ಹೊನ್ನಾವರದಲ್ಲಿ ಮೀನುಗಾರರ ಅನಧಿಕೃತ ಗುಡಿಸಲು ತೆರವು

ಮೀನುಗಾರರು ನಿರ್ಮಿಸಿಕೊಂಡಿದ್ದ ಮೀನು ಸಂಗ್ರಹಣೆ ಮಾಡುವ ಶೆಡ್ ಮತ್ತು ಗುಡಿಸಲುಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಿರುವುದು

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ತಾಲೂಕಿನ ಕಾಸರಕೋಡ ಟೊಂಕಾದಲ್ಲಿ ಬಂದರು ಅಭಿವೃದ್ಧಿಗಾಗಿ ಕಾಯ್ದಿರಿಸಿದ ಸ್ಥಳದಲ್ಲಿರುವ 29 ಅನಧಿಕೃತ ಗುಡಿಸಲುಗಳನ್ನು ಕಂದಾಯ ಹಾಗೂ ಬಂದರು ಇಲಾಖೆಯ ಅಧಿಕಾರಿಗಳು ಪೊಲೀಸ್ ಬಂದೋಬಸ್ತಿನಲ್ಲಿ ಜೆಸಿಬಿ ಯಂತ್ರ ಬಳಸಿ ತೆರವುಗೊಳಿಸಿದರು.

ಕಾಸರಕೋಡ ಟೊಂಕಾದ 305ರಲ್ಲಿ ಸುಮಾರು 39 ಎಕರೆ ವಿಸ್ತೀರ್ಣದ ಭೂಮಿಯನ್ನು ಬಂದರು ಅಭಿವೃದ್ಧಿಗಾಗಿ ಕಾಯ್ದಿರಿಸಲಾಗಿತ್ತು. ಮೀನುಗಾರರು ಅಕ್ರಮವಾಗಿ ಮೀನು ಸಂಗ್ರಹಣೆ ಮಾಡುವ ಶೆಡ್ (ಕವಣೆ) ಹಾಗೂ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಅತಿಕ್ರಮಣದಾರರಿಗೆ ತೆರವುಗೊಳಿಸಲು ಜಿಲ್ಲಾಡಳಿತ ನವೆಂಬರ್ 29ರಂದು ನೋಟಿಸ್ ಜಾರಿ ಮಾಡಿತ್ತು. ಆದರೂ ಅತಿಕ್ರಮಣದಾರರು ಗುಡಿಸಲು ಹಾಗೂ ಶೆಡ್ಡುಗಳನ್ನು ತೆರವುಗೊಳಿಸಿರಲಿಲ್ಲ. ಇದನ್ನು ಗಮನಿಸಿದ ಜಿಲ್ಲಾಡಳಿತ ಡಿಸೆಂಬರ್ 3ರಂದು ಅಂತಿಮ ನೋಟಿಸ್ ನೀಡಿತ್ತು. ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಆದೇಶದಂತೆ ತೆರವುಗೊಳಿಸದ ಶೆಡ್ ಮತ್ತು ಗುಡಿಸಲುಗಳನ್ನು ತಹಶೀಲ್ದಾರ ವಿ ಆರ್ ಗೌಡ ನೇತೃತ್ವದಲ್ಲಿ ಕಂದಾಯ ಹಾಗೂ ಬಂದರು ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.