ಗೋರಕ್ಷಕ ತಂಡಕ್ಕೆ ಅಕ್ರಮ ಗೋಸಾಗಾಟದ ವ್ಯಕ್ತಿ ಬಲಿ

ಅಲ್ವಾರ : ರಾಜಸ್ತಾನದ ಅಲ್ವಾರದಲ್ಲಿ ಗೋವು ಸಾಗಿಸುತ್ತಿದ್ದ ಮಂದಿಯ ಮೇಲೆ ಎರಡು ದಿನಗಳ ಹಿಂದೆ ಗೋರಕ್ಷಕ ತಂಡವು ನಡೆಸಿದ ಬರ್ಬರ ಹಲ್ಲೆ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪೆಹಲೂ ಖಾನ್ (55) ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಹಲ್ಲೆ ಘಟನೆಯ ವೀಡಿಯೋ ವ್ಯಾಪಕ ಪ್ರಸಾರಗೊಂಡಿದ್ದು, ಘಟನೆಗೆ ಸಂಬಂಧಿಸಿ ಈವರೆಗೆ 10 ಮಂದಿಯನ್ನು ಬಂಧಿಸಲಾಗಿದೆ.

ಮೃತ ಖಾನ್ ಹರ್ಯಾಣದ ವ್ಯಕ್ತಿ. ಜೈಪುರದಲ್ಲಿ ನಡೆಯುತ್ತಿದ್ದ `ಪಶು ಮೇಳ’ದಿಂದ ಈ ಗೋವುಗಳನ್ನು ಖರೀದಿಸಿ ಸಾಗಿಸಲಾಗುತ್ತಿದೆ ಎಂದು ಖಾನ್ ಮತ್ತು ಅವರೊಂದಿಗಿದ್ದ ನಾಲ್ವರು ದಾಖಲೆಯೊಂದಿಗೆ ವಿವರಿಸಿದರೂ, ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ಗೋರಕ್ಷಕರ ತಂಡ  ಪಿಕಪ್ಪಿನಲ್ಲಿದ್ದ ಎಲ್ಲರನ್ನೂ ಹೊರಗೆಳದು ಹಲ್ಲೆ ನಡೆಸಿದ್ದಾರೆ.

ಈ ಘಟನೆಯನ್ನು ಸ್ಥಳೀಯರು ಚಿತ್ರೀಕರಿಸಿದ್ದರು. ಗೋವು ಸಾಗಿಸುತ್ತಿದ್ದವರನ್ನು ಹೆದ್ದಾರಿಯಲ್ಲಿ ಅಟ್ಟಾಡಿಸಿ ಹಲ್ಲೆ ನಡೆಸುತ್ತಿರುವ ದೃಶ್ಯ ವೀಡಿಯೋದಲ್ಲಿ ದಾಖಲಾಗಿದೆ. ಗಾಯಗೊಂಡಿರುವ ಖಾನ್ ಸಹವರ್ತಿಗಳು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಇಷ್ಟೊಂದು ಬರ್ಬರವಾಗಿದ್ದರೂ ಪೊಲೀಸ್ ಅಧಿಕಾರಿಯೊಬ್ಬರು ಗೋರಕ್ಷಕರ ಕ್ರಮ ಸಮರ್ಥಿಸಿರುವುದಲ್ಲದೆ, ಸಂತ್ರಸ್ತರ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ.

“ಕೆಲವು ಗೋಗಳ್ಳರು ಜೈಪುರದಿಂದ ಗೋವುಗಳನ್ನು ದಿಲ್ಲಿಗೆ ಸ್ಮಗ್ಲಿಂಗ್ ಮಾಡುತ್ತಿದ್ದಾರೆಂದು ಪೊಲೀಸರಿಗೆ ಯಾರೋ ಮಾಹಿತಿ ನೀಡಿದ್ದರು. ಬೆಹ್ರೋಡ್ ಪೊಲೀಸರು ಕೆಲವು ಟ್ರಕ್ಕುಗಳ ತಡೆದರೆ, ಕೆಲವು ತಪ್ಪಿಸಿಕೊಂಡು ಹೋಗಿವೆ. ಇಂತಹ ಟ್ರಕ್ಕುಗಳನ್ನು ಸಾರ್ವಜನಿಕರು ತಡೆಗಟ್ಟಿ, ಚಾಲಕರಿಗೆ ಥಳಿಸಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.