ಉಜಿರೆ ದಲಿತರ ವಿವಾದಿತ ಜಾಗದಲ್ಲಿ ತಲೆಎತ್ತಿರುವ ಅಕ್ರಮ ಕಟ್ಟಡದ ಲೀಸ್ ಮಾಫಿಯಾ ಕೊಲೆಗೆ ಪ್ರಚೋದಿಸಿತೇ ?

ಕೊಲೆಯಾದ ಅಣ್ಣು

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಉಜಿರೆಯ ಎಸ್ ಆರ್ ಬಾರ್ ಮುಂದೆ ಮೊನ್ನೆ ನಡೆದ ಕೊಲೆಗೆ ಜಾಗದ ತಕರಾರು ಕಾರಣವೆಂದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಈ ಕೊಲೆಯ ಹಿಂದೆ ಹೆದ್ದಾರಿ ಬದಿಯಲ್ಲಿರುವ ಬೆಲೆ ಬಾಳುವ ಮುಗ್ಧ ದಲಿತರ ಭೂಮಿಯ ಸುತ್ತ ಲೀಸ್ ಮಾಫಿಯಾ ಅಥವಾ ಬಾಡಿಗೆ ಹೆಸರಲ್ಲಿ ವ್ಯವಸ್ಥಿತವಾಗಿ ಕಬಳಿಸಲು ಹೊಂಚು ಹಾಕುತ್ತಿರುವವರ ದಂಡೇ ಇತ್ತೆಂಬ ವಿಚಾರ ಸ್ಥಳೀಯವಾಗಿ ಇದೀಗ ಬಲವಾದ ಸಂಶಯಕ್ಕೆ ಕಾರಣವಾಗಿದೆ. ಇದೀಗ ದಲಿತ ಯುವಕನ ಕೊಲೆಗೆ ಕಾರಣವಾದ ದಲಿತರ ವಿವಾದಿತ ಭೂಮಿಯಲ್ಲಿ ಲೀಸ್ ಅಥವಾ ಬಾಡಿಗೆ ಆಧಾರದಲ್ಲಿ ವ್ಯವಹಾರ ನಡೆಸಲು ಅಕ್ರಮವಾಗಿ ತಲೆಎತ್ತಿರುವ ದಲಿತೇತರ ವ್ಯಕ್ತಿಗಳ ವಾಣಿಜ್ಯ ಕಟ್ಟಡವೇ ಕೊಲೆಗೆ ಕಾರಣವಾಯಿತೇ ಎಂಬ ಬಲವಾದ ಸಂಶಯ ವ್ಯಕ್ತವಾಗುತ್ತಿದೆ.

ಉಜಿರೆಯ ಎಸ್ ಆರ್ ಬಾರ್ ಬಳಿ ಬುಧವಾರ ರಾತ್ರಿ ಸ್ಥಳೀಯ ಅಣ್ಣು ಎಂಬುವರು ಪಕ್ಕದ ಮನೆಯ ಸಂಬಂಧಿಕರಾದ ಗಿರೀಶ್ ಮತ್ತು ವೆಂಕಟೇಶ್ ಎಂಬುವರು ಸುತ್ತುವರಿದು ಇಬ್ಬರೂ ಚೂರಿಯಿಂದ ಇರಿದು ಕೊಲೆಗೈದಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬ ಸಂಶಯ ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ. ಏಕೆಂದರೆ ದಲಿತ ಕುಟುಂಬಗಳ ಮಧ್ಯೆ ವಿವಾದಕ್ಕೆ ಕಾರಣವಾಗಿದ್ದ ಸುಮಾರು ಹತ್ತು ಎಕ್ರೆ ಜಾಗದ ಮೇಲೆ ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಿಸಿದ್ದ  ಹಲವು ದಲಿತೇತರ ವ್ಯಕ್ತಿಗಳ ಭೂವ್ಯಾಮೋಹದ ಕಣ್ಣಿತ್ತು.

ಇದೇ ದಲಿತರ ಭೂಮಿಯನ್ನು ಇತ್ತ ನೇರವಾಗಿ ಅಥವಾ ಸುಲಭವಾಗಿ ಕಬಳಿಸಲು ಕಷ್ಟವಿದ್ದ ಕಾರಣ ಜಾಗದ ತಕರಾರಿನಲ್ಲಿ ಉಂಟಾಗಿದ್ದ ಗೊಂದಲ ಮನಸ್ತಾಪ, ದ್ವೇಷ ಹೊಂದಿದ್ದ ಮುಗ್ಧ ದಲಿತ ಕುಟುಂಬಗಳ ನಡುವೆ ತಪ್ಪು ಮಾಹಿತಿ ಬಿತ್ತಿ ತಮ್ಮ ಲಾಭಕ್ಕಾಗಿ ಪರಸ್ಪರ ದ್ವೇಷದ ಬೆಂಕಿಗೆ ತುಪ್ಪ ಸುರಿದು ಲೀಸ್ ಆಧಾರದಲ್ಲಿ ಲಾಭ ಪಡೆಯುವವರ ದಂಡೇ ಉಜಿರೆಯಲ್ಲಿದೆ ಎಂಬ ಆರೋಪ ಕೇಳಿಬಂದಿದೆ. ವಿವಾದಿತ ಜಾಗದಲ್ಲಿ ವಾಸ್ತವ್ಯದಲ್ಲಿರುವ ದಲಿತ ಕುಟುಂಬಗಳು ಸಂಬಂಧಿಕರಾಗಿದ್ದು, ಜಾಗದ ತಕರಾರಿನ ಕಾರಣಕ್ಕಾಗಿಯೇ ಶತ್ರುಗಳಾಗಿ ಹೋಗಿದ್ದರು.

ಉಜಿರೆ ಪೇಟೆ ಸಮೀಪ ಚಾರ್ಮಾಡಿ ರಸ್ತೆಗೆ ತಾಗಿಕೊಂಡು ಸುಮಾರು ಹತ್ತು ದಲಿತ ಕುಟುಂಬಗಳಿಗೆ ಹತ್ತು ಎಕ್ರೆಯಷ್ಟು ಜಮೀನು ಮಂಜೂರಾಗಿದ್ದರೂ ಸರಿಯಾಗಿ ಗಡಿ ಗುರುತಿಸುವ ಕಾರ್ಯ ನಡೆಯದ ಪರಿಣಾಮ ದಲಿತ ಕುಟುಂಬಗಳ ನಡುವೆ ಗೊಂದಲ, ಸಂಶಯಗಳಿಗೆ ಕಾರಣವಾಗಿ ಆಗಾಗ ಗಲಾಟೆಗಳು ನಡೆಯುತ್ತಿತ್ತು. ಕೊಲೆಯಾದ ಅಣ್ಣು ಹಾಗೂ ಆರೋಪಿಗಳಾದ ಗಿರೀಶ್ ಮತ್ತು ವೆಂಕಟೇಶ್ ಅವರು ಸಮೀಪದಲ್ಲಿಯೇ ವಾಸಿಸುತ್ತಿದ್ದಾರೆ. ಎರಡೂ ದಲಿತ ಕುಟುಂಬಗಳ ಮಧ್ಯೆ ಕೆಲವು ವರ್ಷಗಳಿಂದ ಜಾಗದ ತಕರಾರಿದ್ದು, ತಾವು ಅಪೇಕ್ಷಿಸಿದ ತಮ್ಮ ಪಾಲಿನ ಭೂಮಿಗಾಗಿ ಹೋರಾಡುತ್ತಿದ್ದ ಅಣ್ಣು ಕೊಲೆಯಾಗಿದ್ದಾರೆ.

ಹೆದ್ದಾರಿ ಬದಿಯಲ್ಲಿದ್ದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನು ಇದಾಗಿದ್ದು, ಇನ್ನೊಂದೆಡೆ ಸ್ಥಳೀಯ  ಖಾಸಗಿ ವ್ಯಕ್ತಿಗಳು ಇದೇ ಜಾಗದಲ್ಲಿ ಹತ್ತು ಸೆನ್ಸ್ ಜಾಗವನ್ನು ಲೀಸ್ ನೆಪದಲ್ಲಿ ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಎರಡು ಮೂರು ದಲಿತ ಕುಟುಂಬಗಳ ಮಧ್ಯೆ ಉಂಟಾಗಿದ್ದ ಜಗಳ, ವಿವಾದ, ಲೀಸ್ ಮಾಫಿಯಾಗಳಿಂದ ದ್ವೇಷವಾಗಿ ಪರಿಣಮಿಸಿತ್ತು. ಈ ಪೈಕಿ ಒಂದು ಭೂವಿವಾದವು ನ್ಯಾಯಾಲಯದ ಮೆಟ್ಟಲೇರಿ ಒಂದು ಕುಟುಂಬ ನ್ಯಾಯಾಲಯದಿಂದ ತಡೆಪಡೆದುಕೊಳ್ಳುವ ಹಂತದಲ್ಲಿರುವಾಗಲೇ ಇದೀಗ ವಿವಾದವು ಒಂದು ಜೀವವನ್ನು ಬಲಿ ತೆಗೆದುಕೊಂಡಿದ್ದು, ಈ ಪೂರ್ವಯೋಜಿತ ಕೊಲೆಯ ಹಿಂದೆ ಜಾಗದ ಲೀಸ್ ಮಾಫಿಯಾದ ಕೈವಾಡವಿದೆಯೇ ? ದಲಿತ ಯುವಕರಿಗೆ ಆಮಿಷ ನೀಡಿ ಕೊಲೆಗೆ ಪ್ರಚೋದಿಸಲಾಯಿತೇ ? ಎಂಬ ಬಲವಾದ ಸಂಶಯಗಳು ಸ್ಥಳೀಯರಿಂದ ವ್ಯಕ್ತವಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.