ಗೆ ಮಾತನಾಡಲು ನಿರಾಕರಿಸಿದ ಆನಂದ್ ತಾವು ನ್ಯಾಯಾಧೀಶರ ಸ್ಥಾನದಲ್ಲಿರುವಾಗ ಮಾಧ್ಯಮದೊಡನೆ ಯಾವುದೇ ಮಾತುಕತೆಗೆ ಸಿದ್ಧರಿಲ್ಲ ಎಂದು ನಿರಾಕರಿಸಿದ್ದರು.

ಸುಷ್ಮಾ ಸ್ವರಾಜ್ ಸಲಹೆಯ ಮೇರೆಗೆ ಆನಂದ್ ಅವರನ್ನು ಮಾತುಕತೆಗೆ ಆಹ್ವಾನಿಸಿದಾಗ ಅನಧಿಕೃತವಾಗಿ ನನ್ನನ್ನು ಭೇಟಿ ಮಾಡಿದ್ದರು. ಕೊಂಚ ಅನುಮಾನದೊಂದಿಗೇ ಆತ್ಮೀಯತೆಯಿಂದ ಆನಂದ್ ನನ್ನನ್ನು ಬರಮಾಡಿಕೊಂಡರು.  ಅವರ ಬ್ರೀಫ್ ಕೇಸಿನಲ್ಲಿ ಎಲ್ಲ ರೀತಿಯ ದಾಖಲೆಗಳೂ ಇದ್ದವು. ನನ್ನ ಪ್ರತಿಯೊಂದು ಪ್ರಶ್ನೆಯೂ ನ್ಯಾ ಆನಂದ್ ಸಿದ್ಧ ಉತ್ತರ ನೀಡುತ್ತಿದ್ದರು. ಆದರೆ ಐದಾರು ವರ್ಷಗಳ ಹಿಂದೆ ಆನಂದ್ ತಮ್ಮ ಹೊಲದ ಗೇಣಿದಾರನಿಗೆ ನಾಲ್ಕು ಸಾವಿರ ರೂ ಮೌಲ್ಯದ ಧಾನ್ಯಗಳನ್ನು ನೀಡದೆಯೇ ವಂಚಿಸಿದ್ದನ್ನು ನಾನು ಉಲ್ಲೇಖಿಸಿದ್ದೆ. ನಮ್ಮ ಪತ್ರಿಕೆಗೆ ಉತ್ತಮ ಬಿಸಿಬಿಸಿ ಸುದ್ದಿ ದೊರೆತಿದೆ ಎಂದು ಭಾವಿಸಿದೆ.

ಆದರೆ ಈ ಕ್ಷುಲ್ಲಕ ವ್ಯವಹಾರದ ಬಗ್ಗೆ ಯಾವುದೇ ಪತ್ರಿಕೆಯೂ ಮುಖ್ಯನ್ಯಾಯಾಧೀಶರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ ಎಂಬ ಭೀತಿಯೂ ಆವರಿಸಿತ್ತು. ಆಗ ನ್ಯಾ ಆನಂದ್, “ನಿಮ್ಮ ಮುಂದೆ ನನ್ನ ಎಲ್ಲ ಸ್ಪಷ್ಟೀಕರಣವನ್ನೂ ನೀಡಿದ್ದೇನೆ, ಆದರೂ ನೀವು ಈ ವರದಿ ಪ್ರಕಟಿಸಿ ನ್ಯಾಯಾಂಗದ ಸಂಸ್ಥೆಗೆ ಅಪಮಾನ ಮಾಡುವಿರಾ?” ಎಂದು ಪ್ರಶ್ನಿಸಿದ್ದರು. ಕೊನೆಗೂ ಸುದ್ದಿ ಪ್ರಕಟವಾಗಲಿಲ್ಲ. ಒಂದು ವೇಳೆ ಇದೇ ಸ್ಥಾನದಲ್ಲಿ ಒಬ್ಬ ಅಧಿಕಾರಿ ಅಥವಾ ರಾಜಕಾರಣಿ ಇದ್ದಿದ್ದರೆ ನಾವು ತಾಳ್ಮೆಯಿಂದ ಇರುತ್ತಿದ್ದೆವೇ ಎಂಬ ಪ್ರಶ್ನೆ ಇಂದಿಗೂ ಕಾಡುತ್ತದೆ.

ಆದರೆ ನ್ಯಾಯಾಂಗ ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆ ಹಾಗಾಗಿ ಆ ಸಂಸ್ಥೆಯ ಘನತೆಗೆ ಧಕ್ಕೆ ತರುವುದು ಒಪ್ಪುವಂತಹುದಲ್ಲ ಎಂದು ಭಾವಿಸಿದ್ದೆ. ನಿವೃತ್ತರಾದ ನ್ಯಾಯಾಧೀಶರೆಲ್ಲರೂ ಒಂದು ಅಧಿಕಾರದÀ ಸ್ಥಾನ ಗಳಿಸುತ್ತಿರುವ ಸಂದರ್ಭದಲ್ಲಿ ಈ ವಿಚಾರ ಇನ್ನೂ ಹೆಚ್ಚು ಪ್ರಸ್ತುತ ಎನಿಸುತ್ತದೆ.