ಕೆಲಸಕ್ಕೆ ಹೋಗಲು ಮನಸ್ಸಿಲ್ಲದ ಯುವಕನಿಂದ ಅಪಹರಣ ನಾಟಕ

ಸಾಂದರ್ಭಿಕ ಚಿತ್ರ

 ಬೆಂಗಳೂರು : ಉದ್ಯೋಗಕ್ಕೆ ಹೋಗಲು ಮನಸ್ಸಿಲ್ಲದ ಪೀಣ್ಯದ 21 ವರ್ಷದ ಯುವಕನೊಬ್ಬ ಅಪಹರಣ ನಾಟಕ ಸೃಷ್ಟಿಸಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಅವರಿಂದ ಎಚ್ಚರಿಕೆ ಪಡೆದಿದ್ದಾನೆ.

ಮೂಲತಃ ಬಳ್ಳಾರಿಯ ಸಂಡೂರು ನಿವಾಸಿಯಾದ ಮಾರುತಿ ಎಂಬ ಯುವಕ ಪೀಣ್ಯದ ತನ್ನ ಮಾವನ ಮನೆಯಲ್ಲಿ ನೆಲೆಸಿದ್ದು ಸ್ಥಳೀಯ ಫ್ಯಾಕ್ಟರಿಯೊಂದರಲ್ಲಿ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದ. ಕಳೆದ ವಾರ ಆತ ತನ್ನ ಮಾವನಿಗೆ ಫೋನ್ ಮಾಡಿ ತಾನು ಎಟಿಎಂ ಒಂದರಿಂದ ಹಿಂದಿರುಗುತ್ತಿದ್ದ ವೇಳೆ ತನ್ನನ್ನು ಐದು ಮಂದಿಯ ತಂಡವೊಂದು ಅಪಹರಿಸಿದೆ ಎಂದು ಸುಳ್ಳು ಹೇಳಿದ್ದ. ಆತನ ಮಾವ ಕೂಡಲೇ ಪೊಲೀಸರಿಗೆ  ಮಾಹಿತಿ ನೀಡಿದ್ದು ಪೊಲೀಸರು ಆತನ  ಮೊಬೈಲ್ ಸಂಪರ್ಕಿಸಲು ಯತ್ನಿಸಿದ್ದರೂ ಅದು ಸ್ವಿಚ್ಡ್ ಆಫ್ ಆಗಿತ್ತು.

ಕೊನೆಗೆ ಮಾಹಿತಿಯೊಂದನ್ನಾಧರಿಸಿ ಆತನನ್ನು ಮೆಜಸ್ಟಿಕ್ ಪ್ರದೇಶದಲ್ಲಿ ಪತ್ತೆ ಹಚ್ಚಿ ಆತನ ನಾಟಕ ಅರಿತು ಎಚ್ಚರಿಕೆ ನೀಡಿ ಮನೆಯವರಿಗೆ ಹಸ್ತಾಂತರಿಸಲಾಗಿತ್ತು.

ನಿಜ ಸಂಗತಿಯೇನೆಂದರೆ, ಕಲಿಯುವುದರಲ್ಲಿ ಹಿಂದೆ ಇದ್ದ ಆತ ಕೆಟ್ಟ ಸಹವಾಸಕ್ಕೆ ಬೀಳಬಹುದೆಂಬ ಭಯದಿಂದ ಆತನ ಕುಟುಂಬ ಆತನನ್ನು ಮಾವನ ಮನೆಗೆ ಕಳುಹಿಸಿತ್ತು. ಮಾವ ಆತನಿಗೆ ಮೆಕ್ಯಾನಿಕ್ ಉದ್ಯೋಗ ಕೊಡಿಸಿದ್ದರೂ ಅದು ಆತನಿಗೆ ಇಷ್ಟವಿಲ್ಲದ ಕಾರಣ ಈ ಅಪಹರಣ ನಾಟಕ ಸೃಷ್ಟಿಸಿದ್ದ.