ಐಸಿಐಸಿಐ ಬ್ಯಾಂಕ್ ಉದ್ಯೋಗಿ ನೇಣಿಗೆ

ಕಾರಣ ನಿಗೂಢ

 ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಪುತ್ತೂರಿನ ಐಸಿಐಸಿಐ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದ ಮತ್ತು ಸ್ವಂತವಾಗಿ ಹೋಂ ಪ್ರೊಡಕ್ಟ್ ಬೇಕರಿಯೊಂದನ್ನು ಹೊಂದಿದ್ದ ಉದ್ಯಮಿ ನಿಡ್ಪಳ್ಳಿ ಗ್ರಾಮದ ಪಳಂಬೆ ನಿವಾಸಿ ಹರೀಶ್‍ಪೂಜಾರಿ (30) ತನ್ನ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಘಟನೆ ನಡೆದಿದ್ದು, ಪ್ರಕರಣ ಕೆಲವು ನಿಗೂಢತೆಗೆ ಕಾರಣವಾಗಿದೆ.

ಸದಾ ಚಟುವಿಟಕೆಯಿಂದ ಕೂಡಿದ್ದ ಹರೀಶ್ ಹಲವು ವರ್ಷಗಳಿಂದ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದು, ಉತ್ತಮ ಸಂಬಳವನ್ನು ಪಡೆಯುತ್ತಿದ್ದರು. ಮಾಡಾವಿನ ತನ್ನ ಚಿಕ್ಕಮ್ಮನ ಮನೆಯಲ್ಲೇ ವಾಸವಾಗಿದ್ದ ಈತ ಅಲ್ಲಿಂದಲೇ ಎಲ್ಲಾ ವ್ಯವಹಾರಕ್ಕೆ ತೆರಳುತ್ತಿದ್ದರು. ಮಾಡಾವಿನಲ್ಲಿ ಒಂದಷ್ಟು ಸ್ನೇಹಿತರನ್ನು ಹೊಂದಿದ್ದರೂ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿರಲಿಲ್ಲ.

ಕಳೆದ ಮೂರು ದಿನಗಳಿಂದ ಕೆಲಸಕ್ಕೆ ರಜೆ ಹಾಕಿದ್ದ ಈತ ಸೋಮವಾರದಂದು ಮಂಗಳೂರಿಗೆ ತೆರಳಿದ್ದರು. ಸಂಜೆ ಪುತ್ತೂರಿಗೆ ಬಂದವರೇ ರಾತ್ರಿ ವೇಳೆ ಚಿಕ್ಕಮ್ಮನ ಮನೆಗೆ ತೆರಳದೆ ನಿಡ್ಪಳ್ಳಿಯ ತಾಯಿ ಮನೆಗೆ ತೆರಳಿ ರಾತ್ರಿ ಊಟ ಮಾಡಿ ಮಲಗಿದ್ದರು. ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರು ಮಾತ್ರ ವಾಸವಾಗಿದ್ದು, ತಂದೆ ಮಾಡಾವಿನ ಬೇಕರಿಯಲ್ಲೇ ತಂಗುತ್ತಿದ್ದರು. ಮಂಗಳವಾರ ಬೆಳಿಗ್ಗೆ ತಾಯಿ ಕೆಲಸಕ್ಕೆ ಹೋದ ಮೇಲೆ ಮನೆಯಲ್ಲೇ ಇದ್ದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

 ಬಟ್ಟೆ, ಮೊಬೈಲ್ ನಾಪತ್ತೆ

ಸೋಮವಾರ ಧರಿಸಿದ್ದ ಪ್ಯಾಂಟ್ ಮತ್ತು ಶರ್ಟ್ ಹಾಗೂ ಬಳಕೆಯಲ್ಲಿದ್ದ ಮೊಬೈಲ್ ನಾಪತ್ತೆಯಾಗಿದೆ. ಮಂಗಳವಾರ ಮುಂಜಾನೆ ಸ್ನೇಹಿತರಿಗೆ ಮನೆಯಿಂದಲೇ ಕರೆ ಮಾಡಿದ್ದರೂ ಆತ್ಮಹತ್ಯೆ ಬಳಿಕ ಬಟ್ಟೆ ಮತ್ತು ಮೊಬೈಲ್ ನಾಪತ್ತೆಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮನೆ ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿಲ್ಲ. ಕೊನೆಯದಾಗಿ ಯಾರಿಗೆ ಕರೆ ಮಾಡಿದ್ದರು ಮತ್ತು ಸೋಮವಾರ ಯಾರೊಂದಿಗೆ ತೆರಳಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.

 ಮನೆಯಲ್ಲಿ ಬಡತನ

ಹರೀಶ್ ಬ್ಯಾಂಕಿನಲ್ಲಿ ಉದ್ಯೋಗ ಮತ್ತು ಉದ್ಯಮವನ್ನು ಹೊಂದಿದ್ದರೂ ಅವರ ಮನೆ ಮುರಿದು ಬೀಳುವ ಸ್ಥಿತಿಯಲ್ಲಿದೆ. ಒಂದು ಹೊತ್ತಿನ ಊಟಕ್ಕೂ ಆ ಮನೆಯಲ್ಲಿ ಅಕ್ಕಿ ಇರಲಿಲ್ಲ. ಮುದಿ ಪ್ರಾಯದ ತಾಯಿ ಪಕ್ಕದ ವ್ಯಕ್ತಿಯೊಬ್ಬರ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು. ಒಂದು ದಿನವೂ ತನ್ನ ಮಗನ ಬಳಿ ತಾಯಿ ಯಾವುದನ್ನೂ ಕೇಳಿರಲಿಲ್ಲ. ಗ್ಯಾಸ್ ಸಂಪರ್ಕ ಇಲ್ಲದ ಹಳೆಯ ಕಾಲದ ಮನೆಯಲ್ಲಿ ಇರಲು ಸರಿಯಾದ ಜಾಗವಿಲ್ಲದೇ ಇರುವುದು ಮತ್ತು ಹರೀಶ್ ಮನೆಯನ್ನು ಯಾಕೆ ದುರಸ್ಥಿ ಮಾಡಿರಲಿಲ್ಲ ಎಂಬುದು ಆತನ ಮನೆಗೆ ಭೇಟಿ ನೀಡಿದವರು ಅಚ್ಚರಿಪಡುವಂತಾಗಿದೆ. ಬ್ಯಾಂಕಿನಲ್ಲಿ ಉತ್ತಮ ವೇತನ ಇದ್ದರೂ ಮುದಿ ಪ್ರಾಯದ ತನ್ನ ತಾಯಿಯನ್ನು ಯಾಕೆ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದರು ಮತ್ತು ಅದೇ ಖರ್ಚಿನಲ್ಲಿ ಯಾಕೆ ಬದುಕುತ್ತಿದ್ದರು ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿದೆ.

 ಪ್ರೇಮ ವೈಫಲ್ಯ ಕಾರಣ ?

ಹರೀಶ್ ಯಾವುದೋ ಪ್ರೇಮ ಪಾಶಕ್ಕೆ ಸಿಲುಕಿ ನಲುಗುತ್ತಿದ್ದು, ಆಕೆಯ ಕಾರಣಕ್ಕೆ ಅವನು ಈ ಸ್ಥಿತಿಗೆ ಬರುವಂತಾಯಿತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಆಕೆ ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಆತನ ಸಂಪಾದನೆಯನ್ನೆಲ್ಲಾ ಆಕೆಯೇ ಖರ್ಚು ಮಾಡುತ್ತಿದ್ದು, ಕೊನೆ ಗಳಿಗೆಯಲ್ಲಿ ಆಕೆ ಕೈಕೊಟ್ಟ ಕಾರಣ ಆತ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.