ಜೀವಭಯದಿಂದ 3 ಬಾರಿ ಮನೆ ಬದಲಿಸಿದ್ದ ಇಲ್ಯಾಸ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸುಮಾರು 25ಕ್ಕೂ ಅಧಿಕ ಕ್ರಿಮಿನಲ್ ಕೃತ್ಯದಲ್ಲಿ ಶಾಮೀಲಾಗಿ ಜೈಲು ಸೇರಿ ಹೊರಬಂದಿದ್ದ ಇಲ್ಯಾಸಗೆ ಮೊದಲಿನಿಂದಲೂ ಪದೇ ಪದೇ ಹತ್ಯೆ ಭೀತಿ ಕಾಡುತ್ತಿತ್ತು. ಇದೇ ಕಾರಣಕ್ಕೆ ಈತ ಮೂರು ಬಾರಿ ತನ್ನ ಮನೆ ಬದಲಿಸಿದ್ದ..!ಮೂಲತಃ ಉಳ್ಳಾಲದ ಮಾಸ್ತಿಕಟ್ಟೆಯ ಸುಂದರಿಭಾಗ್ ನಿವಾಸಿಯಾಗಿದ್ದ ಇಲ್ಯಾಸ್ ಎಳೆಹರೆಯದಲ್ಲೇ ಕ್ರಿಮಿನಲ್ ಲೋಕಕ್ಕೆ ಕಾಲಿಟ್ಟಿದ್ದಾತ.

31ರ ಹರೆಯದ ಯೂತ್ ಕಾಂಗ್ರೆಸ್ ನಾಯಕ ಇಲ್ಯಾಸನ ತಂದೆ ಇಸ್ಮಾಯಿಲ್ ಉಳ್ಳಾಲದಲ್ಲಿ ಫ್ಯಾನ್ಸಿ ಜುವೆಲ್ಲರಿ ಮಾರಾಟಗಾರ. ಈತನ ಐವರು ಮಕ್ಕಳಲ್ಲಿ ಹಿರಿಯವನಾದ ಇಲ್ಯಾಸ್ 2006ರಿಂದಲೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಟಾರ್ಗೆಟ್ ಆಗಿದ್ದ.

ಮದುವೆ ಬಳಿಕ ಇಲ್ಯಾಸ್ ತನ್ನ ಮನೆಯನ್ನು ಕಾಟಿಪಳ್ಳಕ್ಕೆ ಶಿಫ್ಟ್ ಮಾಡಿಕೊಂಡಿದ್ದ. ಬಳಿಕ ವರ್ಷವೊಂದರ ಹಿಂದೆ ಕಾಟಿಪಳ್ಳದಿಂದ ಜಪ್ಪು ಕುಡ್ಪಾಡಿಯ ಪ್ಲ್ಯಾಟಿಗೆ ಮನೆ ಬದಲಿಸಿಕೊಂಡಿದ್ದ. ಈತನ ವಿರೋಧಿ ಬಣದ ಸಫ್ವಾನ್ ಮತ್ತು ದಾವೂದ್ ಗ್ಯಾಂಗಿನ ಸದಸ್ಯರೇ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪತ್ನಿ ಫರ್ಜಾನಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪತ್ನಿಗೂ ಈತನ ಕ್ರಿಮಿನಲ್ ಕೃತ್ಯಗಳ ಬಗ್ಗೆ ಸಂಫೂರ್ಣ ಅರಿವಿತ್ತು. ಸುಮಾರು 9 ಗಂಟೆ ಸುಮಾರಿಗೆ ಹಂತಕರು ಈತನ ಮನೆಗೆ ನುಗ್ಗಿದ್ದಾರೆ. ಈತನ ಸ್ನೇಹಿತರು ಯಾರೋ ಬಂದಿರಬೇಕೆಂದು ತಾಯಿ ಸಹಜವಾಗಿಯೇ ಬಾಗಿಲು ತೆರೆದು ಅವರಿಗೆ ಕಾಫಿ ಮಾಡಲು ಕೋಣೆಗೆ ಹೋಗಿದ್ದಾರೆ. ಅಷ್ಟರಲ್ಲಾಗಲೇ ಹಂತಕರು ತಮ್ಮ ಕೆಲಸ ಮುಗಿಸಿ ಪ್ಲ್ಯಾಟಿನಿಂದ ಹೊರನಡೆದಿದ್ದಾರೆ.

ಸಫ್ವಾನ್ ಕಡೆಯ ಹಂತಕರೇ ಈತನನ್ನು ಮುಗಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 2017ರ ಅಕ್ಟೋಬರ್ 5ರಂದು ಸಫ್ವಾನನನ್ನು ಚೊಕ್ಕಬೆಟ್ಟುವಿನ ಮನೆಯಿಂದ ಕಿಡ್ನಾಪ್ ಮಾಡಿ ಕೊಲೆ ಮಾಡಿ ಆಗುಂಬೆಘಾಟಿಯಲ್ಲಿ ಎಸೆಯಲಾಗಿತ್ತು. ಕೊಳೆತ ಸ್ಥಿತಿಯಲ್ಲಿ ಆತನ ಮೃತದೇಹ ನವೆಂಬರ್ 27ರಂದು ಪತ್ತೆಯಾಗಿತ್ತು.

ಜೈಲಿನಲ್ಲೇ ಇದ್ದಿದ್ದರೆ

ಸೇಫ್ ಆಗಿರುತ್ತಿದ್ದ

3 ದಿನ ಹಿಂದೆಯಷ್ಟೇ ಹೊರಬಂದು ಹೆಣವಾದ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಜೈಲಿನಿಂದ ಹೊರಬಾರದೇ ಇದ್ದಿದ್ದರೆ ಟಾರ್ಗೆಟ್ ಗೂಪಿನ ಇಲ್ಯಾಸ್ ಬಹುಶಃ ಸೇಫ್ ಆಗಿರುತ್ತಿದ್ದ. ಜಪ್ಪು ಕುಡ್ಪಾಡಿಯಲ್ಲಿನ ತನ್ನ ಪ್ಲ್ಯಾಟ್ ನಂಬರ್ 203ರಲ್ಲಿ ದುಷ್ಕರ್ಮಿಗಳ ಕತ್ತಿನೇಟಿಗೆ ಬಲಿಯಾಗಿದ್ದ ಇಲ್ಯಾಸ್ ಜಾಮೀನು ಪಡೆದುಕೊಂಡು ಹೊರಬಂದಿರುವುದೇ ಆತನ ಅಂತ್ಯಕ್ಕೆ ಕಾರಣವಾಯ್ತು.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದ ಹತ್ಯಾ ಯತ್ನ ಪ್ರಕರಣದಲ್ಲಿ ಇಲ್ಯಾಸ್ ಜೈಲು ಸೇರಿದ್ದ. ಹಲವು ಕ್ರಿಮಿನಲ್ ಅಪರಾಧಗಳಲ್ಲಿ ಶಾಮೀಲಾಗಿದ್ದ ಈತ ಜನವರಿ 10ರಂದು ಬಿಡುಗಡೆಗೊಂಡಿದ್ದ.

ಜನವರಿ 8ರಂದು ಜೈಲಿನಲ್ಲಿ ನಡೆದ ಕೈದಿಗಳ ನಡುವಿನ ಮಾರಾಮಾರಿಯಲ್ಲಿ ಇಲ್ಯಾಸ್ ಸೈಲೆಂಟ್ ಆಗಿದ್ದ. ಘಟನೆ ಬಳಿಕ ಸಿಸಿಟಿವಿ ಫೂಟೇಜ್ ನೋಡಿದ್ದ ಅಧಿಕಾರಿಗಳು ಇದರಲ್ಲಿ ಇಲ್ಯಾಸ್ ಪಾತ್ರ ಏನೂ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಜೈಲಿನಲ್ಲಿ ಹೊಡೆದಾಟವಾಗುತ್ತಿದ್ದ ಸಂದರ್ಭದಲ್ಲಿ ಅತ್ಯಂತ ಸನಿಹದಲ್ಲೇ ನಿಂತಿದ್ದ ಇಲ್ಯಾಸ್ ಯಾರನ್ನೂ ಬೆಂಬಲಿಸದೇ ಏಕಾಂಗಿಯಾಗಿ ನಿಂತಿದ್ದ. ಒಂದು ವೇಳೆ ಅಂದಿನ ಗಲಾಟೆಯಲ್ಲಿ ಈತ ಶಾಮೀಲಾಗಿರುತ್ತಿದ್ದರೆ ಈತನ ಜಾಮೀನು ವಜಾಗೊಂಡು ಮತ್ತೆ ಜೈಲಿನಲ್ಲೇ ಮುಂದುವರಿಯುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಲ್ಯಾಸ್ ವಿರುದ್ಧ ಕೆಲವು ವರ್ಷಗಳ ಹಿಂದೆಯೇ ಗೂಂಡಾ ಕಾಯ್ದೆ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು.

ಚಿಕ್ಕ ಪ್ರಾಯದಲ್ಲೇ ಕ್ರಿಮಿನಲ್ ಜೀವನಕ್ಕೆ ಕಾಲಿಟ್ಟ ಇಲ್ಯಾಸ್ 30ರ ಹರೆಯದಲ್ಲೇ ಹತ್ತುಹಲವು ಕೊಲೆ, ಕೊಲೆಯತ್ನ, ದೊಂಬಿ, ಅತ್ಯಾಚಾರ ಯತ್ನ, ಕಿಡ್ನಾಪ್, ಹಫ್ತಾ ಬೆದರಿಕೆ ಪ್ರಕರಣಗಳಲ್ಲಿ ಭಾಗಿಯಾÁಗಿದ್ದ.

`ನನ್ನ ಪುತ್ರ ಅಮಾಯಕ’

ಇಲ್ಯಾಸ್ ತಾಯಿ ಆಡಿಯೋ ವೈರಲ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : `ನನ್ನ ಪುತ್ರ ಅಮಾಯಕ. ಆತನ ಕೊಲೆ ನಡೆಸಿದವರನ್ನು ದೇವರು ಸುಮ್ಮನೇ ಬಿಡುವುದಿಲ್ಲ’ ಎಂದು ಮೃತ ಇಲ್ಯಾಸನ ತಾಯಿ ಕಿಡಿಕಾರಿ ಮಾತನಾಡಿದ್ದಾರೆ ಎನ್ನಲಾಗಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

“ಇಲ್ಯಾಸ್ ಟಾರ್ಗೆಟ್ ಗ್ರೂಪ್ ರಚಿಸಿಕೊಂಡಿದ್ದು ನಿಜ. ಹಾಗಂತ ಅದನ್ನು ದುರುಪಯೋಗಪಡಿಸಿಕೊಂಡಿಲ್ಲ. ಈ ಗ್ರೂಪಿಗೆ ನೊಂದವರು, ಸಾಲ ನೀಡದೇ ಸತಾವಣೆಗೆ ಒಳಗಾದವರು ದೂರು ನೀಡುತ್ತಿದ್ದರು. ಅಂಥವರಿಗೆ ಇಲ್ಯಾಸ್ ನೆರವು ನೀಡುತ್ತಿದ್ದ. ಹೀಗಾಗಿಯೇ ಆತ ಹಲವರ ಜೊತೆಗೆ ದ್ವೇಷ ಕಟ್ಟಿಕೊಳ್ಳುವಂತಾಯಿತು. ಉಳ್ಳಾಲದಲ್ಲಿ ನಡೆದ ಕೊಲೆ ಪ್ರಕರಣದ ವೇಳೆ ಕೊಲೆ ಘಟನೆಗಳು ನಡೆಯಬಾರದು, ಸಂತ್ರಸ್ತ ಕುಟುಂಬಕ್ಕೆ ಯಾರು ಗತಿ ಎಂದು ಹೇಳಿ ಮರುಗಿದ್ದ. ಇಲ್ಯಾಸ್ ವಿರುದ್ಧ ಪೊಲೀಸರು ಸಿಟ್ಟಿನಲ್ಲಿ ಕೇಸು ದಾಖಲಿಸಿದ್ದಾರೆ. ಆತನನ್ನು ಟಾರ್ಗೆಟ್ ಮಾಡಿದ್ದಾರೆ” ಎಂದು ಆಡಿಯೋದಲ್ಲಿ ವಿವರಿಸಲಾಗಿದೆ.ಆದರೆ ಇದರಲ್ಲಿರುವ ಧ್ವನಿ ಇಲ್ಯಾಸ್ ತಾಯಿಯದ್ದೆ ಅಥವಾ ಇದು ಸೃಷ್ಟಿಯೇ ಎಂಬುದರ ಬಗ್ಗೆ ಖಚಿತಪಟ್ಟಿಲ್ಲ.

ಮಂಗಳೂರಿನಲ್ಲಿ

ಗ್ಯಾಂಗ್ ವಾರ್‍ಗೆ

ಬಲಿಯಾದವರು

* 215 ಅಕ್ಟೋಬರ್ 25 : ತೊಕ್ಕೊಟ್ಟಿನಲ್ಲಿ ವಿಕ್ರಮ್ ಯಾನೆ ವಿಕ್ಕಿ ಬೋಳಾರ್

* 2015 ನವೆಂಬರ್ 13 : ಮಂಗಳೂರು ಜೈಲಿನಲ್ಲಿ ಮಾಡೂರು ಯೂಸುಫ್ ಹಾಗೂ ಗಣೇಶ್.

* 2017 ಫೆಬ್ರವರಿ 14 : ತಲಪಾಡಿಯಲ್ಲಿ ಕಾಲಿಯಾ ರಫೀಕ್

* 2017 ಜುಲೈ 15 : ವಾಮಂಜೂರಿನಲ್ಲಿ ಪವನರಾಜ್ ಶೆಟ್ಟಿ.

* 2017 ಸೆಪ್ಟೆಂಬರ್ 25 : ಫರಂಗಿಪೇಟೆಯಲ್ಲಿ ರಿಯಾಸ್ ಯಾನೆ ಜಿಯಾ ಅಡ್ಯಾರ್‍ಕಟ್ಟೆ ಹಾಗೂ ಫಯಾಸ್ ಅಲಿಯಾಸ್ ಪಯ್ಯ ಬಿರ್ಪುದಕಟ್ಟೆ.

* 2017 ಡಿಸೆಂಬರ್ 25 : ಕಂಕನಾಡಿ ಕುದ್ಕೋರಿಗುಡ್ಡದಲ್ಲಿ ಮೆಲ್ರಿಕ್ ಡಿಸೋಜ

* 2018 ಜನವರಿ 13 : ಜೆಪ್ಪು ಕುಡ್ಪಾಡಿಯಲ್ಲಿ ಇಲ್ಯಾಸ್ ಯಾನೆ ಟಾರ್ಗೆಟ್ ಇಲ್ಯಾಸ್

 

 

LEAVE A REPLY