ಅನಧಿಕೃತ ಬ್ಯಾನರ್ ತೆರವು ಕಾರ್ಯಾಚರಣೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಏಪ್ರಿಲ್ 1ರಿಂದ ಅನಧಿಕೃತ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್‍ಗಳ ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದ ಮಂಗಳೂರು ಮೇಯರ್ ಅವರ ಮಾತಿನಂತೆ ಇದೀಗ ಮಂಗಳೂರು ನಗರ ಪಾಲಿಕೆ ಅಧಿಕಾರಿಗಳು ಗುರುವಾರದಿಂದ ಅನಧಿಕೃತ ಬ್ಯಾನರ್‍ಗಳ ತೆರವು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಗುರುವಾರ ಬೆಳಿಗ್ಗೆ ಪೊಲೀಸ್ ರಕ್ಷಣೆಯಲ್ಲಿ ಪಾಲಿಕೆಯ ಕೆಲವು ಅಧಿಕಾರಿಗಳು, ಸಿಬ್ಬಂದಿಗಳು ನಗರದ ಹಲವು ಕಡೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಬ್ಯಾನರ್, ಬಂಟಿಂಗ್ಸ್ ತೆರವು ಗೊಳಿಸಿದ್ದಾರೆ. ಸ್ಟೇಟ್ ಬ್ಯಾಂಕ್, ಹಂಪನ್‍ಕಟ್ಟೆ, ಮಿಲಾಗ್ರಿಸ್, ಮಾರ್ಕೆಟ್ ರೋಡ್, ಜಿ ಎಚ್ ಎಸ್ ರಸ್ತೆ, ಕೆ ಎಸ್ ರಾವ್ ರಸ್ತೆ, ಲಾಲಭಾಗ್ ಹೀಗೆ ಹಲವು ಕಡೆಗಳಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಬ್ಯಾನರ್‍ಗಳನ್ನು ತೆರವುಗೊಳಿಸಿ  ನಿರ್ದಾಕ್ಷಿಣ್ಯವಾಗಿ ಇವುಗಳನ್ನು ಎತ್ತಿ ಗಾಡಿಗೆ ತುಂಬಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಲವು ಅಂಗಡಿಗಳ ಮಾಲಕರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಯೂ ನಡೆಸಿದರು. ಮಾರ್ಗ ಪಕ್ಕದಲ್ಲಿ ಇಡಲಾಗಿದ್ದ ಹೊಟೇಲುಗಳ ಬೋರ್ಡುಗಳು, ಶಾಂಪಿಂಗ್ ಕಾಂಪ್ಲೆಕ್ಸ್‍ಗಳ ಜಾಹಿರಾತು ಫಲಕಗಳನ್ನು ಕೂಡಾ ತೆರವುಗೊಳಿಸಲಾಯಿತು.

ಈ ಕಾರ್ಯಾಚರಣೆ ನಿರಂತರ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.