82ರ ವಯಸ್ಸಿನಲ್ಲಿ ಜೈಲಿನಲ್ಲಿ ಪಿಯುಸಿ ಪಾಸಾದ ಚೌಟಾಲ

ಚಂಡೀಗಡ  : ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಷ್ಟ್ರೀಯ ಲೋಕದಳ ಪಕ್ಷದಿಂದ ನಾಲ್ಕು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿರುವ ಓಂಪ್ರಕಾಶ್ ಚೌಟಾಲ ತಮ್ಮ 82ರ ಇಳಿವಯಸ್ಸಿನಲ್ಲಿ 12ನೇ ತರಗತಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಜೈಲಿನಲ್ಲಿ ಕಳೆಯುವ ಅವಧಿಯನ್ನು ಹೆಚ್ಚು ಅರ್ಥಗರ್ಭಿತವಾಗಿ ಬಳಸಿಕೊಳ್ಳುವ ಇಚ್ಛೆಯಿಂದ ಚೌಟಾಲ ಪರೀಕ್ಷೆ ಬರೆದಿದ್ದಾರೆ ಎಂದು ಅವರ ಮಗ ಅಭಯ್ ಚೌಟಾಲ ಹೇಳಿದ್ದಾರೆ.

ಅದ್ಯಾಪಕರನ್ನು ನೇಮಿಸುವ ಹಗರಣದಲ್ಲಿ ಆರೋಪ ಸಾಬೀತಾಗಿ ಚೌಟಾಲ ಜೈಲಿನಲ್ಲಿದ್ದಾರೆ. ಆದರೆ ಜೈಲಿನಲ್ಲಿ ಅವರು ನಿತ್ಯವೂ ಗ್ರಂಥಾಲಯಕ್ಕೆ ಹೋಗಿ ದಿನಪತ್ರಿಕೆಗಳು ಮತ್ತು ಪುಸ್ತಕಗಳನ್ನು ಓದುತ್ತಾರೆ. ಜೈಲಿನ ಸಿಬ್ಬಂದಿಗಳನ್ನು ಕೇಳಿಕೊಂಡು ತಮ್ಮ ಪ್ರಿಯ ಪುಸ್ತಕಗಳನ್ನು ಓದುವ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ವಿಶ್ವದ ಶ್ರೇಷ್ಠ ರಾಜಕಾರಣಿಗಳ ಪುಸ್ತಕಗಳನ್ನೂ ಅವರು ಓದುತ್ತಾರೆ.

1999ರಿಂದ 2000 ನಡುವೆ 3,206 ಅದ್ಯಾಪಕರ ನೇಮಕದಲ್ಲಿ ದಾಖಲೆಗಳನ್ನು ಫೋರ್ಜರಿ ಮಾಡಿರುವ ಆರೋಪದಲ್ಲಿ ಚೌಟಾಲ ಸೇರಿದಂತೆ 54 ಮಂದಿಯ ಮೇಲೆ ಆರೋಪ ಸಾಬೀತಾಗಿದೆ. ಉದ್ಯೋಗಕ್ಕಾಗಿ ಲಂಚ ನೀಡಿದವರ ನೇಮಕಕ್ಕಾಗಿ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ಬದಿಗೆ ತಳ್ಳಿರುವ ಆರೋಪ ಅವರ ಮೇಲಿದೆ.