ಹೆಂಡತಿಗೆ ಮಾಜಿ ಜೊತೆ ಅಫೇರ್ ಇರಬಹುದೇ?

ಕಾಲೇಜಿನಲ್ಲಿರುವಾಗ ಸಣ್ಣಪುಟ್ಟ ಆಕರ್ಷಣೆ ಉಂಟಾಗುವುದು ಕಾಮನ್. ಹೆಚ್ಚಿನವು ಅಲ್ಲಿಗೇ ಕೊನೆಗೊಳ್ಳುತ್ತದೆ.

ಪ್ರ : ನಮ್ಮ ಮದುವೆಯಾಗಿ ಎಂಟು ತಿಂಗಳಾಯಿತು. ಅನ್ಯೋನ್ಯವಾಗಿಯೇ ಇದ್ದೆವು. ಕಳೆದ ತಿಂಗಳು ನಾವು ಮಾಲ್‍ಗೆ ಹೋದಾಗ ಅವಳ ಕಾಲೇಜಿನ ಗೆಳತಿಯರಿಬ್ಬರು ಸಿಕ್ಕಿದ್ದರು. ಅವರೆಲ್ಲ ಸೇರಿಕೊಂಡು ತಮ್ಮ ಕಾಲೇಜು ಜೀವನ ಜ್ಞಾಪಿಸಿಕೊಳ್ತಾ ಖುಶಿಪಡುತ್ತಿದ್ದರು. ನಾನೂ ಅವರ ನಗುವಿನಲ್ಲಿ ಭಾಗಿಯಾಗಿದ್ದೆ. ಆದರೆ ಅವಳ ಸ್ನೇಹಿತರು ನೆನಪಿಸಿದ ಒಬ್ಬ ಗೆಳೆಯನ ಹೆಸರು ಕೇಳಿದ ತಕ್ಷಣ ನನ್ನ ಹೆಂಡತಿಯ ಮುಖ ನಾಚಿಕೆಯಿಂದ ಕೆಂಪಾಯಿತು. ಅದೆಲ್ಲ ವಿಷಯ ಈಗ ಬೇಡ ಅಂತ ಅವಳು ಸನ್ನೆ ಮಾಡಿದಾಗ ಅವರೂ ಸುಮ್ಮನಾದರು. ನಾನು ಮನೆಗೆ ಬಂದ ನಂತರ ಅವನ್ಯಾರು ಅಂತ ಕೇಳಿದಾಗ ಅವಳು ಮೊದಲು ಹೇಳಲು ಸಂಕೋಚಪಟ್ಟರೂ ಒತ್ತಾಯಿಸಿದಾಗ ಅವಳು ಬಾಯಿಬಿಟ್ಟಳು. ಅವನು ನನ್ನ ಹೆಂಡತಿಯನ್ನು ಇಷ್ಟಪಡುತ್ತಿದ್ದನಂತೆ. ಆದರೆ ನನ್ನ ಹೆಂಡತಿಗೂ ಅವನೆಂದರೆ ಸ್ವಲ್ಪ ಮನಸ್ಸಿತ್ತಾದರೂ ಮನೆಯವರು ಸ್ಟ್ರಿಕ್ಟ್ ಇರುವುದರಿಂದ ಇವಳು ಮುಂದುವರಿದಿಲ್ಲವಂತೆ. ಈಗ ಅವಳು ಫೋನಿನಲ್ಲಿ ಯಾರ ಜೊತೆಯಾದರೂ ಸ್ವಲ್ಪ ದೂರಹೋಗಿ ಮಾತಾಡಿದರೆ ಆ ಹುಡುಗನೇ ಇರಬಹುದೇ ಅಂತ ಯೋಚಿಸುವಂತಾಗಿದೆ. ಅವಳು ತನ್ನ ಸೆಲ್‍ಫೋನಿಗೆ ಕೋಡ್ ಹಾಕಿಕೊಂಡಿದ್ದಾಳೆ. ಕೇಳಿದರೆ ನಾನು ಅವಳನ್ನು ಸಂಶಯಿಸುತ್ತಿದ್ದೇನೆ ಅಂತ ಬೇಸರ ಮಾಡಿಕೊಂಡರೆ ಎನ್ನುವ ಆತಂಕ. ಅವಳು ಶಾಪಿಂಗಿಗೆ ಅಂತ ಹೋದರೂ ಅವನನ್ನು ಭೇಟಿಯಾಗಿರಬಹುದೇ ಅನ್ನುವ ಅನುಮಾನ ಬರುತ್ತಿದೆ. ಕೆಲವು ಸಲ ಅವಳಿಗೆ ಗೊತ್ತಾಗದಂತೆ ಅವಳನ್ನು ಹಿಂಬಾಲಿಸಿದ್ದೆ. ನನ್ನ ಅನುಮಾನವೇನೂ ದೃಢಪಟ್ಟಿಲ್ಲ. ಆದರೂ ಅವಳಿಗೆ ಅವನ ಜೊತೆ ಅಫೇರ್ ಇರಬಹುದೇ ಅಂತ ನನಗೆ ಸಂಶಯ. ನಿಮ್ಮ ಅಭಿಪ್ರಾಯವೇನು?

ಉ : ಈ ಸಂಶಯದ ಹುಳು ಒಮ್ಮೆ ತಲೆಯಲ್ಲಿ ಹೊಕ್ಕರೆ ಅವಳು ಏನು ಮಾಡಿದರೂ ನಿಮಗೆ ಅನುಮಾನವೇ. ಅವಳು ನಿಮ್ಮ ಜೊತೆ ಪ್ರೀತಿಯಿಂದ ಇದ್ದರೂ ನಿಮಗೇಕೆ ಅಂತಹ ದುರ್ಬುದ್ಧಿ. ಕಾಲೇಜಿನಲ್ಲಿರುವಾಗ ಸಣ್ಣಪುಟ್ಟ ಆಕರ್ಷಣೆ ಉಂಟಾಗುವುದು ಕಾಮನ್. ಹೆಚ್ಚಿನವು ಅಲ್ಲಿಗೇ ಕೊನೆಗೊಳ್ಳುತ್ತದೆ. ನಿಮ್ಮ ಹೆಂಡತಿದೂ ಅದೇ ರೀತಿಯ ಕ್ರಶ್ ಇರಬಹುದು. ಸಹಪಾಠಿಯೊಬ್ಬ ತನ್ನ ಹಿಂದೆ ಬಿದ್ದಾಗ ಅವಳ ಮನಸ್ಸು ಸ್ವಲ್ಪ ವಿಚಲಿತವಾದರೂ ಅದನ್ನು ಅವಳು ಸೀರಿಯಸ್ಸಾಗಿ ಪರಿಗಣಿಸಿಲ್ಲ ಅಂತ ಅವಳೇ ಹೇಳಿದ ನಂತರವೂ ನೀವು ಈ ರೀತಿ ಅವಳ ಬಗ್ಗೆ ಸಂಶಯಿಸುವುದು ಸರಿಯಲ್ಲ. ಕೆಲವೊಮ್ಮೆ ಅವಳ ಸ್ನೇಹಿತೆಯರ ಹತ್ತಿರವೋ ಇಲ್ಲಾ ಕುಟುಂಬದವರ ಹತ್ತಿರವೋ ಆತ್ಮೀಯವಾಗಿ ಮಾತಾಡುವಾಗ ಸ್ವಲ್ಪ ಪ್ರೈವೆಸಿ ಆಕೆ ಬಯಸಿರಬಹುದು. ನೀವು ಅವಳನ್ನು ಗುಪ್ತವಾಗಿ ಹಿಂಬಾಲಿಸಿ ಗೂಢಚರ್ಯೆ ಕೆಲಸ ಮಾಡಿದಾಗಲೂ ನಿಮಗೆ ಅವಳು ಅವನ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾಳೆ ಎನ್ನುವುದಕ್ಕೆ ಪುರಾವೆ ಸಿಕ್ಕಿಲ್ಲ. ಆದರೂ ಯಾಕೆ ಸುಮ್ಮನೆ ಇಲ್ಲದ್ದಕ್ಕೆ ತಲೆಕೆಡಿಸಿಕೊಂಡು ನಿಮ್ಮ ಈಗಿನ ಸುಂದರ ಬದುಕನ್ನು ಕೆಡಿಸಿಕೊಳ್ಳುತ್ತಿದ್ದೀರಿ?