ಸ್ಪರ್ಧಾತ್ಮಕವಾಗಿ ಹೆಚ್ಚು ಮಕ್ಕಳನ್ನು ಹುಟ್ಟಿಸಲು ಕ್ರೈಸ್ತರಿಗೆ ಬಿಷಪ್ ಕರೆ

ಇಡುಕ್ಕಿ : ಕುತೂಹಲಕಾರಿ ಬೆಳವಣಿಗೆ ಯೊಂದರಲ್ಲಿ ಕ್ರೈಸ್ತ ಬಾಂಧವರಿಗೆ ಮುಂಚಿತವಾಗಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದೇಶ ನೀಡಿರುವ ಇಡುಕ್ಕಿ ಬಿಷಪ್ ಮಾರ್ ಮ್ಯಾಥಿವ್ ಅನಿಕ್ಕುಝಿಕ್ಕಟ್ಟಿಲ್,  ಧವರ್iಪ್ರಾಂತ್ಯದ ಸದಸ್ಯರು ಸ್ಪರ್ಧಾತ್ಮಕವಾಗಿ ಸಂತಾನೋತ್ಪತ್ತಿ ಕಾರ್ಯದಲ್ಲಿ ಭಾಗವಹಿಸ ಬೇಕೆಂದು ಕರೆ ನೀಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಅವರ ಶುಭಾಶಯ ಸಂದೇಶ ಇಡುಕ್ಕಿ ಧರ್ಮಪ್ರಾಂತ್ಯದ ಮಾಸಿಕ ಬುಲೆಟಿನ್ `ಸಹ್ಯನಾದಂ’ ಇದರಲ್ಲಿ  ಪ್ರಕಟವಾಗಿದ್ದು ಈ ಪತ್ರದಲ್ಲಿ ಅವರು ಜನನ ನಿಯಂತ್ರಣ ಕ್ರಮಗಳು ಸ್ವಾರ್ಥ ಮತ್ತು ಅಹಂಕಾರದಿಂದ ಕೂಡಿದೆ ಎಂದಿದ್ದಾರೆ.

ಕುಟುಂಬ ಯೋಜನೆಯನ್ನು ಕಟುವಾಗಿ ಟೀಕಿಸಿರುವ ಬಿಷಪ್ ಪತ್ರವನ್ನು ಈ ತಿಂಗಳ ಒಂದು ಭಾನುವಾರ ಧರ್ಮಪ್ರಾಂತ್ಯದ ಎಲ್ಲಾ ಪ್ಯಾರಿಶುಗಳಲ್ಲಿ ಓದಲಾಗುವುದು. “ಹೊಸ ಜೀವದ ಹುಟ್ಟನ್ನು ತಡೆಯುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ” ಎಂದು ತಮ್ಮ ಪತ್ರದಲ್ಲಿ ಹೇಳಿರುವ ಬಿಷಪ್, “ಜನಸಂಖ್ಯಾ ಹೆಚ್ಚಳ ಹಾನಿಕರ ಎಂದು ಹೇಳುವ ಜನನ ನಿಯಂತ್ರಣ ಪ್ರತಿಪಾದಕರು ತಾವು ಕೂಡ ಜನಸಂಖ್ಯೆಯ ಭಾಗವಾಗಿರುವುದನ್ನು ತಿಳಿಯಬೇಕು. ತಾವು ಜನಸಂಖ್ಯೆಯ ಭಾಗವಾಗಿ ಜನನ ನಿಯಂತ್ರಣ ತರಬೇಕೆಂದು ಹೇಳುವವರು ಸ್ವಾರ್ಥಿಗಳು. ಸಂತಾನೋತ್ಪತ್ತಿ ಸಾಮಥ್ರ್ಯ ಇರುವ ತನಕ ಪುರುಷರು ಮತ್ತು ಮಹಿಳೆಯರು  ಮಕ್ಕಳನ್ನು ಪಡೆಯಲು ಪ್ರಯತ್ನಿಸಬೇಕು.  ತಾತ್ಕಾಲಿಕ ಅಥವಾ ಶಾಶ್ವತ ಜನನ ನಿಯಂತ್ರಣ ಕ್ರಮಕ್ಕೆ ಮೊರೆ ಹೋಗುವವರಿಗೆ ದಯನೀಯ ಬದುಕು ಕಾಯುತ್ತಿದೆ” ಎಂದು ಬಿಷಪ್ ಪತ್ರ ಹೇಳಿದೆ.

“ದೇವರ ಮೇಲಿನ ನಂಬಿಕೆ ಕಡಿಮೆಯಾಗಿರುವುದೇ ಹಲವರು ಮಕ್ಕಳು ಬೇಡ ಎಂದು ಹೇಳಲು ಕಾರಣ. ಯುವಜನರು ವಿವಾಹವಾಗುವಂತೆ ಪ್ರೇರೇಪಿಸಬೇಕು. ಮದುವೆಗೆ ಅಡ್ಡಿ  ಮಾಡುವವರು ಹೊಸ ಜೀವವೊಂದರ ಹುಟ್ಟಿಗೆ ಅಡ್ಡಿಯಾಗಿದ್ದಾರೆ” ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.