ಅನಧಿಕೃತ ಪಾರ್ಕಿಂಗ್ ವಾಹನಗಳಿಗೆ ಟ್ರಾಫಿಕ್ ಪೋಲೀಸರಿಂದ ಬೀಗ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಬಸ್ಸು ನಿಲ್ದಾಣದ ಕೆಳ ಬದಿಯಲ್ಲಿ ಹಾದು ಹೋಗುವ ಕೆನರಾ ಬ್ಯಾಂಕ್ ರಸ್ತೆಯ ಬಾರ್ ಒಂದರ ಬಳಿಯಲ್ಲಿ ಅನಧಿಕೃತ ವಾಹನ ನಿಲುಗಡೆಗೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಕಡಿವಾಣ ಹಾಕಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಸ್ಥಳೀಯ ರಿಕ್ಷಾ ಚಾಲಕರು ಮತ್ತು ಸ್ಥಳೀಯರು ಸೇರಿ ಅನಧಿಕೃತ ವಾಹನ ನಿಲುಗಡೆಯಿಂದ ಆಗುತ್ತಿರುವ ತೊಂದರೆಗಳ ಕುರಿತು ಸುರತ್ಕಲ್ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಟ್ರಾಫಿಕ್ ಇನ್ಸ್‍ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ  ಸ್ಥಳದಲ್ಲಿ `ನೋ ಪಾರ್ಕಿಂಗ್’ ನಾಮಫಲಕ ಹಾಕಿದ್ದರು. ಆದರೂ ಕೆಲ ದ್ವಿಚಕ್ರ ವಾಹನಿಗರು ಸ್ಥಳದಲ್ಲಿ ವಾಹನ ನಿಲ್ಲಿಸುತ್ತಿದ್ದು ವಾಹನ ಸಂಚಾರಕ್ಕೆ ಕಷ್ಟವಾಗುತ್ತಿತ್ತು.ಶುಕ್ರವಾರ ಬೆಳಗ್ಗೆ ಮೂಲ್ಕಿ ಬಸ್ಸು ನಿಲ್ದಾಣದ ಬಳಿಯ ಅನಧಿಕೃತ ವಾಹನ ಪಾರ್ಕಿಂಗ್ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾಹನಗಳಿಗೆ ಲಾಕ್ ಮಾಡಿದ್ದಾರೆ ಹಾಗೂ ಕೇಸು ದಾಖಲಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ದಿಂದ ಮೂಲ್ಕಿ ಪೇಟೆಯಲ್ಲಿ ದ್ವಿಚಕ್ರ ಹಾಗೂ ಕಾರು, ರಿಕ್ಷಾ ವಾಹನಗಳ ನಿಲುಗಡೆಗೆ ಸ್ಥಳವಿಲ್ಲದಂತಾಗಿದ್ದು ಸವಾರರ ಹಾಗೂ ಚಾಲಕರ ಸ್ಥಿತಿ ಆಯೋಮಯವಾಗಿದೆ. ಹಳ್ಳಿಗಳಿಂದ ಬೈಕಿನಲ್ಲಿ ಬರುವ ವಾಹನ ಸವಾರರು ಪೇಟೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಿದ್ದು ಸ್ಥಳಾವಕಾಶ ಕೊರತೆ ವಾಹನಿಗರನ್ನು ಕಾಡುತ್ತಿದ್ದರೆ ಇನ್ನೊಂದೆಡೆ ಅನಧಿಕೃತ ಪಾರ್ಕಿಂಗಿನಿಂದ ವಾಹನ ಸವಾರರು ತಲೆನೋವು ಅನುಭವಿಸುತ್ತಿದ್ದರೆ.