ನನಗೀಗ ಅವನು ಬೇಕು

ನಿಮ್ಮ ಜೊತೆ ಇದ್ದಷ್ಟು ಅವನಿಗೆ ಆ ಹುಡುಗಿಯ ಜೊತೆ ಕಂಫರ್ಟ್ ಆಗುತ್ತಿರಲಿಲ್ಲವಾಗಿದ್ದಕ್ಕೇ ಅವನು ಆಕೆ ಜೊತೆ ಇದ್ದಾಗಲೂ ನಿಮಗೆ ಮೆಸೇಜ್ ಕಳಿಸುತ್ತಿದ್ದ.

ಪ್ರ : ಅವನು ನನ್ನ ಬೆಸ್ಟ್ ಫ್ರೆಂಡ್ ಆಗಿದ್ದ. ನನ್ನ ಉಳಿದ ಫ್ರೆಂಡ್ಸ್ `ಅವನನ್ನು ನೀನು ಪ್ರೀತಿಸ್ತಿಯಾ’ ಅಂತ ಕೇಳಿದ್ದಕ್ಕೆ ಕೋಪ ಬಂದಿತ್ತು ನನಗೆ. ಹುಡುಗ, ಹುಡುಗಿ ಮಧ್ಯೆ ಪ್ಯೂರ್ ಫ್ರೆಂಡ್‍ಶಿಪ್ ಇರಲೇ ಬಾರದಾ ಅಂತ ಅವರ ಮೇಲೆ ರೇಗಿದ್ದೆ. ಅವನೂ ಕೆಲವು ದಿನಗಳ ಹಿಂದೆ ಪರೋಕ್ಷವಾಗಿ ನನ್ನನ್ನು ಪ್ರೀತಿಸುವುದಾಗಿ ಹೇಳಿದಾಗ ಹಾಗೆಲ್ಲ ಹೇಳಿದರೆ ಮಾತೇ ಆಡುವುದಿಲ್ಲ ಅಂತ ಧಮ್ಕಿ ಸಹ ಕೊಟ್ಟಿದ್ದೆ. ಕೊನೆಗೆ ಅವನು `ಇಲ್ಲಾ ಮಹರಾಯ್ತಿ, ತಮಾಷೆಗೆ ಹೇಳಿದ್ದು’ ಅಂತ ಹೇಳಿದ ನಂತರವೇ ಮೊದಲಿನ ತರಹವೇ ಮಾತಾಡಲು ತೊಡಗಿದ್ದು. ಆದರೀಗ ಅವನಿಗೆ ಒಂದು ಹುಡುಗಿಯ ಮೇಲೆ ಕ್ರಶ್ ಆದ ವಿಷಯ ನನಗೇ ಅವನು ಮೊದಲು ಹೇಳಿದ್ದ್ದು. ನಾನೇ ಅವರಿಬ್ಬರ ಮಧ್ಯೆ ಗೆಳೆತನ ಬೆಳೆಯಲು ಪ್ರೋತ್ಸಾಹಿಸಿದೆ. ಕೆಲವೊಮ್ಮೆ ಅವರಿಬ್ಬರ ಮಧ್ಯೆ ಸಣ್ಣಪುಟ್ಟ ಜಗಳವಾದಾಗಲೂ ನಾನೇ ಮಧ್ಯಸ್ತಿಕೆ ವಹಿಸಿ ಅವರನ್ನು ಜೊತೆಮಾಡಿದ್ದೆ. ಮೊದಲು ನಾವು ಮೂವರೂ ಜೊತೆಯಲ್ಲೇ ಸುತ್ತಾಡುತ್ತಿದ್ದೆವು. ಆದರೆ ಆಕೆಗೆ ಅವನೊಬ್ಬನ ಜೊತೆಯೇ ಕಳೆಯಬೇಕೆಂಬ ಆಸೆ. ಅವನಿಗೆ ನಾನಿಲ್ಲದೇ ಎಲ್ಲೂ ಹೋಗಲು ಮನಸ್ಸಿರುತ್ತಿರಲಿಲ್ಲ. ಆದರೂ ಅವಳಿಗೆ ಮುಜುಗರವಾಗಬಾರದೆಂದು ಕೆಲವು ಬಾರಿ ನಾನೇ ಏನೋ ನೆವ ಹೇಳಿ ಅವರ ಜೊತೆ ಹೋಗುವುದನ್ನು ತಪ್ಪಿಸಿಕೊಂಡಿದ್ದೆ. ಅವರಿಬ್ಬರೇ ಹೋದ ದಿನವೂ ಐದು ನಿಮಿಷಕ್ಕೊಮ್ಮೆಯಾದರೂ ನನಗೆ ಅವನು ಮಿಸ್ ಯೂ ಅಂತ ಮೆಸೇಜ್ ಮಾಡುತ್ತಿದ್ದ. ನನಗೂ ಅವನ ಜೊತೆಯಿಲ್ಲದೇ ಮನಸ್ಸಿಗೆಲ್ಲ ಏನೋ ಒಂತರಾ ಹಿಂಸೆಯಾಗುತ್ತಿತ್ತು. ಅವನನ್ನು ನಾನು ನನಗರಿವಿಲ್ಲದೇ ಪ್ರೀತಿಸುತ್ತಿದ್ದೇನೆ ಅಂತ ಈಗ ನನ್ನ ಅರಿವಿಗೆ ಬರುತ್ತಿದೆ. ನಾನೀಗ ಹೇಗೆ ಅವನಿಗೆ ಈ ವಿಷಯವನ್ನು ಹೇಳಲಿ? ಅವನಿಗೂ ನನ್ನ ಮೇಲೆ ಮನಸ್ಸಿರಬಹುದೇ? ನನಗೆ ಅವನಿಲ್ಲದೇ ಇರಲು ಸಾಧ್ಯವೇ ಇಲ್ಲ. ಈ ವಿಷಯ ಗೊತ್ತಾದರೆ ಆ ಹುಡುಗಿ ನನ್ನ ಬಗ್ಗೆ ಏನು ತಿಳಿದುಕೊಳ್ಳಬಹುದು? : ಥ್ಯಾಂಕ್ ಗಾಡ್. ಈಗಲಾದರೂ ನೀವು ಅವನನ್ನು ಪ್ರೀತಿಸುತ್ತಿದ್ದೀರಿ ಅಂತ ನಿಮಗೆ ಗೊತ್ತಾಯ್ತಲ್ಲ. ಸ್ವಲ್ಪ ವಿಳಂಬವಾಯಿತು, ಆದರೂ ಅವನಿನ್ನೂ ಪೂರ್ತಿ ನಿಮ್ಮ ಕೈತಪ್ಪಿಹೋಗಿಲ್ಲ. ಅವನಿಗೆ ನಿಮ್ಮ ಮೇಲೆ ಪ್ರೀತಿ ಇತ್ತಾದರೂ ನೀವು ಅವನನ್ನು ಪ್ರೀತಿಸುತ್ತಿಲ್ಲ ಅಂತ ಗೊತ್ತಾಗಿ ತಾನು ಮುಂದುವರಿದರೆ ನಿಮ್ಮ ಸ್ನೇಹವೂ ಕೈತಪ್ಪಿಹೋಗುತ್ತದೆ ಅಂತ ಹೆದರಿ ಅವನು ಸುಮ್ಮನಿರಬಹುದು. ವಯೋಸಹಜವಾಗಿ ಬೇರೊಂದು ಹುಡುಗಿಯ ಮೇಲೆ ಸ್ವಲ್ಪ ಆಕರ್ಷಣೆಯೂ ಉಂಟಾಗಿರಬಹುದು. ಆದರೂ ನಿಮ್ಮ ಜೊತೆ ಇದ್ದಷ್ಟು ಅವನಿಗೆ ಆ ಹುಡುಗಿಯ ಜೊತೆ ಕಂಫರ್ಟ್ ಆಗುತ್ತಿರಲಿಲ್ಲವಾಗಿದ್ದಕ್ಕೇ ಅವನು ಆಕೆ ಜೊತೆ ಇದ್ದಾಗಲೂ ನಿಮಗೆ ಮೆಸೇಜ್ ಕಳಿಸುತ್ತಿದ್ದ. ಅದರರ್ಥ ನೀವೇ ಅವನ ಫಸ್ಟ್ ಲವ್. ಇನ್ನು ತಡಮಾಡಬೇಡಿ. ಮೊದಲ ಅವಕಾಶ ಸಿಕ್ಕಿದ ಕೂಡಲೇ ಅವನನ್ನು ನೀವೂ ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಅವನಿಲ್ಲದೇ ನಿಮಗೆ ಇರಲು ಸಾಧ್ಯವಿಲ್ಲವೆಂತಲೂ ನಿಮ್ಮ ಮನಸ್ಸಿನ ಭಾವನೆಯನ್ನು ಅವನೆದುರಿಗೆ ತೆರೆದಿಡಿ. ಖುಶಿಯಿಂದ ಅವನು ನಿಮ್ಮವನಾಗುತ್ತಾನೆ. ನಿಮ್ಮಿಬ್ಬರ ಪ್ರೀತಿ ನೋಡಿ ಆ ಹುಡುಗಿ ಮನಸ್ಸಿಗೆ ಈಗ ಬೇಸರವಾದರೂ ಮುಂದಾಗುವ ಅನಾಹುತ ತಪ್ಪುತ್ತಲ್ಲಾ….