ಪ್ರೀತಿಸುವ ಹುಡುಗನಿಗೆ ಮೋಸ ಮಾಡುತ್ತಿದ್ದೇನೆ.

ಪ್ರ : ನನ್ನನ್ನು ಪ್ರೀತಿಸುತ್ತಿರುವ ಹುಡುಗ ತುಂಬಾ ಮುಗ್ಧ. ಅವನು ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾನೆ. ನನಗೂ ಅವನೆಂದರೆ ಇಷ್ಟವೇ. ಆದರೆ ನನಗೆ ಜೀವನವನ್ನು ತುಂಬಾ ಎಂಜಾಯ್ ಮಾಡಬೇಕೆಂಬಾಸೆ. ನಾನು ಕಾಲೇಜಿಗೆ ಹೋಗುತ್ತಿದ್ದರೂ ಕೆಲವು ಲೋಕಲ್ ಚಾನಲ್ಲಿಗೆ ಹೋಸ್ಟಾಗಿ ಕೆಲಸ ಮಾಡುತ್ತೇನೆ. ನನಗೆ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ಅನೇಕರು ನನ್ನ ಹಿಂದೆಯೂ ಇದ್ದಾರೆ. ಅವರಲ್ಲಿ ಕೆಲವರ ಜೊತೆ ನಾನು ಡೇಟಿಂಗ್ ಸಹ ಮಾಡುತ್ತಿದ್ದೇನೆ. ನನಗೆ ಮಜವಾಗಿ ಹೊರಗೆ ತಿರುಗಿ ಬೇರೆ ಬೇರೆ ಹೊಟೇಲಿನಲ್ಲಿ ತಿನ್ನುವುದು, ಶಾಂಪಿಂಗ್ ಮಾಡುವುದು, ಮೂವೀಸ್ ನೋಡುವುದು ಎಲ್ಲವೂ ಇಷ್ಟ. ನನ್ನನ್ನು ಪ್ರೀತಿಸುತ್ತಿರುವ ಹುಡುಗ ಅಪರೂಪಕ್ಕೊಮ್ಮೆ ಮಾತ್ರ ನನಗೆ ಕಂಪೆನಿ ಕೊಡುತ್ತಾನೆ. ಉಳಿದಂತೆ ನಾನು ತಿರುಗುವುದು ಬೇರೆ ಹುಡುಗರ ಜೊತೆಯೇ. ಈ ವಿಷಯ ನನ್ನ ಹುಡುಗನಿಗೆ ಸ್ವಲ್ಪ ಮಟ್ಟಿಗೆ ಗೊತ್ತಿರಲೂ ಸಾಕು. ಆದರೂ ಅವನೆಂದೂ ನನ್ನ ಈ ಓಡಾಟದ ಬಗ್ಗೆ ಇಷ್ಟರವರೆಗೆ ಪ್ರಶ್ನೆ ಎತ್ತಿಲ್ಲ. ಅವನಿಗೆ ನನ್ನ ಮೇಲೆ ತುಂಬಾ ನಂಬಿಗೆ ಇರುವುದರಿಂದ ನಾನು ಕೆಲಸಕ್ಕಾಗಿಯೇ ಹುಡುಗರ ಜೊತೆ ತಿರುಗುತ್ತಿದ್ದೇನೆ ಅಂತ ಭಾವಿಸಿದ್ದಾನೆ. ಆದರೆ ಕೆಲವು ದಿನಗಳಿಂದ ಅವನಿಗೆ ಸ್ವಲ್ಪ ಅಸಮಧಾನವಾಗಿದೆ ಅಂತ ಕೆಲವು ಮಾತಿನಿಂದ ಅನಿಸುತ್ತಿದೆ. ಅಂತಹ ಒಳ್ಳೆಯ ಹುಡುಗನನ್ನು ಕಳೆದುಕೊಳ್ಳಲೂ ಮನಸ್ಸಿಲ್ಲ. ಆದರೆ ಸತಿಸಾವಿತ್ರಿಯಂತೆ ಸುಮ್ಮನೇ ಕುಳಿತುಕೊಳ್ಳಲೂ ನನಗೆ ಇಷ್ಟವಿಲ್ಲ. ಅವನಿಗೆ ಮೋಸ ಮಾಡುತ್ತಿದ್ದೇನೆ ಅಂತ ನನ್ನ ಒಳ ಮನಸ್ಸು ಎಚ್ಚರಿಸುತ್ತಿದೆ. ನಾನೇನು ಮಾಡಲಿ?

: ನೋಡಮ್ಮಾ ನಾನು ಪದೇ ಪದೇ ಹೇಳುವುದೇನೆಂದರೆ ಪ್ರೀತಿಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇಲ್ಲದಿದ್ದರೆ ಅಂತಹ ಸಂಬಂಧ ಜಾಸ್ತಿ ದಿನ ಉಳಿಯುವುದಿಲ್ಲ. ನಿನಗೆ ಏನು ಬೇಕೆಂದು ಈಗಲೇ ನೀನು ಸರಿಯಾಗಿ ನಿರ್ಧರಿಸುವುದು ಒಳ್ಳೆಯದು. ನೀನು ಆ ಹುಡುಗನ ಜೊತೆ ಕಮಿಟ್ ಆಗಿದ್ದರೆ ನೀನು ಈ ರೀತಿ ಬೇರೆ ಹುಡುಗರ ಜೊತೆ ಬಿಂದಾಸಾಗಿ ತಿರುಗುವುದು ಸರಿಯಲ್ಲ. ಇವತ್ತಲ್ಲ, ನಾಳೆ ಅವನಿಗೆ ಈ ವಿಷಯ ಗೊತ್ತಾಗಿ ಆಘಾತವಾಗುವುದು ಖಂಡಿತಾ. ಅದರಿಂದಾಗಿ ನಿಮ್ಮ ಪ್ರೀತಿಯಲ್ಲೂ ಬಿರುಕು ಮೂಡುವಂತಾಗುತ್ತದೆ. ನೀನೇ ಹೇಳಿದಂತೆ ಅವನು ಮುಗ್ಧ. ನಿಮ್ಮನ್ನು ತುಂಬಾ ಪ್ರೀತಿಸುತ್ತಾನೆ. ನಿಮಗೀಗ ನಿಜವಾದ ಪ್ರೀತಿ ಬೇಕು ಅಂತಿದ್ದರೆ ನೀವೀಗ ಉಳಿದ ನಿಮ್ಮ ಕನೆಕ್ಷನ್‍ನಿಂದ ದೂರವಿರಲೇಬೇಕು. ಎಲ್ಲರ ಜೊತೆ ಬೆರೆಯುವುದು ಓಕೆ. ಆದರೆ ಡೇಟಿಂಗ್ ತಪ್ಪು. ಇನ್ನು ನಿಮಗೆ ಮೋಜು ಮಸ್ತಿಯೇ ಬೇಕೆಂದಿದ್ದರೆ ಆ ಹುಡುಗನಿಂದ ಬ್ರೇಕಪ್ ಆಗುವುದೇ ಒಳ್ಳೆಯದು. ಆಗ ನಿಮಗೆ ಯಾರೂ ಅಡ್ಡಿಪಡಿಸುವವರಿರುವುದಿಲ್ಲ. ಯಾರಿಗೂ ಕಮಿಟ್ ಆಗದೇ ನಿಮಗಿಷ್ಟ ಬಂದವರ ಜೊತೆ ಡೇಟಿಂಗ್ ಮಾಡಿದರೂ ಕೇಳುವವರಿರುವುದಿಲ್ಲ. ಆದರೆ ಯಾವತ್ತೂ ನೆನಪಿಡಿ : ನಿಮ್ಮ ಜೊತೆ ಗಮ್ಮತ್ತು ಮಾಡಲು ಬೇಕಷ್ಟು ಜನ ಸಿಗುತ್ತಾರೆ. ಅದರೆ ನಿಮ್ಮ ಕಷ್ಟಕ್ಕೆ ಸ್ಪಂದಿಸುವವರು ಯಾರೂ ಇರುವುದಿಲ್ಲ. ಆದ್ದರಿಂದ ಕ್ಷಣಿಕ ಸುಖ ಕೊಡಬಲ್ಲ ಮೋಜುಮಸ್ತಿಗಾಗಿ ನಿಮ್ಮ ಜತೆಯಲ್ಲೇ ಹೆಜ್ಜೆ ಇಡಬಲ್ಲ ಅಂತಹ ಒಳ್ಳೆಯ ಹುಡುಗನನ್ನು ಕಳೆದುಕೊಳ್ಳುವುದು ಶ್ರೇಯಸ್ಕರವಲ್ಲ.