ನನಗೆ ನಟಿಯಾಗಬೇಕೆಂಬ ಆಸೆ

Mallika Rao Beauty

ಪ್ರ : ನನಗೀಗ 19 ವರ್ಷ. ಎರಡನೇ ವರ್ಷದ ಡಿಗ್ರಿ ಕೋರ್ಸ್ ಈಗಷ್ಟೇ ಮುಗಿದಿದೆ. ನನಗೆ ಚಿಕ್ಕಂದಿನಿಂದಲೂ ಡ್ರಾಮಾದಲ್ಲಿ ನಟಿಸುವುದು, ಡ್ಯಾನ್ಸ್ ಪ್ರೋಗ್ರಾಂನಲ್ಲಿ ಭಾಗವಹಿಸುವುದು ಇವೆಲ್ಲದರಲ್ಲಿ ಬಹಳ ಆಸಕ್ತಿ. ಮೊದಲೆಲ್ಲ ನಮ್ಮ ಮನೆಯಲ್ಲಿ ಪ್ರೋತ್ಸಾಹ ಕೊಡುತ್ತಿದ್ದರು. ಹತ್ತನೇ ತರಗತಿಯವರೆಗೆ ಎಲ್ಲದರಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನೂ ಪಡೆದಿದ್ದೆ. ಪಿಯುಸಿ ನಂತರ ಅದರಲ್ಲೆಲ್ಲ ಭಾಗವಹಿಸಲು ಮನೆಯವರು ಒಪ್ಪಿಗೆಯನ್ನೇ ಕೊಡಲಿಲ್ಲ. ನನಗೆ ನಿಜವಾಗಿ ಹೇಳಬೇಕೆಂದರೆ ಓದುವುದರಲ್ಲಿ ಇಂಟರೆಸ್ಟ್ ಇಲ್ಲ. ಯಾಕಾಗಿ ಈಗ ಕಾಲೇಜಿಗೆ ಹೋಗಿ ಸಮಯ ವೇಸ್ಟ್ ಮಾಡುತ್ತಿದ್ದೆನೋ ಅನಿಸುತ್ತಿದೆ. ಇಡೀ ಹೊತ್ತೂ ಸಿನಿಮಾ ನೋಡುತ್ತಿರುತ್ತೇನೆ. ನನ್ನನ್ನು ನಟಿಯಾಗಿ ಕಲ್ಪಿಸಿಕೊಂಡು ಅದೇ ಕನಸಲ್ಲಿ ಇರುತ್ತಿದ್ದೇನೆ. ಬಾಗಿಲು ಹಾಕಿಕೊಂಡು ಕನ್ನಡಿಯ ಮುಂದೆ ನಟನೆ ಮಾಡುತ್ತಿರುತ್ತೇನೆ. ಅಲ್ಲಿ ನಟಿಯರು ಹಾಕಿದ ಹಾಗೆ ಸ್ಟೆಪ್ಸ್ ಹಾಕಲು ಪ್ರಯತ್ನಿಸುತ್ತಿರುತ್ತೇನೆ. ನೋಡಲೂ ತೆಳ್ಳಗೆ ಬೆಳ್ಳಗಿದ್ದು ಸುಂದರಳಾಗಿಯೇ ಇರುವುದರಿಂದ ನನ್ನ ಫ್ರೆಂಡ್ಸ್ ಎಲ್ಲರೂ  `ನೀನು ಹೀರೋಯಿನ್ ಆಗಲು ಹೇಳಿ ಮಾಡಿಸಿದವಳು’ ಅನ್ನುತ್ತಿರುತ್ತಾರೆ. ಆದರೆ ಮನೆಯವರು ಬರೀ ಸಂಪ್ರದಾಯಸ್ಥರು. ಹುಡುಗಿಯರೆಂದರೆ ಮದುವೆಯಾಗಿ ಸಂಸಾರ ಮಾಡಲು ಇರುವವರು ಅನ್ನುವ ಭಾವನೆ ಅವರಿಗೆ. ಡಿಗ್ರಿಯಾಗುವುದೇ ಕಾಯುತ್ತಿದ್ದಾರೆ ನನ್ನ ಮದುವೆ ಮಾಡಲು. ನನಗೆ ಈಗಲೇ ಕಾಲೇಜು ಬಿಟ್ಟು ಎಲ್ಲಾದರೂ ಹೋಗಿ ನಟಿಯಾಗಲು ಪ್ರಯತ್ನಿಸುವ ಹಂಬಲ. ನಾನೇನು ಮಾಡಲಿ ಈಗ?

: ನೋಡಮ್ಮಾ ಹೇಗೂ ನಿನ್ನದೀಗ ಎರಡನೇ ವರ್ಷದ ಡಿಗ್ರಿ ಮುಗಿದಿದೆ. ಇನ್ನು ಇರುವುದು ಒಂದು ವರ್ಷ ಮಾತ್ರ. ಮೊದಲು ಡಿಗ್ರಿ ಪೂರೈಸು. ಯಾವತ್ತಿದ್ದರೂ ಪದವಿಯೊಂದು ಕೈಯಲ್ಲಿ ಇದ್ದರೆ ಮುಂದೆ ಜೀವನದಲ್ಲಿ ಏನೇ ತೊಂದರೆಯಾದರೂ ಧೈರ್ಯದಿಂದ ಎದುರಿಸಲು ಒಂದು ಅಸ್ತ್ರವಿದ್ದಂತೆ. ಎಲ್ಲಿಯಾದರೂ ಕೆಲಸಗಿಟ್ಟಿಸಲೂ ಡಿಗ್ರಿಯಾದರೆ ಒಳ್ಳೆಯದು. ಇನ್ನು ನಿಮಗೆ ನಟನೆಯಲ್ಲಿ ಅಷ್ಟೊಂದು ಇಂಟರೆಸ್ಟ್ ಇದ್ದರೆ ಅದನ್ನು ಸೈಡ್ ಬೈ ಸೈಡ್ ಮುಂದುವರಿಸಿಕೊಂಡೂ ಹೋಗಬಹುದು. ಅಂತಹ ಅವಕಾಶವಿರುವ ಕೆಲವು ಕ್ಲಾಸ್‍ಗಳಿಗೂ ಸೇರಿಕೊಳ್ಳಬಹುದು. ನೀವೆಂದೂ ಮನೆತನದ ಗೌರವ ಕಳೆಯುವಂತಹ ಕೆಲಸ ಮಾಡುವುದಿಲ್ಲ ಅಂತ ಮನೆಯವರಿಗೆ ಭರವಸೆ ಇತ್ತು ಅವರ ಮನವೊಲಿಸಿ ಅವರ ಒಪ್ಪಿಗೆ ಮತ್ತು ಸಹಕಾರದಿಂದಲೇ ಮುಂದುವರಿಯಿರಿ. ಆದರೂ ನಟಿಯಾಗಿ ಹೆಸರು ಗಳಿಸುವುದು ಅಷ್ಟು ಸುಲಭವಲ್ಲ. ಮೊದಲು ಅವಕಾಶ ಸಿಗಲೂ ತುಂಬಾ ಕಷ್ಟಪಡಬೇಕಾಗುತ್ತದೆ. ಹಲವು ರೀತಿಯ ಆಡಿಶನ್‍ಗಳಿಗೆ ಹೋಗಿ ನಿರ್ಮಾಪಕ ಮತ್ತು ನಿರ್ದೇಶಕರ ಮನೆಯ ಬಾಗಿಲು ಕಾಯಬೇಕಾಗುತ್ತದೆ. ಧಾರಾವಾಹಿಗಳಲ್ಲಿ ನಟಿಸಲು ಮೊದಲು ಪ್ರಯತ್ನಿಸಬಹುದು. ಮುಂದೆ ದೊಡ್ಡ ಪರದೆಯಲ್ಲಿ ನಟಿಸಲು ಅದು ದಾರಿಯಾಗಬಹುದು. ಇಂತಹ ಫೀಲ್ಡಿನಲ್ಲಿ ಗಾಡ್‍ಫಾದರ್ ಇದ್ದರೆ ಎಂಟ್ರಿ ಹೊಡೆಯುವುದು ಸುಲಭ. ಅದೃಷ್ಟವಿದ್ದರೆ ನಿಮಗೆ ಸರಿಯಾದ ಅವಕಾಶಗಳು ಸಿಗಲೂಬಹುದು. ಆದರೂ ಅವಕಾಶ ಕೊಡುತ್ತೇನೆ ಅಂತ ಹುಡುಗಿಯರನ್ನು ಬೇರೆ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುವ ಖಳರೂ ಇರುತ್ತಾರೆ. ನಿಮ್ಮ ಹುಶಾರಿಯಲ್ಲಿ ನೀವಿದ್ದುಕೊಂಡು ಜಾಗ್ರತೆಯಿಂದ ಹೆಜ್ಜೆ ಇಡಿ.

LEAVE A REPLY