ನನಗೆ ಮನೆ ಅಳಿಯನಾಗಲು ಇಷ್ಟವಿಲ್ಲ

ಪ್ರ : ನಾನೊಂದು ಫ್ಯಾಕ್ಟರಿಯಲ್ಲಿ ಮೆನೇಜರ್ ಕೆಲಸ ಮಾಡುತ್ತಿದ್ದೇನೆ. ನಮ್ಮ ಧಣಿಗೆ ನಾನೆಂದರೆ ತುಂಬಾ ನಂಬಿಗೆ. ನಮ್ಮ ಯಜಮಾನರಿಗೆ ಗಂಡು ಮಕ್ಕಳಿಲ್ಲ. ಆದ್ದರಿಂದ ಹೆಚ್ಚಿನ ಜವಾಬ್ದಾರಿ ನನಗೇ ವಹಿಸಿದ್ದರು. ನಾನೂ ಕೂಡಾ ಎಂಬಿಎ ಗ್ರಾಜುವೇಟ್. ಆಫೀಸಿನಿಂದ ನನಗೆ ಒಳ್ಳೆಯ ಸಂಬಳ ಕೊಡುತ್ತಿದ್ದಾರೆ. ನನ್ನ ಜವಾಬ್ದಾರಿಯನ್ನು ಶೇರ್ ಮಾಡಿಕೊಳ್ಳಲು ಬಾಸ್ ಮಗಳು ಈ ವರ್ಷ ತನ್ನ ವಿದ್ಯಾಭ್ಯಾಸ ಮುಗಿಸಿ ನಮ್ಮ ಫ್ಯಾಕ್ಟರಿಯ ಉಸ್ತುವಾರಿ ನೋಡಿಕೊಳ್ಳಲು ದಿನಾ ಬರಲು ಪ್ರಾರಂಭಿಸಿದ್ದಾಳೆ.   ಅವಳು ಸಿಎ ಮಾಡಿಕೊಂಡಿದ್ದಾಳೆ. ಹಣಕಾಸಿನ ವ್ಯವಹಾರದಲ್ಲಿ ಪರಿಣಿತಳು. ಈಗ ನಮ್ಮ ಯಜಮಾನರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಎಲ್ಲ ಜವಾಬ್ದಾರಿಯೂ ಅವರ ಮಗಳ ಮತ್ತು ನನ್ನ ಮೇಲೆ ಬಿದ್ದಿದೆ. ಆಕೆ ಪ್ರತಿಯೊಂದು ವಿಚಾರವನ್ನೂ ನನ್ನ ಹತ್ತಿರ ಚರ್ಚೆ ಮಾಡಿಯೇ ನಿರ್ಧಾರ ತೆಗೆದುಕೊಳ್ಳುತ್ತಾಳೆ. ನಮ್ಮ ಫ್ಯಾಕ್ಟರಿಗೆ ಬೇಕಾಗುವ ಮುಖ್ಯ ಸಾಮಾನುಗಳನ್ನು ಕೊಳ್ಳಲು, ಬ್ಯಾಂಕ್ ಕೆಲಸಕ್ಕೆ ಹೀಗೆ ಎಲ್ಲ ಕಡೆಯೂ ಅವಳು ನನ್ನನ್ನು ಕರೆದುಕೊಂಡು ಹೋಗುತ್ತಾಳೆ. ನನಗೆ ತುಂಬಾ ಗೌರವವನ್ನೂ ಕೊಡುತ್ತಾಳೆ. ಈಗ ನಮ್ಮ ಮಧ್ಯೆ ಒಲವೂ ಬೆಳೆದಿದೆ. ಅದು ನಮ್ಮ ಯಜಮಾನರ ಗಮನಕ್ಕೂ ಬಂದಿದೆ. ಅವರು ನಮ್ಮ ಮದುವೆಗೆ ಒಪ್ಪಿಗೆಯನ್ನೂ ಇತ್ತಿದ್ದಾರೆ. ಅದರೆ ಅವರ ಒಂದೇ ಕಂಡೀಶನ್ ಅಂದರೆ ನಾನು ಅವರ ಮನೆ ಅಳಿಯನಾಗಬೇಕು. ನನಗೆ ಅದು ಇಷ್ಟವಿಲ್ಲ. ನನಗೆ ಇಬ್ಬರು ತಂಗಿ ಹಾಗೂ ತಾಯಿಯ ಜವಾಬ್ದಾರಿ ಇದೆ. ನಾನು ನಮ್ಮ ಮನೆಗೆ ಒಬ್ಬನೇ ಗಂಡು ಮಗ. ಹೀಗಿರುವಾಗ ಎಲ್ಲ ಬಿಟ್ಟು ಮಾವನ ಮನೆಯಲ್ಲಿ ಹೋಗಿ ಹೇಗೆ ಇರಲಿ? ನಮ್ಮ ಪ್ರೀತಿಗಾಗಿ ಅಷ್ಟೂ ಮಾಡಲು ಆಗುವುದಿಲ್ಲವೇ ಅಂತ ಇವಳೂ ಕೇಳುತ್ತಿದ್ದಾಳೆ. ನಾನೀಗ ಏನು ಮಾಡಲಿ?

ಉ : ಸ್ವಾಭಿಮಾನಿ ಗಂಡಿಗೆ ಮನೆ ಅಳಿಯನಾಗಿ ಮಾವನ ಮನೆಯಲ್ಲೇ ಇರುವುದು ಸ್ವಲ್ಪ ಮುಜುಗರಕಾರೀ ವಿಷಯವೇ. ಮನೆ ಅಳಿಯನಾದರೆ ತಾವು ಸ್ವತಂತ್ರವಾಗಿರಲು ಕಷ್ಟವಾಗುತ್ತದೆ ಅಂತ ಹೆಚ್ಚಿನ ಹುಡುಗರು ಭಾವಿಸುತ್ತಾರೆ. ಈಗ ಅವರು ನಿಮ್ಮನ್ನು ಮನೆ ಅಳಿಯನಾಗು ಅಂತ ಕೇಳಿಕೊಳ್ಳುವುದು ಯಾಕೆಂದರೆ ಅವರಿಗೆ ಬೇರೆ ಗಂಡುಮಕ್ಕಳಿಲ್ಲದ ಕಾರಣ ತಮ್ಮನ್ನು ಮತ್ತು ತಮ್ಮ ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಲು ಯಾರೂ ಇಲ್ಲದ ಹಾಗಾಗುತ್ತದಲ್ಲಾ ಅಂತ. ಮಗಳೂ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋದರೆ ತಮ್ಮ ಗತಿಯೇನು ಅಂತ ಅವರ ಆತಂಕ. ಅವರ ಆತಂಕವನ್ನು ಮೊದಲು ದೂರ ಮಾಡಿ. ನೀವು ಅವರ ಮನೆಯ ಹತ್ತಿರದಲ್ಲೇ ಎಲ್ಲಾದರೂ ಮನೆ ಮಾಡಿ ಅವರನ್ನೂ ನೋಡಿಕೊಳ್ಳುವುದಾಗಿ ಭರವಸೆ ಕೊಡಿ. ಕೊನೆಯ ಪಕ್ಷ ತಂಗಿಯರ ಮದುವೆಯಾಗುವವರೆಗಾದರೂ ನೀವು ಬೇರೆ ಇರುತ್ತೇನೆ ಅಂತ ತಿಳಿಸಿ. ನಿಮ್ಮ ಮದುವೆಯಾದ ನಂತರವೂ ಅವರ ಮಗಳು ತನ್ನ ತವರು ಮತ್ತು ನಿಮ್ಮ ಮನೆಯ ನಡುವೆ ಓಡಾಡಿಕೊಂಡಿದ್ದರೆ ನಿಮ್ಮ ಅಭ್ಯಂತರವಿಲ್ಲ ಅಂತ ತಿಳಿಸಿ. ಸಂದರ್ಭ ಬಿದ್ದರೆ ನೀವೂ ಕೆಲವು ದಿನ ಮಾವನ ಮನೆಯಲ್ಲಿ ಇರಬಹುದು. ನೀವು ಬೇರೆ ಮನೆಯಲ್ಲಿದ್ದರೂ ಅವರೆಲ್ಲರ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವ ವಿಶ್ವಾಸ ಅವರಲ್ಲಿ ಮೂಡಿಸಿದರೆ ಅವರೂ ನಿರಾತಂಕವಾಗಿ ನಿಮ್ಮ ಮದುವೆ ಮಾಡುತ್ತಾರೆ.

LEAVE A REPLY