`ಗರ್ಲ್ಫ್ರೆಂಡಿನ ತಂದೆಯೆಂದರೆ ಭಯ’

ಪ್ರ : ನಾನು ಪೋಸ್ಟ್‍ಗ್ರಾಜುವೇಶನ್ ಓದುತ್ತಿದ್ದೇನೆ. ಡಿಗ್ರಿ ಓದುವಾಗಿನಿಂದ ನನಗೊಬ್ಬಳು ಗರ್ಲ್‍ಫ್ರೆಂಡ್ ಇದ್ದಾಳೆ. ಈಗಲೂ ಜೊತೆಯಲ್ಲೇ ಓದುತ್ತಿದ್ದೇವೆ. ನಮ್ಮ ಮನೆಯವರಿಗೆಲ್ಲ ನಾನು ನನ್ನ ಈ ಗರ್ಲ್‍ಪ್ರೆಂಡನ್ನು ಪರಿಚಯಿಸಿದ್ದೇನೆ. ಅವರೂ ನಮ್ಮ ರಿಲೇಶನ್‍ಶಿಪ್ಪನ್ನು ಒಪ್ಪಿಕೊಂಡಿದ್ದಾರೆ. ಓದು ಮುಗಿದು ಕೆಲಸಕ್ಕೆ ಸೇರಿದ ಕೂಡಲೇ ಮದುವೆಯಾಗಲೂ ಅವರು ಒಪ್ಪಿಗೆ ನೀಡಿದ್ದಾರೆ.  ನನ್ನ ಕಷ್ಟ ಅಂದರೆ ಅವಳ ಅಪ್ಪ ತುಂಬಾ ಸ್ಟ್ರಿಕ್ಟ್. ಅವರ ಮನೆಯವರಿಗೆ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಷಯ ಗೊತ್ತಿಲ್ಲ. ಅವಳ ಜಾತಿ ನಮ್ಮದಕ್ಕೆ ಸ್ವಲ್ಪ ಭಿನ್ನ ಇರುವುದರಿಂದ ಅವರು ಮದುವೆಗೆ ಅಷ್ಟು ಬೇಗ ಒಪ್ಪಲಿಕ್ಕಿಲ್ಲ ಅಂತ ಇವಳು ಹೇಳುತ್ತಿದ್ದಾಳೆ. ಅವಳು ಮನೆಯವರ ಹತ್ತಿರ ಕೇಳಲೂ ಭಯಪಡುತ್ತಿದ್ದಾಳೆ.  ಕಾಲೇಜಿನಲ್ಲಿ ಬಿಟ್ಟರೆ ಹೊರಗೆಲ್ಲೂ ನಾವು ಜೊತೆಯಾಗಿ ಓಡಾಡುತ್ತಿಲ್ಲ. ಯಾಕೆಂದರೆ ಅವಳ ಮನೆಯವರಿಗೆ ವಿಷಯ ಗೊತ್ತಾದರೆ ಕಾಲೇಜೇ ಬಿಡಿಸಬಹುದು ಅನ್ನುವ ಆತಂಕ. ನಮಗೂ ಎಲ್ಲಾ ಪ್ರೆಮಿಗಳಂತೆ ಜೊತೆಯಲ್ಲಿ ಸಿನಿಮಾಗೆ ಹೋಗಬೇಕು, ಐಸ್‍ಕ್ರೀಂ ತಿನ್ನಬೇಕು ಅಂತೆಲ್ಲ ಆಸೆ ಇದ್ದರೂ ಎಲ್ಲದಕ್ಕೂ ಕಡಿವಾಣ ಹಾಕಿಕೊಂಡಿದ್ದೇವೆ. ಈ ವರ್ಷ ಮೇಗೆ ನಮ್ಮ ಓದು ಮುಗಿಯುತ್ತದೆ. ನಂತರ ನಮ್ಮ ಭೇಟಿಗೂ ಅವಕಾಶ ಇರುವುದಿಲ್ಲ ಅಂತ ತಲೆಬಿಸಿಯಾಗಿದೆ. ನಾನೇ ಹೋಗಿ ಅವಳ ಅಪ್ಪನ ಹತ್ತಿರ ಮಾತಾಡಬೇಕು ಅಂದುಕೊಂಡರೂ ಧೈರ್ಯ ಸಾಕಾಗುವುದಿಲ್ಲ. ನಮ್ಮ ಈ ಸಂಬಂಧಕ್ಕೆ ಭವಿಷ್ಯ ಇದೆಯಾ?

: ಕೆಲವು ವರ್ಷಗಳಿಂದ ನೀವಿಬ್ಬರೂ ಪ್ರೀತಿಸುತ್ತಿದ್ದರೂ ಸಂಯಮ ಮೀರದೆ ಭಾವನಾತ್ಮಕವಾಗಿ ಮಾತ್ರ ಜೊತೆಗಿದ್ದ ಬಗ್ಗೆ ಮೊದಲು ನಿಮ್ಮನ್ನು ಅಭಿನಂದಿಸಲೇಬೇಕು. ಗರ್ಲ್‍ಫ್ರೆಂಡ್ ಸಿಕ್ಕಿದ ಕೂಡಲೇ ಡೇಟಿಂಗ್‍ನ ಹೆಸರಲ್ಲಿ ಸಿನಿಮಾ, ಪಾರ್ಕ್, ಹೊಟೇಲ್ ಅಂತ ಸುತ್ತುವ ಈಗಿನ ಯುವಕರಿಗೆ ನೀವು ಮಾದರಿಯಾಗಿದ್ದೀರಿ. ನಿಮ್ಮ ಈ ಪ್ಯೂರ್ ಲವ್‍ಗೆ ಯಶಸ್ಸು ಸಿಗಲೇಬೇಕು. ಹೇಗೂ ಇಷ್ಟು ಸಮಯ ನೀವು ತಾಳ್ಮೆಯಿಂದ ಇದ್ದೀರಿ. ಇನ್ನು ಕೆಲವೇ ತಿಂಗಳಲ್ಲಿ ನಿಮ್ಮ ಓದೂ ಮುಗಿಯುತ್ತದೆ. ನಿಮ್ಮಿಬ್ಬರ ಪ್ರೀತಿ ಅವಳ ಮನೆಯವರಿಗೆ ಗೊತ್ತಾದರೆ ಅವಳನ್ನು ಕಾಲೇಜಿನಿಂದಲೇ ಬಿಡಿಸಬಹುದು ಅನ್ನುವ ಆತಂಕ ನಿಮಗಿರುವುದರಿಂದ ಅಲ್ಲಿಯವರೆಗೆ ನಿಮ್ಮ ಸಂಬಂಧವನ್ನು ಅವಳ ಮನೆಯವರಿಗೆ ಹೇಳದೇ ಇರುವುದೇ ಒಳ್ಳೆಯದು. ಒಮ್ಮೆ ನಿಮ್ಮ ಓದು ಮುಗಿದ ಮೇಲೆ ಅವಳು ತಂದೆಯಲ್ಲಿ ಡೈರೆಕ್ಟಾಗಿ ಹೇಳುವುದಕ್ಕಿಂತ ಮನೆಯ ಉಳಿದ ಸದಸ್ಯರಿಗೆ ಹೇಳಿ ಮೊದಲು ಅವರ ಸಪೋರ್ಟ್ ತೆಗೆದುಕೊಂಡರೆ ತಂದೆಯನ್ನು ಒಪ್ಪಿಸಲು ಅವರ ಸಹಕಾರವನ್ನೂ ಪಡೆಯಬಹುದು. ಪರಿಸ್ಥಿತಿ ನೋಡಿಕೊಂಡು ನೀವೂ ಅವಳ ತಂದೆಯನ್ನು ಬೇಟಿಯಾಗಿ. ನಿಮ್ಮ ಮನೆಯವರು ಹೇಗೂ ನಿಮ್ಮ ಬೆಂಬಲಕ್ಕೆ ಇರುವುದರಿಂದ ಅವರನ್ನೂ ನಿಮ್ಮ ಜೊತೆ ಕರೆದುಕೊಂಡು ಹೋಗಬಹುದು. ಮಗಳನ್ನು ಅಷ್ಟೊಂದು ಪ್ರೀತಿಸುವ ಓದಿದ ಹುಡುಗ ಅವನಾಗಿಯೇ ಕುಟುಂಬದವರ ಜೊತೆ ಬಂದು ಹುಡುಗಿ ಕೇಳುವಾಗ ಮಗಳ ಹಿತಬಯಸುವ ಯಾವ ತಂದೆಯೂ ಬೇಡ ಅನ್ನಲಿಕ್ಕಿಲ್ಲ. ಆಲ್‍ದಿ ಬೆಸ್ಟ್. ಒಂದು ವೇಳೆ ಅವಳ ತಂದೆ ಬಿಲ್‍ಕುಲ್ ನಿಮ್ಮ ಮದುವೆಯನ್ನು ನಿರಾಕರಿಸಿದರೆ ನಿಮ್ಮ ಮನೆಯವರ ಬೆಂಬಲದೊಂದಿಗೆ ಅವಳನ್ನು ಮದುವೆಯಾಗಿ. ಮುಂದೆ ಎಲ್ಲಾ ಸರಿಹೋಗುತ್ತದೆ.