`ಸಂಸದನ ಬಂಧಿಸದಿದ್ದರೆ ರಾಜ್ಯ ವ್ಯಾಪಿ ಹೋರಾಟ ಅನಿವಾರ್ಯ’

ಶಿರಸಿ ವೈದ್ಯರಿಗೆ ಎಂ ಪಿ ಅನಂತಕುಮಾರ ಹಲ್ಲೆ ಖಂಡಿಸಿ ಕರಾವಳಿಯಾದ್ಯಂತ ಪ್ರತಿಭಟನೆ

ರಾಜ್ಯ ಐಎಂಎ ಅಧ್ಯಕ್ಷ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : “ಜನಪ್ರತಿನಿಧಿಯಾಗಿ ಸಂಸದ ಅನಂತ ಹೆಗಡೆ ವೈದ್ಯರ ಮೇಲೆ ಹಲ್ಲೆ ನಡೆಸಿರುವದು ಕ್ಷಮಾರ್ಹವಲ್ಲ. ಅವರಿಗೆ ಮಾನಸಿಕ ಸ್ಥಿಮಿತತೆ ಇಲ್ಲವೆಂಬ ಭಾವನೆ ಬರುತ್ತಿದೆ. ಸಂಸದರನ್ನು ತಕ್ಷಣ ಬಂಧಿಸದಿದ್ದರೆ ರಾಜ್ಯ ವ್ಯಾಪಿ ಸದ್ಯವೇ ಆರೋಗ್ಯ ಸೇವೆ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ” ಎಂದು ರಾಜ್ಯ ವೈದ್ಯಕೀಯ ಸಂಘದ ಅಧ್ಯಕ್ಷ ರವೀಂದ್ರ ಎಚ್ಚರಿಸಿದ್ದಾರೆ.

ಅವರು ಶನಿವಾರ ಶಿರಸಿಯ ವೈದ್ಯರ, ಆರೋಗ್ಯ ಸಿಬ್ಬಂದಿ ಬೃಹತ್ ಮೌನ ಹೋರಾಟದಲ್ಲಿ ಮಾತನಾಡುತ್ತಾ, “ಜನಸಾಮಾನ್ಯರು ಹೊಡೆದರೆ ಅರಿವಿನ ಕೊರತೆಯೆಂದು ಕ್ಷಮಿಸಬಹುದು. ಇವರು ಇತರರಿಗೆ ಅರಿವು ಮೂಡಿಸುವ ಸ್ಥಾನದಲ್ಲಿದ್ದು ಹಲ್ಲೆ ಮಾಡಿದ್ದು ನಾಚಿಕೇಗೇಡು. ಇದು ಜನಪ್ರತಿನಿಧಿಗಳಿಗೆ ಶೋಭೆ ತರುವದಿಲ್ಲ. ಪೊಲೀಸರು ಬಂಧಿಸುವ ಮುಂಚೆ ಅವರು ಶರಣಾಗಿ ತಮ್ಮ ಗೌರವ ಹೆಚ್ಚಿಸಿಕೊಳ್ಳಬೇಕು. ಕಾನೂನಿಗೆ ಯಾರೂ ಅತೀತರಲ್ಲ. ವೈದ್ಯರು ಸಹ ತಮ್ಮ ಸೇವೆಯಲ್ಲಿ ಕರ್ತವ್ಯ ಲೋಪ ಮಾಡದೇ ಸೇವೆ ಮಾಡಬೇಕು. ತುರ್ತು ಸಂದರ್ಭದಲ್ಲಿ ಸ್ಪಂದಿಸಬೇಕು. ಅನ್ಯಾಯವಾದಾಗ ಪ್ರತಿಭಟಿಸಬೇಕು. ಸ್ವಾಭಿಮಾನದಿಂದ ಬದುಕಬೇಕು. ನಮ್ಮ ಹೋರಾಟ ವ್ಯಕ್ತಿಯ ವಿರುದ್ಧವಲ್ಲ. ಸಂಸದನ ಬಂಧನ ಆಗುವ ತನಕ ಹೋರಾಟ ಇರುತ್ತದೆ. ಆರೆಸ್ಟ್ ಮಾಡದಿದ್ದರೆ ಸೇವಾ ಬಂದ್ ಹೋರಾಟ ಇದೆ. 2009 ಕಾಯಿದೆ ಎಲ್ಲ ಕಡೆ ಅನುಷ್ಠಾನ ಆಗಬೇಕು. ವೈದ್ಯರು, ಇತರ ಆರೋಗ್ಯ ಸಿಬ್ಬಂದಿಗೆ ಹಲ್ಲೆ ಮಾಡಿದರೆ ಸದ್ಯ 3 ವರ್ಷ ಶಿಕ್ಷೆ ಇದ್ದು, ಅದನ್ನು ಜೀವಾವಧಿ ಶಿಕ್ಷೆಗೆ ಹೆಚ್ಚಿಸಬೇಕೆಂಬ ಒತ್ತಡ ಹಾಕಿದ್ದೇವೆ” ಎಂದರು.

ssಶಿರಸಿ ಐಎಂಎ ಅಧ್ಯಕ್ಷ ಕೈಲಾಸ ಪೈ ಮಾತನಾಡಿ, “ಮಾಧ್ಯಮದವರ ಸಹಕಾರದಿಂದ ನಮ್ಮ ಹೋರಾಟ ಯಶಸ್ಸು ಆಗುತ್ತಿದೆ” ಎಂದರು.