ಅಕ್ರಮ ಮರಳು ಅಡ್ಡೆಗೆ ಐಜಿ ಭೇಟಿ

ಅಮಾಯಕರ ಬಿಡುಗಡೆಗೆ ಮಹಿಳೆಯರಿಂದ ಮನವಿ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅಕ್ರಮ ಮರಳು ಅಡ್ಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಅನಿರೀಕ್ಷಿತ ದಾಳಿ ನಡೆಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ಹಾಗೂ ಸಹಾಯಕ ಆಯುಕ್ತೆ ಶಿಲ್ಪಾ ನಾಗ್ ಅವರ ಕೊಲೆ ಯತ್ನ ನಡೆಸಿದ್ದ ಘಟನೆಗೆ ಸಂಬಂಧಿಸಿ ಈ ಭೇಟಿ ನಡೆಸಲಾಗಿತ್ತು.

ಈ ಸಂದರ್ಭ ಐಜಿಪಿಯವರನ್ನು ಭೇಟಿ ಮಾಡಿದ ಅಲ್ಲಿನ ಮುಸ್ಲಿಂ ಮಹಿಳೆಯರು, “ಪೊಲೀಸರು ಅಮಾಯಕ ಯುವಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ನಿಜವಾದ ಆರೋಪಿಗಳನ್ನು ಬಂಧಿಸದೇ ರಜೆಯಲ್ಲಿ ಊರಿಗೆ ಬಂದಿರುವ ಅಮಾಯಕರನ್ನು ಬಂಧಿಸಿರುವುದು ಸರಿಯಲ್ಲ. ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಬೇಕು” ಎಂಬುದಾಗಿ ಮನವಿ ಮಾಡಿದರು.  ಈ ಸಂದರ್ಭ ಪ್ರತಿಕ್ರಿಯಿಸಿದ ಐಜಿಪಿ ಹರಿಶೇಖರನ್, ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದರು. ಅಕ್ರಮ ಮರಳುಗಾರಿಕೆ ಕಾನೂನಿನ ಪ್ರಕಾರ ಉಲ್ಲಂಘನೆಯಾಗಿದ್ದು, ಗ್ರಾಮಸ್ಥರು ಅದನ್ನು ತಡೆಯುವಲ್ಲಿ ಯತ್ನಿಸಬೇಕು ಎಂದೂ ಹೇಳಿದರು.