`ನಾನು ಜಯಲಲಿತಾ ಅವರ ಕಾನೂನುಬದ್ಧ ಉತ್ತರಾಧಿಕಾರಿ’

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಿನಗಳಲ್ಲಿ ಹಲವಾರು ಬಾರಿ ಅಲ್ಲಿಗೆ ಬಂದು ಅವರನ್ನು ಭೇಟಿಯಾಗಲು ವಿಫಲ ಯತ್ನ ನಡೆಸಿದ್ದರು ಅವರ ಸೋದರ ಸೊಸೆ ದೀಪಾ ಜಯಕುಮರ್. ದೀಪಾ ಅವರು ಜಯಲಲಿತಾ ಅವರನ್ನೇ ತಕ್ಕಮಟ್ಟಿಗೆ ಹೋಲುತ್ತಿದ್ದಾರೆಂದು ಈಗಾಗಲೇ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿಯಾಗಿದೆ. ಅವರೇ ಎಐಡಿಎಂಕೆ ಪಕ್ಷವನ್ನು ಮುನ್ನಡೆಸಬೇಕೆಂದು ಹೇಳುವವರೂ ಇದ್ದಾರೆ. ಅವರೊಂದಿಗಿನ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.

  • ಶಶಿಕಲಾ ಅವರೇ ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸುವ ಎಲ್ಲಾ ಸೂಚನೆಗಳೂ ಇವೆ. ನಿಮ್ಮ ಪ್ರತಿಕ್ರಿಯೆ ?

ಎಐಎಡಿಎಂಕೆ ಜನರ ಪಕ್ಷ. ಅದು ಪ್ರಜಾಪ್ರಭುತ್ವ ಮಾದರಿಯಲ್ಲಿ ನಂಬಿಕೆಯಿರಿಸಿದೆ. ಯಾರೋ ಒಮ್ಮೆಗೇ ಆ ಪಕ್ಷದ ಮೇಲೆ ತಮ್ಮ ಹಿಡಿತ ಸಾಧಿಸಲು ಸಾಧ್ಯವಿಲ್ಲ. ಆತ ಸದಸ್ಯರಿಂದ ಆರಿಸಿದವನಾಗಿರಬೇಕು. ಶಶಿಕಲಾ ಅಥವಾ ಬೇರೆ ಯಾರಾದರೂ ಅಧಿಕಾರ ಸೆಳೆಯಲು ಯತ್ನಿಸಿದರೆ ಅವರು ಚುನಾವಣೆಯಲ್ಲಿ ಗೆಲ್ಲದ ಹೊರತು ನಿಜವಾದ ನಾಯಕರಾಗಲು ಸಾಧ್ಯವಿಲ್ಲ.


  • ಜಯಲಲಿತಾ ಅವರ ಅಂತಿಮ ಯಾತ್ರೆಯುದ್ದಕ್ಕೂ ನಿಮ್ಮ ಸಹೋದರ ಜಯಲಲಿತಾ ಜತೆಗಿದ್ದರು. ಏಕೆ ? ನಿಮ್ಮಿಬ್ಬರೊಳಗೆ ಏನಾದರೂ ಮನಸ್ತಾಪವೇ ?

ಆತ ಅಲ್ಲಿಗೆ ಹೋಗುತ್ತಿದ್ದಾನೆಂದು ನನಗೆ ತಿಳಿದಿರಲಿಲ್ಲ.  ನಮ್ಮಿಬ್ಬರಲ್ಲೇನೂ  ಮನಸ್ತಾಪವಿಲ್ಲ. ಆದರೆ ಆತ ಅವರೊಂದಿಗೆ ಹೊಂದಿಕೊಂಡಿದ್ದಾನೆ. ಆದರೆ ಅವರು ಹೇಳಿದಂತೆ ಕೇಳಿಕೊಂಡಿರಲು ನನಗೆ ಸಾಧ್ಯವಿಲ್ಲ.


  • ಜಯಲಲಿತಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವ ಅವಕಾಶ ನಿಮಗೆ ನೀಡಲಾಯಿತು. ಅದು ಹೇಗೆ ಸಾಧ್ಯವಾಯಿತು ?

ನಾನು ಮಧ್ಯರಾತ್ರಿಯ ಹೊತ್ತಿಗೆ ಪೋಸ್ ಗಾರ್ಡನ್ ತಲುಪಿ ಅಲ್ಲಿ ಎಂಟು ಗಂಟೆಗಳಷ್ಟು ಕಾಲ ಕಾದೆ. ಅವರೊಂದಿಗೆ ಬೇಡಿಕೊಂಡರೂ ಪ್ರವೇಶ ನಿರಾಕರಿಸಲಾಗಿತ್ತು. ನಂತರ ನಾನು ರಾಜಾಜಿ ಹಾಲ್ ಕಡೆ ಹೋದರೂ ಇದೇ ಪರಿಸ್ಥಿತಿಯಿತ್ತು. ಕೊನೆಗೆ ನಾನು ಹೋರಾಡಿ, ಗಲಾಟೆ ಮಾಡಿ ಒಳ ಪ್ರವೇಶಿಸಿದೆ.


  • ನೀವು ನೋಡಲು ಜಯಲಲಿತಾ ಅವರಂತೆಯೇ ಇರುವುದರಿಂದ ಜನರಿಗೆ ನೀವು ಮೆಚ್ಚಿಗೆಯಾಗಿದ್ದೀರಿ. ನಿಮಗೆ ರಾಜಕೀಯ ಪ್ರವೇಶಿಸುವುದಕ್ಕೆ ಅಭ್ಯಂತರವಿಲ್ಲ ಎಂದು ನೀವು ಟೀವಿ ವಾಹಿನಿಯೊಂದಕ್ಕೂ ಹೇಳಿದ್ದೀರಲ್ಲವೇ ?

ಅದು ಜನರ ಇಚ್ಛೆಯಾಗಿದ್ದರೆ ನಾನು ಅದರ ವಿರುದ್ಧವಾಗಿಲ್ಲ. ಇದು ನನ್ನ ಗುರಿಯಾಗಿಲ್ಲದೇ ಇದ್ದರೂ ಇದರ ಅಗತ್ಯತೆ ಇದೆ. ಮರೀನಾ ಬೀಚಿನಲ್ಲಿ ಹಲವು ಜನರು ನನ್ನ ಬಳಿ ಬಂದು ಮಾತನಾಡಿರುವುದರಿಂದ ನಾನು ಈ ರೀತಿಯಾಗಿ ಯೋಚಿಸುತ್ತಿದ್ದೇನೆ.


  • ನೀವು ಕೊನೆಯ ಬಾರಿ ಜಯಲಲಿತಾ ಅವರನ್ನು ಯಾವಾಗ ಭೇಟಿಯಾದಿರಿ ?

ನಾನು 2002ರಲ್ಲಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಲು ಹೋಗಿದ್ದಾಗ ಇಡೀ ದಿನ ಅವರ ಜತೆ ಕಳೆದಿದ್ದೆ. ನಮ್ಮ  ಕುಟುಂಬಗಳ ಬಗ್ಗೆ, ಹಿಂದಿನ ಘಟನೆಗಳು ಹಾಗೂ ನಾವು ಬೇರೆಯಾಗಲು ಕಾರಣಗಳನ್ನು ನಾವು ಚರ್ಚಸಿದೆವು. 2004ರಲ್ಲಿ ನಾನು ಆಕೆಯ ಹುಟ್ಟುಹಬ್ಬದಂದು ಆಕೆಗೆ ಫೋನ್ ಮೂಲಕ ಶುಭಾಶಯ ಸಲ್ಲಿಸಿದೆ. ತನಗೆ ತುರ್ತು ಕೆಲಸ ಇರುವುದಿರಂದ ಮತ್ತೆ ಮಾತನಾಡುವುದಾಗಿ ಅವರು ಹೇಳಿದ್ದರು. ನಂತರ ನಾನು ಹಲವಾರು ಬಾರಿ ಅವರ ನಿವಾಸಕ್ಕೆ ಬಂದರೂ ಯಾರೂ ನನ್ನನ್ನು ಒಳ ಹೋಗಲು ಅನುಮತಿಸಿರಲಿಲ್ಲ. 2014ರಲ್ಲಿ ಆಕೆ ಬೆಂಗಳೂರು ಜೈಲಿನಲ್ಲಿದ್ದಾಗ ನನ್ನನ್ನು ನೋಡಲು ಮನಸ್ಸು ಮಾಡಿದ್ದರೂ ಒಳಗೆ ಹೋಗಲು ನನಗೆ ಅನುಮತಿ ಸಿಕ್ಕಿರಲಿಲ್ಲ.


  • ಜಯಲಲಿತಾ ಅವರನ್ನು ಭೇಟಿಯಾಗದಂತೆ ನಿಮ್ಮನ್ನು ಏಕೆ ತಡೆಯಲಾಗುತ್ತಿತ್ತು ?

ಇದು ನನಗೆ ತಿಳಿದಿಲ್ಲ. 2002ರ ನಂತರ ನಾನು ಶಶಿಕಲಾರನ್ನೂ ಭೇಟಿಯಾಗಿಲ್ಲ. ಜಯಲಲಿತಾ ಅವರ ವಿಲ್ ಬಗ್ಗೆ ಹಲವಾರು ಊಹಾಪೋಹಗಳಿವೆ. ಶಶಿಕಲಾ ಮತ್ತಾಕೆಯ ಕುಟುಂಬವನ್ನು ಅವರು 2011ರಲ್ಲಿ ಹೊರಹಾಕಿದ್ದರೂ ಅವರೇಕೆ ಮತ್ತೆ ಬಂದರೆಂದು ನನಗೆ ತಿಳಿಯದಾಗಿದೆ. ನನ್ನ ಅತ್ತೆ ಯಾವತ್ತೂ ಒತ್ತಡಕ್ಕೆ ಮಣಿಯುವವರಲ್ಲ ಎಂಬುದು ನನಗೆ ತಿಳಿದಿದೆ. ಆಕೆ ವಿಲ್ ಬರೆದಿದ್ದೇ ಆದಲ್ಲಿ ಅದನ್ನು ಬಹಿರಂಗಪಡಿಸಬೇಕು. ನಾನು ಜಯಲಲಿತಾ ಅವರ ಕಾನೂನುಬದ್ಧ ಉತ್ತರಾಧಿಕಾರಿ.


  • ಆಸ್ತಿಯ ವಿಚಾರ ಬಂದಾಗ ಮಾತ್ರ ನೀವು ಮುಂದೆ ಬಂದಿದ್ದೀರೆಂಬ ಆರೋಪ ನೀವು ಎದುರಿಸಬೇಕಲ್ಲವೇ ?

ಕಾನೂನಿನ ಪ್ರಕಾರ ಯಾರು ಉತ್ತರಾಧಿಕಾರಿಯಾಗುತ್ತಾರೋ ಅವರಿಗೇ ಆಸ್ತಿ ಹೋಗಬೇಕಾಗಿದೆ. ಹೋರಾಡಬೇಕಿದ್ದಲ್ಲಿ ನಾನು ಅದಕ್ಕೂ ಸಿದ್ಧವಾಗಿದ್ದೇನೆ. ನಮ್ಮ ಕುಟುಂಬ ಜಯಲಲಿತಾ ನಿವಾಸದಲ್ಲಿಯೇ ವಾಸವಾಗಿತ್ತು, ನಾನು ಅದೇ ಮನೆಯಲ್ಲಿ 1974ರಲ್ಲಿ ಹುಟ್ಟಿದ್ದೆ. ಜಯಲಲಿತಾ ಅವರೇ ನನಗೆ ದೀಪಾ ಎಂಬ ಹೆಸರಿಟ್ಟಿದ್ದರು. ನಮಗೆ ನಮ್ಮದೇ ಆದ ಖಾಸಗಿ ಬದುಕು  ಬೇಕಿದ್ದರಿಂದ 1978ರಲ್ಲಿ ನಾವು ಅಲ್ಲಿಂದ ಹೊರಹೋದೆವು. ನಮ್ಮ ತಂದೆ 1995ರಲ್ಲಿ ತೀರಿಕೊಂಡಾಗ ಜಯಲಲಿತಾ ದುಃಖಿತರಾಗಿದ್ದರು ಹಾಗೂ ನಮಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದ್ದರು. ನಾವು ಜಯಲಲಿತಾ ಅವರೊಂದಿಗೆ ಯಾವತ್ತೂ ಇದ್ದೆವು. ಆದರೆ ಇತ್ತೀಚಿಗಿನ ವರ್ಷಗಳಲ್ಲಿ ನಮ್ಮನ್ನು ಉದ್ದೇಶಪೂರ್ವಕವಾಗಿ ಬೇರೆ ಮಾಡಲಾಗಿತ್ತು.