`ನಾನೊಬ್ಬ ರಾಜಕೀಯೇತರ ವ್ಯಕ್ತಿ’

ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಖ್ಯಾತ ಮುತ್ಸದ್ದಿ ಸಿ ರಾಜಗೋಪಾಲಾಚಾರಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ದೇಶದ ಗಮನ ಸೆಳೆದಿದ್ದಾರೆ. 1968ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಅವರು  ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದವರು. ಈ ಸಂದರ್ಶನದಲ್ಲಿ ಅವರು ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಗಳ ಬಗ್ಗೆ ಮಾತನಾಡಿದ್ದಾರೆ.

  • ಈಗಿನ ರಾಜಕೀಯ ಸನ್ನಿವೇಶದಲ್ಲಿ ರಾಷ್ಟ್ರಪತಿ ಚುನಾವಣೆಯು ಬಿಜೆಪಿ ಮತ್ತದರ ಮಿತ್ರ ಪಕ್ಷಗಳು ಹಾಗೂ ಕಾಂಗ್ರೆಸ್ ಮತ್ತಿತರ ಜಾತ್ಯತೀತ ಪಕ್ಷಗಳ ನಡುವಿನ ಸೈದ್ಧಾಂತಿಕ ಸ್ಪರ್ಧೆಯೆಂದೇ ಹೇಳಲಾಗುತ್ತಿದೆ. ಉಪರಾಷ್ಟ್ರಪತಿ ಚುನಾವಣೆಯೂ ಇದೇ ರೀತಿಯೇ ?

ವಿ ವಿ ಗಿರಿ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವ ತನಕ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಗಳು ಕೇವಲ ಒಂದು ಅಲಂಕಾರಿಕ ಹುದ್ದೆಗಳಾಗಿದ್ದವು. ಆದರೆ ಒಬ್ಬ ಸ್ವತಂತ್ರ ಅಭ್ಯರ್ಥಿಯಾಗಿ ವಿ ವಿ ಗಿರಿ ಅವರು ಈ ಚುನಾವಣೆಗೊಂದು ಸೈದ್ಧಾಂತಿಕ ಹೋರಾಟದ ಸ್ವರೂಪ ತಂದುಕೊಟ್ಟರು. ಬೇರೆ ವಿಚಾರಗಳಲ್ಲಿ ಸದನದಲ್ಲಿ ಮತ ಚಲಾಯಿಸುವಾಗ ಸಂಸದರಿಗೆ ಅವರವರ ಪಕ್ಷಗಳು ವಿಪ್ ಜಾರಿ ಮಾಡುತ್ತಿದ್ದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಹಾಗಿಲ್ಲ. ಎಲ್ಲಾ ಸದಸ್ಯರೂ ತಮಗೆ ಬೇಕಾದವರಿಗೆ ಮತ ಚಲಾಯಿಸಲು ಸ್ವತಂತ್ರರು. ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಆಯ್ಕೆ ಮಾಡುವ ಸೌಭಾಗ್ಯ ಶಾಸಕರುಗಳಿಗಿರುವ ಹಿಂದಿನ ಮಹತ್ವದ ಬಗ್ಗೆ ವಿ ವಿ ಗಿರಿ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿದ್ದರು. ಗಿರಿ ಅವರು ಸ್ಪರ್ಧಿಸಿದ್ದಾಗ ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಎಲ್ಲಾ ಶಾಸಕರು ಹಾಗೂ ಸಂಸದರಿಗೆ ತಮ್ಮ ಆತ್ಮಸಾಕ್ಷಿಯಂತೆ ಮತ ಚಲಾಯಿಸುವಂತೆ ಹೇಳಿದ್ದರು. ಅಂದಿನಿಂದ ಈ ಚುನಾವಣೆ ಒಂದು ಸೈದ್ಧಾಂತಿಕ ಹೋರಾಟವಾಗಿದೆ. ಹಲವಾರು ದಶಕಗಳಿಂದ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗಳು ಅವಳಿ ಚುನಾವಣೆಗಳಾಗಿವೆ. ಇದು ಒಳ್ಳೆಯದು. ಎರಡೂ ಸಂವಿಧಾನಿಕ ಹುದ್ದೆಗಳಾಗಿದ್ದು ಅವುಗಳ ಬೇರು ಸಂಸತ್ತಿನಲ್ಲಿದೆ. ರಾಷ್ಟ್ರಪತಿ ಕೂಡ ಸಂಸತ್ತಿನ ಒಂದು ಭಾಗ ಹಾಗೂ ಸಂಸತ್ತಿನ ಮುಖ್ಯಸ್ಥರಾಗಿದ್ದಾರೆ. ಅವರು ಸಂಸತ್ತಿನ ಅಧಿವೇಶನ ಉದ್ಘಾಟಿಸುತ್ತಾರೆ ಹಾಗೂ ಉಪರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರಾಗಿದ್ದಾರೆ.

  • ಉಪರಾಷ್ಟ್ರಪತಿಯ ಚುನಾವಣೆ ರಾಷ್ಟ್ರಪತಿ ಚುನಾವಣೆಯ ವಿಸ್ತøತ ಭಾಗವಷ್ಟೇ ಎಂಬ ವಾದದ ಬಗ್ಗೆ ಏನಂತೀರಿ ?

`ತುನೈ ತಳೈವರ್’ – ಅಂದರೆ ತಮಿಳು ಭಾಷೆಯಲ್ಲಿ ಉಪರಾಷ್ಟ್ರಪತಿಗಳಿಗೆ ಉಪಯೋಗಿಸುವ ಪದದಲ್ಲಿ ತುನೈ ಎಂದರೆ `ಬೆಂಬಲಿಸುವ’ ಎಂಬರ್ಥ. ಹೀಗಿರುವಾಗ ಉಪರಾಷ್ಟ್ರಪತಿಯೊಬ್ಬ ರಾಷ್ಟ್ರಪತಿ ಹಾಗೂ ಸಂಸತ್ತಿಗೆ ಆಧಾರವಿದ್ದಂತೆ.

  • ಉಪರಾಷ್ಟ್ರಪತಿಯನ್ನು ಎರಡೂ ಸದನಗಳ ಸಂಸದರು ಚುನಾಯಿಸುತ್ತಾರೆ. ಈಗಿನ ಸನ್ನಿವೇಶದಲ್ಲಿ ವಿಪಕ್ಷ ಅಭ್ಯರ್ಥಿಯ ಗೆಲುವು ಅಸಾಧ್ಯ. ಈ ಬಗ್ಗೆ ನೀವೇನಂತೀರಿ ?

ನಾನೊಬ್ಬ ನಾಗರಿಕರ ಅಭ್ಯರ್ಥಿಯಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳು ನನ್ನನ್ನು ಸ್ಪರ್ಧಿಸಲು ಕೇಳಿಕೊಂಡಿದ್ದವು. ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ನಾನೊಬ್ಬ ರಾಜಕೀಯೇತರ ವ್ಯಕ್ತಿ ಎಂದೂ ಹೇಳಬಲ್ಲೆ. ವಿಪಕ್ಷಗಳಿಗೆ ದೇಶದ ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವಂತಹ ಸ್ವತಂತ್ರ ಹಾಗೂ ವಸ್ತುನಿಷ್ಠ ದನಿಯೊಂದರ ಅಗತ್ಯವಿದೆ. ಸರಳವಾಗಿ ಹೇಳುವುದಾದರೆ ನನ್ನನ್ನು ವಿಪಕ್ಷಗಳ ಅಭ್ಯರ್ಥಿಯೆನ್ನಬಹುದು. ಸಂಸದರು ತಮ್ಮ ಪಕ್ಷಗಳ್ಯಾವುದೇ ಇದ್ದರೂ ಸ್ವತಂತ್ರವಾಗಿ ಮತ ಚಲಾಯಿಸುತ್ತಾರೆಂದು ನಾನು ನಂಬಿರುವುದರಿಂದ ಅಂತೆಯೇ ಸ್ವತಂತ್ರ ಅಭ್ಯರ್ಥಿಯೊಬ್ಬ ಸಂಸದರಿಗೆ ಸ್ವತಂತ್ರತೆಯಿಂದ ಮತ ಚಲಾಯಿಸಲು ಮನವಿ ಮಾಡುವವ ನಾನೆಂದುಕೊಳ್ಳುತ್ತೇನೆ.

  • ಏನೇ ಇದ್ದರೂ ನೀವೊಂದು ರಾಜಕೀಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದೀರಿ ಹಾಗೂ ನಿಮ್ಮನ್ನು ಬಿಜೆಪಿ ವಿರುದ್ಧದ ಅಭ್ಯರ್ಥಿಯೆಂದೇ ಗುರುತಿಸಲಾಗುವುದಲ್ಲವೇ ?

ಎಲ್ಲಾ ವಿಚಾರಗಳನ್ನೂ ವಿಶಾಲ ದೃಷ್ಟಿಕೋನದಿಂದ ನಾವು ನೋಡಬೇಕಾದ ಸಮಯ ಬಂದಿದೆ. ಇದೇನು ಪಕ್ಷ ರಾಜಕೀಯವಲ್ಲ. ಆದರೆ ಆತ್ಮಾವಲೋಕನ ಮಾಡುವ ಸಾಮಥ್ರ್ಯವನ್ನು ಎಲ್ಲಾ ಪಕ್ಷಗಳು ಕಳೆದುಕೊಂಡಿವೆಯೇನೋ ಎಂದೆನಿಸುತ್ತದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರ ಹುದ್ದೆಗಳು ರಾಜಕೀಯ ಮೇಲಾಟದಿಂದ ಹೊರತಾಗಿದೆ ಎಂದು ನಾನಂದುಕೊಳ್ಳುತ್ತೇನೆ.