“ಆಲಿಯಾಳಿಂದ ನಾನು ಸ್ಪೂರ್ತಿ ಪಡೆಯುತ್ತೇನೆ” : ಶ್ರದ್ಧಾ

ಶ್ರದ್ಧಾ ಕಪೂರ್ ಅರ್ಜುನ್ ಕಪೂರ್ ಜೊತೆ ನಟಿಸಿರುವ `ಹಾಫ್ ಗರ್ಲ್ ಫ್ರೆಂಡ್’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಚೇತನ್ ಭಗತ್ ನಾವೆಲ್ ಆಧರಿತವಾಗಿರುವ ಈ ಸಿನಿಮಾವನ್ನು ಮೋಹಿತ್ ಸೂರಿ ನಿರ್ದೇಶಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶ್ರದ್ಧಾ ತನ್ನ ಕುರಿತಾದ ರಿಲೇಶನ್ಶಿಪ್ ರೂಮರ್ಸ್, ಚಿತ್ರರಂಗದಲ್ಲಿರುವ ಸಂಭಾವನೆಯಲ್ಲಿಯ ತಾರತಮ್ಯ, ಉಳಿದ ನಟಿಯರ ಜೊತೆಗಿನ ಸ್ಪರ್ಧೆ ಮೊದಲಾದ ವಿಷಯಗಳ ಬಗ್ಗೆ ಮಾತಾಡಿದ್ದಾಳೆ

  • `ಹಾಫ್ ಗರ್ಲ್ ಫ್ರೆಂಡ್’ ಇದರ ಪರಿಕಲ್ಪನೆ ಏನು?

ಹಾಫ್ ಗರ್ಲ್ ಫ್ರೆಂಡ್ ಎನ್ನುವುದು ನಿಜಜೀವನದಲ್ಲೂ ಇದೆ. ಅದಕ್ಕೆ ನಾವೀಗ ಹೆಸರು ಕೊಟ್ಟಿದ್ದೇವೆ ಅಷ್ಟೇ. ಹೆಚ್ಚಿನವರು ಈ ರೀತಿಯ ಗೊಂದಲವನ್ನು ಒಂದಲ್ಲ ಒಂದು ಸಮಯದಲ್ಲಿ ಎದುರಿಸಿರುತ್ತಾರೆ. ಒಬ್ಬರ ಮೇಲೆ ಏನೋ ಸ್ಪೆಷಲ್ ಫೀಲಿಂಗ್ ಇರುತ್ತದೆ. ಆದರೆ ಕಮಿಟ್ ಆಗಲು ಅದೇನೋ ಹಿಂದೇಟು. ನಾನೂ ಒಬ್ಬರ ಹಾಫ್ ಗರ್ಲ್ ಫ್ರೆಂಡ್ ಆಗಿದ್ದೇನೆ. ನನಗೇ ಫುಲ್ ಕಮಿಟ್ ಆಗಬೇಕಾ ಬೇಡವಾ ಎನ್ನುವ ಗೊಂದಲವಿದೆ. ಒಮ್ಮೆ ಒಬ್ಬರ ಜೊತೆಗೆ ಖಾಯಂ ಆಗಿ ಇರಬಲ್ಲೆ ಎನ್ನುವ ವಿಶ್ವಾಸ ಮೂಡಿದಾಗ `ಫುಲ್ ಗರ್ಲ್‍ಫ್ರೆಂಡ್’ ಆಗುವೆ.

  • ನೀವು ನಿಜಜೀವನದಲ್ಲಿ ಫ್ಯಾಷನಿಸ್ಟಾ?

ಫ್ಯಾಷನ್‍ಕಿಂತ ನನಗೆ ಕಂಫರ್ಟ್ ಮುಖ್ಯ. ನನಗೆ ಫ್ಯಾಷನ್ ವಿಷಯದಲ್ಲಿ ತಾಳ್ಮೆ ಇಲ್ಲ. ಸರಿಯಾಗಿ ನಾನು ಹೇರ್ ಸ್ಟೈಲ್ ಹಾಗೂ ಮೇಕಪ್ ಮಾಡಿಕೊಳ್ಳುತ್ತಿಲ್ಲ ಎಂದು ನನ್ನ ಸ್ನೇಹಿತರು ಹೇಳುತ್ತಿರುತ್ತಾರೆ. ನಾನು ಸಿನಿಮಾದ ಪಾತ್ರಕ್ಕೆ ಬೇಕಾದ ನನ್ನ ಲುಕ್ ಬಗ್ಗೆ ಮಾತ್ರ ಗಮನಕೊಡುತ್ತೇನೆಯೇ ವಿನಃ ಉಳಿದಂತೆ ನನಗೆ ಆ ವಿಷಯದಲ್ಲಿ ತಾಳ್ಮೆಯೇ ಇಲ್ಲ.

  • ನಿಮ್ಮ ಸರೀಕರು ನಿಮಗಿಂತ ಒಳ್ಳೆಯ ಕೆಲಸ ಮಾಡಿದರೆ ನಿಮಗೆ ಅಸೂಯೆ ಎನಿಸುವುದಾ?

ನಾನು ಆಲಿಯಾಳಿಂದ ಸ್ಪೂರ್ತಿ ಪಡೆಯುತ್ತೇನೆ. ಅವಳು ನಿಜವಾಗಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದಾಳೆ. ಅವಳು ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಅವಳು ನನಗೆ ಸ್ಪೂರ್ತಿ.

  • ನಿಮಗೆ ಸಂಭಾವನೆಯಲ್ಲಿ ತಾರತಮ್ಯತೆ ಇದೆ ಎನಿಸುತ್ತದಾ?

ಖಂಡಿತಾ. ಒಂದೇ ಪಾತ್ರವನ್ನು ಒಪ್ಪಿಕೊಳ್ಳಬೇಕು, ಇಲ್ಲಾ ಬಿಡಬೇಕು, ಅದು ಬಿಟ್ಟರೆ ನಟಿಯರಿಗೆ ಬೇರೆ ಆಯ್ಕೆ ಇಲ್ಲ. ಈ ಸಂಭಾವನೆಯ ತಾರತಮ್ಯ ಇರುವುದು ಸರಿಯಲ್ಲ.

  • ಟೀಕೆ ಮತ್ತು ಸೋಲನ್ನು ಹೇಗೆ ನಿಭಾಯಿಸುತ್ತೀರಿ?

ಸೋಲು, ಗೆಲುವು ಇದರ ಬಗ್ಗೆ ಹೆಚ್ಚು ತಲೆಗೆ ಹಚ್ಚಿಕೊಳ್ಳಬಾರದು ಎನ್ನುವ ಪಾಲಿಸಿ ನನ್ನದು. ನನಗೆ ಯಾವುದು ಸರಿ ಕಾಣುತ್ತದೋ ಆ ಪಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ. ನನ್ನ ದೊಡ್ಡ ಟೀಕಾಕಾರರೆಂದರೆ ನನ್ನ ತಂದೆ. ನಾನು ಒಳ್ಳೆಯ ನಟಿ ಎನ್ನುವುದು ಅವರ ಭಾವನೆ.

  • ಸ್ಟಾರ್ ಆಗಿರುವುದರಿಂದ ನಿಮಗೆ ಪ್ರೈವೆಸಿ ಇಲ್ಲ ಎನಿಸುತ್ತದಾ?

ಹೌದು, ನಾನು ಕೆಲವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಟಿಯಾಗುವ ನನ್ನ ಚಿಕ್ಕಂದಿನ ಕನಸು ನನಸಾಗಿದ್ದರೂ ನನಗೆ ಬೀಚಿನಲ್ಲಿ ನಡೆದಾಡಬೇಕು ಎನ್ನುವ ಬಯಕೆ ಕೆಲವೊಮ್ಮೆ ಮೂಡುತ್ತದೆ. ಆದರೆ ಅದು ಈಗ ಸಾಧ್ಯವಾಗುತ್ತಿಲ್ಲ.

  • ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಏನೇನೋ ಸುದ್ದಿ ಬಂದರೆ ಹೇಗೆ ಪ್ರತಿಕ್ರಿಯಿಸುತ್ತೀರಿ?

ಆ ಬಗ್ಗೆ ನಾನು ಈಗ ತಲೆಕಡಿಸಿಕೊಳ್ಳುತ್ತಿಲ್ಲ. ಯಾರೋ ಸುಮ್ಮನೇ ಇಲ್ಲಸಲ್ಲದ ವಿಷಯಗಳನ್ನು ಕ್ರಿಯೇಟ್ ಮಾಡಿದರೆ ಅದನ್ನು ನಿರ್ಲಕ್ಷಿಸುವುದೇ ಒಳಿತು. ನನ್ನ ಪಾಲಕರೂ ಈಗ ಅಂಥದ್ದನ್ನು ನಿರ್ಲಕ್ಷಿಸಲು ಕಲಿತಿದ್ದಾರೆ.