ನನಗೀಗ ಸಂಗಾತಿ ಬೇಕೆನಿಸುತ್ತಿದೆ

ಪ್ರ : ನನ್ನ ವಯಸ್ಸೀಗ 36. ಮದುವೆಯಾಗಿಲ್ಲ. ಡಿಗ್ರಿ ಮುಗಿದ ತಕ್ಷಣ ಕೆಲಸಕ್ಕೆ ಸೇರಿಕೊಂಡೆ. ಪ್ರೈವೇಟಾಗಿ ಎಂಬಿಎ ಮಾಡಿಕೊಂಡೆ. ಕೆಲಸದಲ್ಲಿ ಮತ್ತೂ ಬಡ್ತಿ ಸಿಕ್ಕಿ ಕೈತುಂಬಾ ಸಂಬಳ ಸಿಗತೊಡಗಿತು. ಮೊದಲು ಸ್ಕೂಟಿ ಕೊಂಡುಕೊಂಡೆ. ನಂತರ ಕಾರಿನ ಒಡತಿಯೂ ಆದೆ. ನನ್ನ ಕಸಿನ್ನಿಗೆ ಅವಳ 21ನೇ ವರ್ಷಕ್ಕೇ ಮದುವೆಯಾಗಿತ್ತು. ಅವಳು ಅಲ್ಲಿ ಅತ್ತೆ ಮನೆಯಲ್ಲಿ ಅನುಭವಿಸಿದ ನೋವನ್ನೆಲ್ಲ ನೋಡಿ ನನಗೆ ಮದುವೆಯ ಬಗ್ಗೆಯೇ ಜಿಗುಪ್ಸೆ ಬಂದಿತ್ತು. ಅಪ್ಪ, ಅಮ್ಮ ಹಲವು ಸಲ ನನ್ನ ಮದುವೆಗೆ ಒತ್ತಾಯಿಸಿದರೂ ನಾನು ಮದುವೆಯೇ ಬೇಡವೆಂದು ಹಠ ಹಿಡಿದೆ. ಬೇರೆ ದಾರಿ ಕಾಣದೇ ಅವರು ನನ್ನ ಮದುವೆಯ ಆಸೆಯನ್ನೇ ಕೈಬಿಟ್ಟರು. ನನಗಿರುವ ನನಗಿಂತ ಹತ್ತು ವರ್ಷ ಚಿಕ್ಕ ಒಬ್ಬನೇ ತಮ್ಮನನ್ನು ಚೆನ್ನಾಗಿ ಓದಿಸಿ ಅವನೂ ಒಳ್ಳೆಯ ನೌಕರಿ ಗಿಟ್ಟಿಸಲು ಸಹಾಯ ಮಾಡಿದೆ. ಅಪ್ಪನ ಸಂಪಾದನೆ ಅಷ್ಟೊಂದು ಇರದ ಕಾರಣ ನಾನೇ ಹಿರಿಯ ಮಗನಂತೆ ಮನೆಗೆ ಬಹಳಷ್ಟು ಅನುಕೂಲ ಒದಗಿಸಿದೆ. ಇಷ್ಟು ದಿನ ನಾನು ಆತ್ಮವಿಶ್ವಾಸದಲ್ಲಿಯೇ ಬದುಕುತ್ತಿದ್ದೆ. ಆದರೆ ಈಗ ಕೆಲವು ತಿಂಗಳಿಂದ ಒಂಟಿತನ ಬಾಧಿಸುತ್ತಿದೆ. ಕಳೆದ ವರ್ಷ ನನ್ನ ತಮ್ಮ ಅವನು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆಯಾದ. ಮದುವೆಯಾದ ಹೊಸತರಲ್ಲಿ ನನ್ನ ಜೊತೆ ಅವಳು ಚೆನ್ನಾಗಿಯೇ ಇದ್ದಳು. ಆದರೆ ಕ್ರಮೇಣ ಅವಳು ನನ್ನನ್ನು ಕಡೆಗಣಿಸತೊಡಗಿದಳು. ತಮ್ಮನೂ ನನ್ನನ್ನೀಗ ನಿರ್ಲಕ್ಷಿಸುತ್ತಿದ್ದಾನೆ. ಅವನ ಮದುವೆಗಿಂತ ಮೊದಲು ನಾನು ಅವನ ಜೊತೆ ಸಿನಿಮಾಗೆ, ಹೊಟೇಲಿಗೆಲ್ಲ ಹೋಗುತ್ತಿದ್ದೆ. ಈಗ ನನ್ನನ್ನು ಅವನು ಕರೆಯುವುದೂ ಇಲ್ಲ. ತಮ್ಮನ ಹೆಂಡತಿಯಂತೂ ನನ್ನ ನೋಡಿದರೇ ಸಿಡುಕುತ್ತಾಳೆ. ಅಪ್ಪ, ಅಮ್ಮನೇ ಈಗ ತಮ್ಮ ಹಾಗೂ ಅವನ ಹೆಂಡತಿಯ ಮರ್ಜಿಯಲ್ಲಿ ಇದ್ದಾರೆ. ನನಗೆ ಒಬ್ಬಳೇ ಬೇರೆ ಕಡೆ ಹೋಗಿ ಬದುಕಲೂ ಹಿಂಜರಿಕೆ. ಪ್ರಾಯದ ಕಾಲದಲ್ಲಿ ಮದುವೆಯಾಗದೇ ತಪ್ಪು ಮಾಡಿದೆ ಅಂತ ಈಗ ಅನಿಸುತ್ತಿದೆ. ಸಂಗಾತಿಗಾಗಿ ಮನಸ್ಸು ಬಯಸುತ್ತಿದೆ. ಈ ವಿಷಯವನ್ನು ಮನೆಯವರಲ್ಲಿ ಹೇಳಿಕೊಳ್ಳಲೂ ಸಂಕೋಚ. ಅದೂ ಅಲ್ಲದೇ ಈಗ ಯಾರು ನನ್ನನ್ನು ಮದುವೆಯಾಗುತ್ತಾರೆ?

: ಯಾವ್ಯಾವುದು ಯಾವ್ಯಾವ ಕಾಲಕ್ಕೆ ಆಗಬೇಕೋ ಹಾಗೆ ಆದರೇ ಒಳ್ಳೆಯದು. ಆದರೆ ಎಲ್ಲರ ಮನಸ್ಸೂ ಒಂದೇ ರೀತಿ ಇರುವುದಿಲ್ಲ. ಅದೂ ಆಧುನಿಕ ಮಹಿಳೆ ಅದರಲ್ಲೂ ದುಡಿಯುವ ಹುಡುಗಿಯರಿಗೆ ಮದುವೆಯೆನ್ನುವ ಜಂಜಾಟವೇ ಬೇಡವಾಗಿರುತ್ತದೆ. ಪುರುಷಪ್ರಧಾನ ಸಮಾಜವಾದ ನಮ್ಮಲ್ಲಿ ದುಡಿಯುವ ಮಹಿಳೆಯರಿಗೆ ಆಫೀಸು ಕೆಲಸದ ಜೊತೆಗೆ ಮನೆಯನ್ನೂ ನಿಭಾಯಿಸುವುದು ಕಷ್ಟ ಅಂತನಿಸುತ್ತದೆ. ಆದರೆ ವಯಸ್ಸು ಮೀರಿದಂತೆಲ್ಲ ನಿಮ್ಮ ಹಾಗೇ ಒಂಟಿತನ ಕಾಡಲು ಶುರುವಾಗುತ್ತದೆ. ಅದೂ ಅಪ್ಪ, ಅಮ್ಮ ಇರುವವರೆಗೆ ಓಕೆ. ಸಹೋದರರ ಮರ್ಜಿಯಲ್ಲಿ ಬದುಕುವುದು ಕಷ್ಟವೇ. ನೀವು ಹೇಗೆ ಮೊದಲು ಧೈರ್ಯದಿಂದ ಮದುವೆಯಾಗದೇ ಇದ್ದೀರೋ ಒಳ್ಳೆಯ ಸಂಪಾದನೆಯೂ ಇರುವ ನೀವು ಅದೇ ಆತ್ಮವಿಶ್ವಾಸದಿಂದ ಈಗ ಸ್ವತಂತ್ರವಾಗಿ ಬದುಕುವ ಛಲವೂ ತೋರಿಸಬಹುದಿತ್ತು. ಆದರೆ ನಿಮ್ಮ ಮನಸ್ಸೀಗ ಸಂಗಾತಿಗಾಗಿ ಹಾತೊರೆಯುತ್ತಿದೆಯಾದರೆ ಅದಕ್ಕೂ ಪ್ರಯತ್ನಿಸಬಹುದು. ಅದಕ್ಕೆಲ್ಲ ಸಂಕೋಚವೇಕೆ? ಈಗಂತೂ ಅನೇಕ ಮ್ಯಾರೇಜ್ ಬ್ಯೂರೋಗಳಿವೆ. ಮೊದಲು ಅದರಲ್ಲಿ ನೋಂದಾಯಿಸಿಕೊಳ್ಳಿ. ನಿಮ್ಮ ಹಾಗೇ ಮದುವೆ ಬೇಡ ಅಂತ ಮುಂದೂಡಿದವರ್ಯಾರಾದರೂ ಸಿಗಬಹುದು. ಇಲ್ಲಾ ವಿಧುರ ಅಥವಾ ವಿಚ್ಛೇದಿತರಾದರೂ ಒಳ್ಳೆಯ ಮನಸ್ಸಿರುವ ಹುಡಗನನ್ನು ಮದುವೆಯಾದರೂ ತಪ್ಪೇನೂ ಇಲ್ಲ. ಎಲ್ಲಾ ದೃಷ್ಟಿಯಲ್ಲೂ ಅವರು ನಿಮಗೆ ಆತ್ಮಸಂಗಾತಿಯಾಗಬೇಕು ಅಷ್ಟೇ.