ನನಗೆ 25, ಆಕೆಗೆ 33; ಮನೆಯವರು ಒಪ್ತಾ ಇಲ್ಲ

ಪ್ರ : ನಾನು ಈ ಆಫೀಸಿಗೆ ಸೇರಿದ ಮೊದಲ ದಿನವೇ ಆಕೆ ಇಷ್ಟವಾದಳು. ಆಕೆ ಮ್ಯಾನೇಜರ್ ಆದರೂ ಅವಳ ಕೈಕೆಳಗೆ ಕೆಲಸ ಮಾಡುತ್ತಿರುವ ನನ್ನನ್ನು ಕಡೆಗಣಿಸಿಲ್ಲ. ಜೂನಿಯರ್ ಆಗಿದ್ದರೂ ನನಗೆ ಆಕೆ ಕೊಡುವ ಗೌರವ, ನಡೆ-ನುಡಿಗೆ ಮನಸೋತೆ. ಎಲ್ಲರನ್ನೂ ಆಕೆ ಸಂಭಾಳಿಸುವ ರೀತಿಗೆ ಫಿದಾ ಆಗಿಬಿಟ್ಟೆ. ನನಗಿಂತ ಆಕೆ ಹಿರಿಯಳು ಆದರೂ ನೋಡುವುದಕ್ಕೆ ಮಾತ್ರ ತೆಳ್ಳಗೆ ಬೆಳ್ಳಗಿದ್ದು ನನ್ನ ವಯಸ್ಸಿನವಳ ಹಾಗೆಯೇ ಕಾಣಿಸುತ್ತಾಳೆ. ಆಕೆಯನ್ನು ನಾನು ಮನಸ್ಸಿನಲ್ಲೇ ಆರಾಧಿಸಲು ಪ್ರಾರಂಭಿಸಿದೆ. ನನ್ನ ಮನಸ್ಸು ಅವಳಿಗೆ ತಿಳಿಯಿತೋ ಎಂಬಂತೆ ಆಕೆಯ ನಡೆನುಡಿಯಲ್ಲೂ ನನ್ನ ಬಗ್ಗೆ ಪ್ರೀತಿ ಕಂಡೆ. ಒಂದು ದಿನ ಧೈರ್ಯ ಮಾಡಿ ಪ್ರಪೋಸ್ ಮಾಡಿದೆ. ಆಕೆಗೆ ಇದರಿಂದ ಖುಶಿಯಾದರೂ ಅವಳ ಮುಖದಲ್ಲಿ ಆತಂಕ ಗಮನಿಸಿದೆ. ಅದ್ಯಾಕೆ ಹಾಗೆ ಅವಳಿಗೆ ಹಿಂಜರಿಕೆ ಎಂದು ಒತ್ತಾಯಿಸಿ ಕೇಳಿದಾಗ ಗೊತ್ತಾಯಿತು…ಅವಳು ವಿಚ್ಛೇದಿತೆ ಎಂದು. ಅಷ್ಟೇ ಅಲ್ಲ ಅವಳ ವಯಸ್ಸು 33. ನನ್ನ ವಯಸ್ಸು 35. ನನಗೆ ಒಂದು ಸಲ ಶಾಕ್ ಆಯಿತು. ಆದರೂ ಅವಳ ಮೇಲೆ ನನಗಿರುವ ಪ್ರೀತಿ ಅದನ್ನೆಲ್ಲ ಮೀರಿದ್ದು. ನನಗೇನೂ ಅದು ಸಮಸ್ಯೆಯೇ ಅಲ್ಲ ಅಂತ ಆಕೆಗೆ ಮನವರಿಕೆ ಮಾಡಿ ಕೊಟ್ಟ ನಂತರ ನಿರಾಳವಾಗಿ ನನ್ನ ಜೊತೆ ಫ್ರೀ ಆದಳು. ಆದರೆ ನನ್ನ ಮನೆಯವರು ನನಗಿಂತ 8 ವರ್ಷ ದೊಡ್ಡವಳನ್ನು ಅದೂ ವಿಚ್ಛೇದಿತೆಯನ್ನು ಮದುವೆಯಾಗಲು ಒಪ್ಪುತ್ತಿಲ್ಲ. ನಾನು ಮನೆಯವರನ್ನೂ ತುಂಬಾ ಹಚ್ಚಿಕೊಂಡಿದ್ದೇನೆ. ನಾನೀಗ ಏನು ಮಾಡಲಿ?

: ಇಬ್ಬರ ಹೃದಯ, ಮನಸ್ಸು ಒಂದಾದರೆ ವಯಸ್ಸಿನ ಅಂತರವೆನ್ನುವುದು ದೊಡ್ಡ ಸಮಸ್ಯೆಯಲ್ಲ ಎಂದುಕೊಂಡರೂ ನಿಮ್ಮ ವಿಷಯದಲ್ಲಿ ವಯಸ್ಸಿನ ಅಂತರ ತುಸು ಜಾಸ್ತಿಯೇ ಆಯಿತು ಎಂದೆನಿಸುತ್ತದೆ. ಈಗ ನಿಮಗೆ ಅದು ದೊಡ್ಡ ಸಮಸ್ಯೆ ಎನಿಸದಿದ್ದರೂ ಇನ್ನು 10-15 ವರ್ಷದ ನಂತರದ ಪರಿಸ್ಥಿತಿ ಯೋಚಿಸಿ. ನಿಮಗಾಗ ಏರು ಪ್ರಾಯ. ಆಕೆ ಮಧ್ಯವಯಸ್ಕಳಾಗುತ್ತಾಳೆ. ಆಕೆಯ ಯೌವನವೂ ನಿಮಗಿಂತ ಬೇಗ ಕಳೆಯುವುದರಿಂದ ನಿಮಗಾಗ ಖಂಡಿತಾ ಸಮಸ್ಯೆ ಆಗಿಯೇ ಆಗುತ್ತದೆ. ಇದನ್ನೆಲ್ಲ ಯೋಚಿಸಿಯೇ ನಿಮ್ಮ ಮನೆಯವರು ಇದಕ್ಕೆ ಒಪ್ಪಿಗೆ ಕೊಡುತ್ತಿಲ್ಲ. ಅದೂ ಅಲ್ಲದೇ ವಿಚ್ಛೇದಿತೆಯನ್ನು ಸೊಸೆಯಾಗಿ ಸ್ವೀಕರಿಸುವುದೂ ಎಲ್ಲರಿಗೂ ಸುಲಭಸಾಧ್ಯವಲ್ಲ. ಆದರೂ ನಿಮ್ಮ ಪ್ರೀತಿ ನಿಜಕ್ಕೂ ಗಟ್ಟಿಯಿದ್ದರೆ, ಸಮಾಜವನ್ನೂ ಎದುರಿಸಿ ಎಲ್ಲವನ್ನೂ ಮೀರಿ ಪ್ರೀತಿಯನ್ನು ಉಳಿಸಿಕೊಳ್ಳುತ್ತೇನೆ ಎನ್ನುವ ದೃಢ ಸಂಕಲ್ಪ ಇದ್ದರೆ ಮಾತ್ರ ಮುಂದುವರಿಯಿರಿ. ಅದಲ್ಲದಿದ್ದರೆ ಒಂದು ಮದುವೆಯಲ್ಲಿ ಈಗಾಗಲೇ ನೋವು ತಿಂದ ಆಕೆಗೆ ಮತ್ತೂ ಒಂದು ಪೆಟ್ಟು ಬಿದ್ದರೆ ಮುಂದೆ ಸಹಿಸಿಕೊಳ್ಳುವುದು ಇನ್ನೂ ಕಷ್ಟ. ಹಲವಾರು ಸೆಲೆಬ್ರಿಟೀಸ್ ತಮಗಿಂತ ಕಿರಿಯ ಹುಡುಗನನ್ನು ಮದುವೆಯಾಗಿ ಸುಖದಿಂದ ಇರುವವರೂ ಇದ್ದಾರೆ.

LEAVE A REPLY