`ನಾನು ರಣಬೀರನ ಯಾವ ಸಿನಿಮಾವನ್ನೂ ಇಷ್ಟಪಟ್ಟಿಲ್ಲ’

ಅಪ್ಪ ರಿಷಿ ಉವಾಚ

“ರಣಬೀರನ ಮೊದಲ ಚಿತ್ರ `ಸಾವರಿಯಾ’ ನೋಡಿ ನಾನು ಗಾಬರಿಗೊಂಡೆ. ನಿರ್ದೇಶಕ ಬನ್ಸಾಲಿ ಚಿತ್ರದ ಬಗ್ಗೆ ನನಗೆ ಮೊದಲೇ ಹೇಳಿದ್ದರೆ ನಾನು ಆ ಚಿತ್ರದಲ್ಲಿ ರಣಬೀರ್ ನಟಿಸುವುದನ್ನು ತಪ್ಪಿಸುತ್ತಿದ್ದೆ” – ಹೀಗೆ ರಣಬೀರ್ ತಂದೆ ಹಿರಿಯ ನಟ ರಿಷಿಕಪೂರ್ ತಮ್ಮ ಆತ್ಮಚರಿತ್ರೆ `ಖುಲ್ಲಂ ಖುಲ್ಲಾ’ದಲ್ಲಿ ಬರೆದುಕೊಂಡಿದ್ದಾರೆ.

ರಿಷಿಕಪೂರ್ ತಮ್ಮ ಆತ್ಮಚರಿತ್ರೆಯಲ್ಲಿ ಹಲವು ವಿಷಯಗಳ ಜೊತೆಗೆ ತಮ್ಮ ಮಗನ ವಿಷಯವನ್ನೂ, ಅವನ ಸಿನಿಮಾಗಳ ಆಯ್ಕೆ ಬಗ್ಗೆಯೂ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಬರೆದಿದ್ದಾರೆ. ರಣಬೀರನ ಸಿನಿಮಾ ಆಯ್ಕೆ ಬಗ್ಗೆ ರಿಷಿಗೆ ಅಸಮಾಧಾನವಿದೆ. ಅಷ್ಟೇ ಅಲ್ಲ, ಆತನÀ ಯಾವ ಸಿನಿಮಾವೂ ಅವರಿಗೆ ಇಷ್ಟವಾಗಿಲ್ಲವೆಂದು ಅವರು ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ರಣಬೀರನಿಗೆ ಹಲವು ಪ್ರಶಸ್ತಿಗಳನ್ನು ತಂದುಕೊಟ್ಟ `ರಾಕ್ ಸ್ಟಾರ್’ ಸಿನಿಮಾ ಅವನು ಕೈಗೆತ್ತಿಕೊಂಡಾಗ ಅಂತಹ ಅಸಂಪ್ರದಾಯಿಕ ಚಿತ್ರದ ಬಗ್ಗೆ ರಿಷಿಗೆ ಭಯವಿತ್ತಂತೆ. `ರಣಬೀರನಿಗೆ ತನಗೇನು ಬೇಕು ಎನ್ನುವುದು ಸರಿಯಾಗಿ ಗೊತ್ತು. ಈ ಬಗ್ಗೆ ಅವನು ನನ್ನ ಹತ್ತಿರ ಮಾತಾಡುತ್ತಿರಲಿಲ್ಲ, ಅವನು ಏನಿದ್ದರೂ ಅಮ್ಮನ ಹತ್ತಿರ ಮಾತ್ರ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದ’ ಎನ್ನುತ್ತಾರೆ ರಿಷಿ ಕಪೂರ್.

`ರಣಬೀರ್ ಎಂದೂ ನಟನಾಗಬೇಕೆಂದುಕೊಂಡಿರಲಿಲ್ಲ. ಅವನು ಕ್ಯಾಮರಾಮನ್ ಯಾ ಡೈರೆಕ್ಟರ್ ಇಲ್ಲವೇ ಎಡಿಟರ್ ಆಗಬೇಕೆಂದಿದ್ದ. ಹಾಗಾಗಿ ಅಂತಹ ಸ್ಕೂಲಿಗೇ ಅವನು ಸೇರಿದ್ದ. ನಂತರವಷ್ಟೇ ಅವನು ನಟನೆ ಬಗ್ಗೆ ಕ್ರ್ಯಾಶ್ ಕೋರ್ಸ್ ಮಾಡಿದ್ದು. ಅವನು ಆಯ್ದುಕೊಂಡ ಸ್ಕೂಲ್ ಆಗ ನನಗೆ ಇಷ್ಟವಾಗಿರದಿದ್ದರೂ ಈಗನಿಸುತ್ತದೆ ಅದು ಅವನ ಸರಿಯಾದ ಆಯ್ಕೆ’ ಎಂದು ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. “ರಣಬೀರ್ ಆಯ್ದುಕೊಂಡ ಚಿತ್ರಗಳಾದ `ರಾಕ್ ಸ್ಟಾರ್’, `ರಾಜನೀತಿ’, `ಬರ್ಫಿ’ ಮೊದಲಾದ ವಿಭಿನ್ನ ಚಿತ್ರಗಳ ಬಗ್ಗೆ ನನಗೇ ಗೊಂದಲವಿತ್ತು” ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. `ಬರ್ಫಿ’ ಚಿತ್ರದ ನಂತರ ರಣಬೀರನ ಬಗ್ಗೆ ಜನರ ನಿರೀಕ್ಷೆ ಹೆಚ್ಚಾಗಿರುವುದರಿಂದ `ಬೇಶರಮ್’ ಸಿನಿಮಾ ಮಕಾಡೆ ಮಲಗಿತು. ಆದರೂ ರಣಬೀರನ ಫ್ಲಾಪ್ ಚಿತ್ರವೂ 60 ಕೋಟಿ ರೂ ಮೊಗೆದಿದೆ. ರಣಬೀರ್ ಯಾವ ಚಿತ್ರವೇ ಮಾಡಲಿ, ಅವನನ್ನು ನೋಡಲೇ ಜನ ಥಿಯೇಟರಿಗೆ ಹೋಗುತ್ತಿರುವುದು ಇಷ್ಟು ಚಿಕ್ಕ ವಯಸ್ಸಿನಲ್ಲಿ ರಣಬೀರ್ ಮಾಡಿರುವ ದೊಡ್ಡ ಸಾಧನೆ ಎನ್ನಲೇಬೇಕಾಗಿದೆ” ಎಂದೂ ಮಗನ ಬಗ್ಗೆ ಮೆಚ್ಚುಗೆ ತೋರಿಸುತ್ತಾರೆ ರಿಷಿ. ತಮ್ಮ ಕಾಲಕ್ಕಿಂತಲೂ ಈಗ ನಟನಾಕ್ಷೇತ್ರದಲ್ಲಿರುವುದು ಬಹಳ ಸ್ಪರ್ಧಾತ್ಮಕ ಎನ್ನುವುದು ರಿಷಿ ಅಭಿಪ್ರಾಯ. ಅದಲ್ಲದೇ ಮಗ ಒಬ್ಬ ಇಂಟಲಿಜೆಂಟ್ ನಟ ಎಂದು ಒಪ್ಪಿಕೊಳ್ಳುತ್ತಾರೆ ರಿಷಿ.

ಇದಲ್ಲದೇ ರಿಷಿ ತನ್ನ ಮತ್ತು ಮಗನ ಪರ್ಸನಲ್ ಸಂಬಂಧದ ಬಗ್ಗೆಯೂ ಹೇಳಿಕೊಂಡಿದ್ದಾರೆ. “ಮಗನ ಜೊತೆ ನಾನೆಂದೂ ಸ್ನೇಹಿತನಂತಿರಲಿಲ್ಲ. ಅದನ್ನು ನಾನು ಮಿಸ್ ಮಾಡಿಕೊಂಡಿದ್ದೇನೆ ಎಂದು ಕೆಲವೊಮ್ಮೆ ಅನಿಸುತ್ತದೆ. ಆದರೆ ನಾನು ಅದೇ ರೀತಿಯೇ ಮೊದಲಿಂದಲೂ ಇದ್ದೆ. ಅವನು ಈ ಜನರೇಶನ್ನಿನ ಹುಡುಗ. ಅದಕ್ಕೆ ಹೊಂದಿಕೊಳ್ಳುವುದು ನನಗೆ ಸ್ವಲ್ಪ ಕಷ್ಟವೆನಿಸುತ್ತದೆ. ನಮ್ಮ ಮಧ್ಯೆ ಹಾಗಾಗಿ ತೆಳು ಗೋಡೆ ಯಾವಾಗಲೂ ಇದೆ” ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ ರಿಷಿ.