`ಇಂಡಿಯನ್ ಮುಜಾಹಿದ್ದೀನ್ 150 ಬಾಂಬ್ ಸ್ಫೋಟಗಳನ್ನು ನಡೆಸಲು ಸಂಚು ಹೂಡಿತ್ತು’

ಯಾಸಿನ್ ಭಟ್ಕಳ್ ವಿಚಾರಣೆ ವೇಳೆ ಬಹಿರಂಗ

ಅಹ್ಮದಾಬಾದ್ : ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯು 2008ರಲ್ಲಿ ಅಹ್ಮದಾಬಾದ್, ಸೂರತ್ ಮತ್ತು ವಡೋದರಾದಲ್ಲಿ  ಸುಮಾರು 150 ಬಾಬ್ ಸ್ಫೋಟ ನಡೆಸುವ ಸಂಚು ಹೂಡಿತ್ತೆಂದು ತಿಳಿದುಬಂದಿದೆ.

ಸದ್ಯ ಬಂಧನದಲ್ಲಿರುವ ಯಾಸೀನ್ ಭಟ್ಕಳ್ 2007ರ ಅಹ್ಮದಾಬಾದ್ ಸ್ಫೋಟಕ್ಕೆ ಸಂಬಂಧಿಸಿದ ವಿಚಾರಣೆಯ ವೇಳೆ ಈ ಬಗ್ಗೆ ಬಾಯ್ಬಿಟ್ಟಿದಾನೆಂದು  ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ  ಇಷ್ಟೊಂದು ಸಂಖ್ಯೆಯ ಸ್ಫೋಟಗಳನ್ನು ನಡೆಸಲು ಸಾಕಷ್ಟು ಜನರು ಲಭ್ಯರಿಲ್ಲದ ಕಾರಣ ಇಂಡಿಯನ್ ಮುಜಾಹಿದ್ದೀನ್ ಅಹ್ಮದಾಬಾದಿನಲ್ಲಿ 21 ಬಾಂಬುಗಳು ಹಾಗೂ ಸೂರತ್ ನಗರದಲ್ಲಿ 29 ಬಾಂಬುಗಳನ್ನು ಸ್ಫೋಟಿಸಲು ನಿರ್ಧರಿಸಿತ್ತು ಎಂದೂ ತಿಳಿದು ಬಂದಿದೆಯೆಂದು ಆ ಅಧಿಕಾರಿ ಹೇಳಿದ್ದಾರೆ.

ಅಹ್ಮದಾಬಾದ್ ನಗರದಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ 57 ಜನರು ಬಲಿಯಾಗಿದ್ದರೆ, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸೂರತ್ ನಗರದಲ್ಲಿ ಇಂಡಿಯನ್ ಮುಜಾಹಿದ್ದೀನ್ 29 ಬಾಂಬುಗಳನ್ನು ವಿವಿಧ ಸ್ಥಳಗಳಲ್ಲಿಟ್ಟಿದ್ದರೂ ದೋಷಪೂರ್ಣ ಟೈಮರ್ ಚಿಪ್‍ಗಳಿಂದಾಗಿ ಅವು ಸ್ಫೋಟಗೊಂಡಿರಲಿಲ್ಲ. ಈ ಬಾಂಬುಗಳು ಜುಲೈ 27, 2008ರಂದು  ಪತ್ತೆಯಾಗಿದ್ದವು.

ಬುಧವಾರ ಇಲ್ಲಿನ ವಿಶೇಷ ಮೆಜಿಸ್ಟೀರಿಯಲ್ ನ್ಯಾಯಾಲಯವು ಯಾಸಿನ್ ಭಟ್ಕಳನ ಕಸ್ಟಡಿಯನ್ನು ಸೂರತ್ ಪೊಲೀಸರಿಗೆ ಹಸ್ತಾಂತರಿಸಿದೆ. ಭಟ್ಕಳ್ ಮತ್ತಾತನ ಸಹವರ್ತಿ ಅಸಾದುಲ್ಲಾ ಅಖ್ತರ್ ಆಲಿಯಾಸ್ ಹದ್ದಿ ಇಬ್ಬರನ್ನೂ  ರಾಷ್ಟ್ರೀಯ ತನಿಖಾ ದಳದಿಂದ ವಾರಂಟ್ ಪಡೆದು ಅಹ್ಮದಾಬಾದ್ ನಗರಕ್ಕೆ ವಿಚಾರಣೆಗಾಗಿ ಕರೆತರಲಾಗಿತ್ತು.