ಯುವತಿಯರ ಮೊಬೈಲ್ ನಂಬ್ರ ಕೇಳಿದವಗೆ ಪೆಟ್ಟು

ಸಾರ್ವಜನಿಕರಿಂದ ಪೆಟ್ಟು ತಿಂದ ಸಂತೋಷ್

ಬೆಳ್ಳಾರೆಯಲ್ಲಿ ಅನೈತಿಕ ಗೂಂಡಾಗಿರಿ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ದಾರಿಯಲ್ಲಿ ನಡೆದು ಹೋಗುವ ವೇಳೆ ಯುವತಿಯೊಬ್ಬಳ ಮೊಬೈಲ್ ನಂಬರನ್ನು ಕೇಳಿದ್ದಾನೆಂದು ಆರೋಪಿಸಿ ಸಾರ್ವಜನಿಕರು ಸೇರಿಕೊಂಡು ಯುವಕನೊಬ್ಬನನ್ನು ಗುಡ್ಡಕ್ಕೆ ಕರೆದುಕೊಂಡು ಹೋಗಿ ಥಳಿಸಿದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.

ಮೂಲತ ಉಡುಪಿ ನಿವಾಸಿಯಾಗಿರುವ ಮಾಡಾವಿನಲ್ಲಿ ವಾಸವಾಗಿರುವ ಸಂತೋಷ್ ಹಲ್ಲೆಗೊಳಗಾದ ಯುವಕ. ಈತ ಬೆಳ್ಳಾರೆಗೆ ನಿತ್ಯ ತೆರಳುತ್ತಿದ್ದು, ಬೆಳ್ಳಾರೆಯಲ್ಲೇ ಹೆಚ್ಚು ಸಮಯ ಕಳೆಯುವ ಈತ ರಸ್ತೆ ಬದಿಯಲ್ಲಿ ನಡೆದು ಹೋಗುವ ಯುವತಿಯರನ್ನು ಮತ್ತು ಮಹಿಳೆಯರನ್ನು ಹಿಂಬಾಲಿಸುವ ಚಾಳಿ ಮೈಗೂಡಿಸಿಕೊಂಡಿದ್ದ. ಕಳೆದ ಕೆಲವು ದಿನಗಳಿಂದ ಬೆಳ್ಳಾರೆಯಲ್ಲಿ ನಿತ್ಯವೂ ಈತನ ಉಪಟಳ ಕಾಡುತ್ತಿತ್ತು. ಈತನ ಉಪಟಳದಿಂದ ಬೇಸತ್ತ ಕೆಲ ಯುವತಿಯರು ಈತನ ಬಗ್ಗೆ ಬೆಳ್ಳಾರೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ಆದರೆ ಯಾವುದೇ ಲಿಖಿತ ದೂರು ನೀಡದ ಕಾರಣ ಆತನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಪೊಲೀಸರ ಎಚ್ಚರಿಕೆಯ ಬಳಿಕವೂ ಈತ ತನ್ನ ಚಾಳಿ ಮುಂದುವರೆಸಿದ್ದ. ಇದನ್ನು ತಿಳಿದ ಕೆಲ ಯುವಕರು ಈತನನ್ನು ಗುಡ್ಡವೊಂದಕ್ಕೆ ಕರೆದುಕೊಂಡು ಹೋಗಿ ಚೆನ್ನಾಗಿಯೇ ಬಾರಿಸಿದ್ದಾರೆ. “ನಾನು ಮಾಡಿದ್ದು ತಪ್ಪಾಯ್ತು, ಇನ್ನು ಯಾರ ನಂಬರನ್ನೂ ಕೇಳುವುದಿಲ್ಲ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ” ಎಂದು ಆತ ಅಂಗಲಾಚಿದರೂ ತಂಡ ಈತನನ್ನು ಥಳಿಸಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಈತನಿಗೆ ಥಳಿಸಿದ ತಂಡ ಬಳಿಕ ಗುಡ್ಡದಲ್ಲೇ ಆತ ಬಿದ್ದುಕೊಂಡಿದ್ದ. ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಬೆಳ್ಳಾರೆ ಪೊಲೀಸರು ಸಂತೋಷನನ್ನು ಕರೆದುಕೊಂಡು ಠಾಣೆಗೆ ಹೋಗಿ ವಿಚಾರಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಈತನಿಗೆ ಮದುವೆಯಾಗಿದ್ದು ಮಕ್ಕಳೂ ಇದ್ದಾರೆ ಎನ್ನಲಾಗಿದೆ. ಆದರೆ ಯುವಕನ ಮೇಲೆ ನೈತಿಕ ಗೂಂಡಾಗಿರಿ ಮಾಡಿ ಹಲ್ಲೆ ನಡೆಸಿದ ಬಗ್ಗೆ ಯಾರ ವಿರುದ್ಧವೂ ಕೇಸು ದಾಖಲಾಗಿಲ್ಲ. ಈತನ ಉಪಟಟಳದ ಕುರಿತು ಠಾಣೆಯಲ್ಲಿ ಯಾವುದೇ ಕೇಸೂ ದಾಖಲಾಗಿಲ್ಲ.