ಅಕ್ರಮವಾಗಿ ಆಸ್ಪತ್ರೆ ವೈದ್ಯಕೀಯ ಸೊತ್ತು ಸಾಗಿಸುತ್ತಿದ್ದ ವಾಹನ ವಶ

ನಮ್ಮ ಪ್ರತಿನಿಧಿ ವರದಿ

ಹಳಿಯಾಳ : ಪಟ್ಟಣದಲ್ಲಿರುವ 100 ಹಾಸಿಗೆ ಸಾಮಥ್ರ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ವಿವಿಧ ವೈದ್ಯಕೀಯ ಪರಿಕರಗಳನ್ನು ಅಪಹರಿಸಿ ಅವುಗಳನ್ನು ತಮ್ಮ ವಸತಿಗೃಹದಲ್ಲಿ ಸಂಗ್ರಹಿಸಿಟ್ಟುಕೊಂಡು ರಾತ್ರಿ ಸಮಯದಲ್ಲಿ ಟಾಟಾ ಏಸ್ ವಾಹನದ ಮೂಲಕ ಹಳಿಯಾಳದಿಂದ ಮಾವಿನಕೊಪ್ಪ ಮಾರ್ಗವಾಗಿ ಅಕ್ರಮವಾಗಿ ಧಾರವಾಡಕ್ಕೆ ಸಾಗಿಸುತ್ತಿದ್ದ ವಾಹನವನ್ನು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪತ್ತೆ ಹಚ್ಚಿ ಹಳಿಯಾಳ ಪೊಲೀಸರ ವಶಕ್ಕೆ ನೀಡಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 7 ವರ್ಷದಿಂದ ಜನರಲ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಮೀರ ಸಾನು ಅವರು ಇತ್ತೀಚಿಗೆ ಧಾರವಾಡದ ಜಿಲ್ಲಾಸ್ಪತ್ರೆಗೆ ವರ್ಗಾವಣೆಗೊಂಡಿದ್ದರು. ಸೆಪ್ಟೆಂಬರ್ 4ರಂದು ರಾತ್ರಿ ಸುಮಾರು 11 ಗಂಟೆಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಸೇರಿದ 10 ಕಬ್ಬಿಣದ ಮಂಚಗಳು, 15 ಪ್ಲಾಸ್ಟಿಕ್ ಕುರ್ಚಿಗಳು, 2 ಡೈನಿಂಗ್ ಟೇಬಲ್, 2 ಡ್ರಮ್, 6 ಕಫ ಹೊರತೆಗೆಯುವ ಮಶೀನು, 8 ಕಬ್ಬಿಣದ ಎಂಗೆಲ್, 3 ಚಿಕ್ಕ ಡೈನಿಂಗ್ ಟೇಬಲ್ ಮತ್ತು 1 ತಾಡಪತ್ರಿ ಸೇರಿದಂತೆ ಇನ್ನಿತರ ವೈದ್ಯಕೀಯ ಸಲಕರಣೆಗಳನ್ನು ತಮ್ಮ ವಸತಿಗೃಹದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಅವುಗಳನ್ನು ಧಾರವಾಡಕ್ಕೆ ಸೇರಿದ ಟಾಟಾ ಏಸ್ ವಾಹನದ ಮೂಲಕ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಡಿಎಸ್ಸೆಸ್ ಸಂಘಟನೆಯ ಪದಾಧಿಕಾರಿಗಳು ರಾತ್ರಿ ಸುಮಾರು 11 ಗಂಟೆಗೆ ಅದನ್ನು ಹಿಂಬಾಲಿಸಿ ಅಂತಿಮವಾಗಿ ಹಳಿಯಾಳ ಪಟ್ಟಣದಿಂದ ಸುಮಾರು 8 ಕಿ ಮೀ ದೂರದಲ್ಲಿರುವ ಮಾವಿನಕೊಪ್ಪ ಅರಣ್ಯ ತನಿಖಾ ಗೇಟಿನಲ್ಲಿ ತಡೆಗಟ್ಟಿ ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.