ನನಗೆ ಅದ್ದೂರಿ ಮದುವೆ ಇಷ್ಟವಿಲ್ಲ

ಪ್ರ : ನಾನು ನಮ್ಮ ಅಪ್ಪ, ಅಮ್ಮನಿಗೆ ಒಬ್ಬನೇ ಮಗ. ನನಗೆ ಮೊದಲಿಂದಲೂ ಸಿಂಪ್ಲಿಸಿಟಿ ಇಷ್ಟ . ಕೆಲವು ಸಂಘಟನೆಯಲ್ಲೂ ಸಕ್ರಿಯವಾಗಿದ್ದೇನೆ. ನಮ್ಮದು ಬಡವರ ಪರವಾಗಿ ಹೋರಾಡುವ ಸಂಘಟನೆ. ಈಗ ನನಗೆ ಮದುವೆ ನಿಶ್ಚಯವಾಗಿದೆ. ಹುಡುಗಿಯ ಮನೆಯವರು ತುಂಬಾ ಶ್ರೀಮಂತರಾದರೂ ಅವಳು ಸರಳವಾಗಿಯೇ ಇದ್ದಾಳೆ. ಅವಳೂ ಅವರ ಪಾಲಕರಿಗೆ ಒಬ್ಬಳೇ ಮಗಳು. ಅವರಿಗೆ ಅವರ ಊರಿನ ಎಲ್ಲರನ್ನೂ ಕರೆದು ಮದುವೆ ಅದ್ದೂರಿಯಾಗಿ ಮಾಡಬೇಕೆನ್ನುವ ಬಯಕೆ. ನಮ್ಮ ಮನೆಯವರಿಗೂ ಎಲ್ಲ ನೆಂಟರಿಷ್ಟರನ್ನು ಕರೆಯಬೇಕೆನ್ನುವುದೇ ಇದೆ. ನನಗದು ಇಷ್ಟವಿಲ್ಲ. ನಾನು ಹೇಳಿದರೆ ಅವರು ಕೇಳುವ ಸ್ಥಿತಿಯಲ್ಲಿ ಇಲ್ಲ. ನನ್ನ ಮದುವೆ ಅಷ್ಟು ಗ್ರಾಂಡಾಗಿ ಆದರೆ ಜನ ನನ್ನನ್ನು ತಪ್ಪು ತಿಳಿದುಕೊಳ್ಳಲಿಕ್ಕಿಲ್ಲವೇ?

: ಈಗಿನ ಕಾಲದಲ್ಲಿ ನಿಮ್ಮಂತಹ ಯುವಕರೂ ಇದ್ದಾರೆ ಅನ್ನುವುದು ನಿಜಕ್ಕೂ ಸಮಾಧಾನ ತರುವ ವಿಷಯ. ಮದುವೆ ಎಂದರೆ ಹುಡುಗಿ ಕಡೆಯವರನ್ನು ಎಷ್ಟು ಮಾಡಿದರೂ ಕಡಿಮೆ ಅಂತ ಸತಾಯಿಸುವ ಜನರೇ ಜಾಸ್ತಿ ಇರುವಾಗ ನಿಮ್ಮ ನಡೆ ನಿಜಕ್ಕೂ ಶ್ಲಾಘನೀಯ. ಆದರೆ ಹುಡುಗಿಯ ಪಾಲಕರಿಗೆ ತಮಗಿರುವ ಒಬ್ಬಳೇ ಮಗಳ ಮದುವೆಗೆ ಊರವರನ್ನೆಲ್ಲ ಕರೆದು ಅವರ ಸಮ್ಮುಖದಲ್ಲೇ ಧಾರೆ ಎರೆಯಬೇಕೆನ್ನುವ ಬಯಕೆ ಇರುವುದು ಸಹಜ ತಾನೇ. ಅವರೂ ಊರವರ ಮದುವೆಗೆ ಹೋಗಿರುತ್ತಾರೆ. ಅವರ ಮಗಳ ಮದುವೆಗೆ ಕರೆಯದಿದ್ದರೆ ಜನರೇನು ಅಂದುಕೊಳ್ಳಬಹುದೆಂದೂ ಅವರು ಯೋಚಿಸುತ್ತಾರೆ. ಉಡುಗೊರೆ, ವರೋಪಚಾರ ಬೇಡ ಅಂತ ಹೇಳಬಹುದು. ವೈಭವದ ಡೆಕೊರೇಶನ್ನಿಗೂ ಕಡಿವಾಣ ಹಾಕಬಹುದು. ಆಮಂತ್ರಿತರಿಗೂ `ಆಶೀರ್ವಾದವೇ ಉಡುಗೊರೆ’ ಅಂತ ತಿಳಿಸಬಹುದು. ಜನರನ್ನು ಕರೆದರೂ ಆದಷ್ಟು ಒಂದೇ ದಿನದಲ್ಲಿ ಸರಳವಾಗಿ ಎಲ್ಲ ವಿಧಿವಿಧಾನಗಳಿರಲಿ ಅಂತ ತಿಳಿಸಬಹುದು. 


ಇದು ಪ್ರೀತಿನಾ, ಬರೀ ಸ್ನೇಹಾನಾ?

ಪ್ರ : ಅವಳೂ ನಾನೂ ಒಂದು ವರ್ಷದಿಂದ ಒಳ್ಳೆಯ ಫ್ರೆಂಡ್ಸ್ . ಅವಳು ನನ್ನನ್ನು ಪ್ರೀತಿಸುತ್ತಿದ್ದಾಳೆ. ನನಗೆ ಅವಳ ಬಗ್ಗೆ ಯಾವ ಭಾವನೆಯಿದೆ ಅಂತ ನನಗೇ ಗೊತ್ತಾಗುತ್ತಿಲ್ಲ. ಅವಳ ಜೊತೆಗಿನ ಒಡನಾಟ ನನಗೆ ಇಷ್ಟವಾದರೂ ಅದು ಪ್ರೀತಿಯೇ ಅಂತ ಗೊತ್ತಾಗುತ್ತಿಲ್ಲ. ಅವಳಾಗಿಯೇ ಪ್ರಪೋಸ್ ಮಾಡಿದ್ದಾಳೆ. ಅದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಅಂತಲೇ ಗೊತ್ತಾಗುತ್ತಿಲ್ಲ. ಸಹಾಯ ಮಾಡುವಿರಾ?

: ಆಕೆ ಹತ್ತಿರ ಈ ವಿಷಯ ಧೈರ್ಯವಾಗಿ ಹೇಳಿ. ನಿಮಗೆ ಯೋಚಿಸಲು ಸ್ವಲ್ಪ ಸಮಯ ಕೊಡುವಂತೆ ಕೇಳಿ. ನೀವಿನ್ನೂ ಪ್ರೀತಿಯ ಬಗ್ಗೆ ಯೋಚಿಸಿಲ್ಲ ಅಂತ ತಿಳಿಸಿ. ಆದರೂ ಹೆಚ್ಚು ಸಮಯ ತೆಗೆದುಕೊಳ್ಳದೇ ನಿರ್ಧರಿಸಿ. ಒಂದು ವಿಷಯ ಯಾವಾಗಲೂ ತಿಳಿದಿರಲಿ. ಸಂಗಾತಿಯ ಜೊತೆ ಒಳ್ಳೆಯ ಸ್ನೇಹ ಮತ್ತು ಅಂಡರ್‍ಸ್ಟಾಂಡಿಗ್ ಇದ್ದರೆ ಮಾತ್ರ ಆ ಸಂಬಂಧ ಗಟ್ಟಿಯಿರುತ್ತದೆ.