`ನಾನು ಝಾನ್ಸಿ ರಾಣಿಯಷ್ಟು ದಿಟ್ಟೆ’

ಮುಂಬೈ : ವಿವಾದಾತ್ಮಕ ನಟಿ-ಟೀವಿ ಕಲಾವಿದೆ ರಾಖಿ ಸಾವಂತ್ ತಮ್ಮ ಪದಪುಂಜಗಳನ್ನು ಎರ್ರಾಬಿರ್ರಿಯಾಗಿ ಬಿಡುವುದರಲ್ಲಿ ಕುಖ್ಯಾತಿ ಪಡೆದವರು. ಹೀಗಾಗಿ ಮಾತನಾಡುವ ಮುನ್ನ ಭಯಪಡಬೇಕೆಂದಲ್ಲಿ ಪ್ರಜಾಪ್ರಭುತ್ವದಲ್ಲಿ ನೆಲೆಸಿ ಏನು ಪ್ರಯೋಜನ ಎನ್ನುವ ಅವರ ಹೇಳಿಕೆಗೆ ಅಚ್ಚರಿಪಡಬೇಕಾಗಿಲ್ಲ.

ವಾಲ್ಮಿಕಿ ಸಮುದಾಯದ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದ್ದಾರೆ ಎನ್ನುವ ಆರೋಪ ಇತ್ತೀಚೆಗೆ ರಾಖಿ ಮೇಲೆ ಬಂದಿದ್ದು ಆಕೆಯ ಕುರಿತ ಹೊಸ ವಿವಾದ. ಈ ಬಗ್ಗೆ ಪ್ರಶ್ನಿಸಿದರೆ ರಾಖಿ ನೇರ ಉತ್ತರ ಕೊಡುತ್ತಾರೆ. `ನನ್ನ ವೃತ್ತಿಜೀವನವನ್ನು ಹಾಳು ಮಾಡಲೆಂದೇ ಜನರು ಅನಗತ್ಯ ವಿಷಯಗಳಿಗೆ ನನ್ನನ್ನು ಎಳೆಯುತ್ತಿದ್ದಾರೆ. ಯಾರದೇ ಸಂವೇದನೆ ಘಾಸಿಗೊಳಿಸುವ ವಿಷಯವನ್ನು ನಾನೇನೂ ಹೇಳಿಲ್ಲ. ಹಾಗಿದ್ದರೂ ನಾನು ಕ್ಷಮೆಯಾಚಿಸಿ ವಿಡಿಯೋವನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ್ದೇನೆ. ನಾನು ರಾಣಿ ಝಾನ್ಸಿ ಬಾಯಿಯಂತೆಯೇ ದಿಟ್ಟೆ ಮತ್ತು ನನ್ನನ್ನು ವಿವಾದಕ್ಕೆ ಎಳೆಯುವವರೆಲ್ಲರ ವಿರುದ್ಧವೂ ಹೋರಾಡುತ್ತೇನೆ’ ಎನ್ನುತ್ತಾರೆ ರಾಖಿ.

ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ಇದೇ ಮೊದಲ ಬಾರಿಗೆ ಸಮಸ್ಯೆ ಎದುರಿಸುವುದೇನಲ್ಲ ಎನ್ನುವುದನ್ನು ನೆನಪಿಸಿಕೊಳ್ಳುವ ಅವರನ್ನು “ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವಿರಾ?” ಎಂದು ಕೇಳಿದರೆ ಆಕ್ರೋಶ ವ್ಯಕ್ತಪಡಿಸುತ್ತಾರೆ. `ಯಾಕೆ? ಯಾಕೆ ನಾನು ಬದಲಾಗಬೇಕು. ಹಾಗಿದ್ದರೆ ಪ್ರಜಾಪ್ರಭುತ್ವದಲ್ಲಿ ನೆಲೆಸುವುದರಲ್ಲಿ ಅರ್ಥವೇನಿದೆ? ನಮಗೆ ವಾಕ್‍ಸ್ವಾತಂತ್ರ್ಯವಿಲ್ಲವೆ?’ ಎಂದು ರಾಖಿ ಪ್ರಶ್ನಿಸುತ್ತಾರೆ.

ತಮ್ಮ ಕುರಿತ ವಿವಾದಕ್ಕೆ ತೆರೆ ಎಳೆಯಲೆಂದೇ ಪತ್ರಿಕಾಗೋಷ್ಠಿಯನ್ನು ಕರೆದ ರಾಖಿ ಸ್ವತಃ ಸಮರ್ಥಿಸಿಕೊಂಡಿದ್ದಾರೆ.

ಲುಧಿಯಾನ ನ್ಯಾಯಾಲಯದಲ್ಲಿ ರಾಖಿ ವಿರುದ್ಧ ನೀಡಲಾದ ಬಂಧನದ ವಾರಂಟ್ ಹಿಡಿದು ಪಂಜಾಬ್ ಪೊಲೀಸ್ ತಂಡ ಮುಂಬೈಗೆ ಬಂದಿತ್ತು. ತಮ್ಮ ವಿರುದ್ಧ ವಾಲ್ಮಿಕಿ ಸಮುದಾಯದ ಮೇಲೆ ಅವಹೇಳನಕಾರಿ ಮಾತುಗಳನ್ನು ಆಡಿರುವುದಕ್ಕಾಗಿ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯನ್ನು ಎದುರಿಸಲು ರಾಖಿ ಮಾರ್ಚ್ 9ರಂದು ಹಾಜರಾಗದೆ ಇದ್ದುದಕ್ಕೆ ಈ ವಾರಂಟ್ ನೀಡಲಾಗಿತ್ತು.

ರಾಖಿ ಸಾವಂತಗೆ ತಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದೇ ತಿಳಿದಿರಲಿಲ್ಲ. ಮಾಧ್ಯಮಗಳಿಂದಲೇ ಆಕೆಗೆ ಸುದ್ದಿ ತಲುಪಿತ್ತು. ಕಾರ್ಯಕ್ರಮವೊಂದರಲ್ಲಿ ರಾಖಿ ಅವರು ಕೆಟ್ಟ ಗುಣ ತೊರೆದು ಒಳ್ಳೆಯತನ ರೂಢಿಸಿಕೊಂಡಿರುವ ಗಾಯಕ ಮಿಕಾ ಸಿಂಗ್ ಅವರನ್ನು ವಾಲ್ಮಿಕಿಗೆ ಹೋಲಿಸಿದ್ದರು. ಇದು ವಾಲ್ಮಿಕಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.

ಅಮೀರ್ ಖಾನ್ ಮತ್ತು ಅನುಪಮ್ ಖೇರ್ ನ್ಯಾಯಾಲಯದ ಪ್ರಕರಣದಲ್ಲಿ ತಮಗೆ ಬೆಂಬಲ ಸೂಚಿಸಿದ್ದಾಗಿಯೂ ರಾಖಿ ಹೇಳಿದ್ದಾರೆ.