“ನಾನು ಯಾವತ್ತೂ ಹೀಗೆಯೇ” ಎಂದು ರಾಜಿ ಸಭೆಯಲ್ಲಿ ಹೇಳಿದ್ದ ಉ ಕ ಸಂಸದ

ಅನಂತಕುಮಾರ್ ಹೆಗಡೆ

ಈ ಹಿಂದೆ ಪಕ್ಷದ ಸಭೆಯಲ್ಲಿ ಶಾಸಕರೊಬ್ಬರತ್ತ ಕುರ್ಚಿ ತೂರಿದ್ದ ಅನಂತಕುಮಾರ್

ಶಿರಸಿ : ಇಲ್ಲಿನ ಟಿಎಸ್ಸೆಸ್ ಆಸ್ಪತ್ರೆಯಲ್ಲಿ  ಸೋಮವಾರ ಸಂಜೆ ಉತ್ತರ ಕನ್ನಡ ಸಂಸದ  ಅನಂತ್ ಕುಮಾರ್ ಹೆಗಡೆ ಅವರ ತಾಯಿಗೆ ನಾಲ್ಕು ಗಂಟೆಗಳಿಗೂ ಅಧಿಕ ಸಮಯದ ತನಕ ಯಾವುದೇ ಚಿಕಿತ್ಸೆ ನೀಡಿರಲಿಲ್ಲ ಎಂಬ ಸಂಸದರ ಆರೋಪವನ್ನು  ನಿರಾಕರಿಸಿರುವ ಆಸ್ಪತ್ರೆ ಮೂಲಗಳು, ಸಂಸದರ ಸಹೋದರ ಅವರ ತಾಯಿಯನ್ನು ಕ್ಯಾಶುವಲ್ಟಿ ವಿಭಾಗದಲ್ಲಿ ಬಿಟ್ಟು ಆಕೆಯ ಮೂಳೆಮುರಿತಕ್ಕೊಳಗಾದ ಕಾಲಿಗೆ ಶಸ್ತ್ರಕ್ರಿಯೆ ನಡೆಸಬೇಕೆಂಬ ವೈದ್ಯರ ಸಲಹೆ ಬಗ್ಗೆ ಸೆಕೆಂಡ್ ಒಪಿನಿಯನ್ ಪಡೆಯಲು ಹೋಗಿದ್ದರು  ಎಂದು ಹೇಳಿವೆ.

ಸ್ವತಃ ಸಂಸದರು ತಮ್ಮ ತಾಯಿ ಜತೆ ಇದ್ದರು ಎಂಬುದನ್ನು ಆಸ್ಪತ್ರೆ ಮೂಲಗಳು ನಿರಾಕರಿಸಿವೆ. “ಸಂಸದರ ಸಹೋದರನೊಂದಿಗೆ ಅವರ ತಾಯಿ ಬಹಳ ವರ್ಷಗಳಿಂದ ವಾಸಿಸುತ್ತಿದ್ದಾರೆ. ಸೋಮವಾರ ಸಂಜೆ  ಅವರ ಸಹೋದರನೇ ಆಕೆಯನ್ನು ಆಸ್ಪತ್ರೆಗೆ ತಂದಿದ್ದರು ಹಾಗೂ ಮೂಳೆ ತಜ್ಞ ಡಾ ಮಧುಕೇಶ್ವರ ಜಿ ವಿ ಅವರ ವೈದ್ಯಕೀಯ ತಪಾಸಣೆ ನಡೆಸಿ ಶಸ್ತ್ರಕ್ರಿಯೆ ನಡೆಬೇಕೆಂದು ಹೇಳಿದ್ದರು. ಇದನ್ನು ಕೇಳಿ ಸಂಸದರ ಸಹೋದರ ತಮ್ಮ ತಾಯಿಯನ್ನು ಕ್ಯಾಶುವಲ್ಟಿ ವಿಭಾಗದಲ್ಲಿಯೇ ಬಿಟ್ಟು ಸೆಕೆಂಡ್ ಒಪಿನಿಯನ್ ಪಡೆಯಲು ಹೋದರು. ತರುವಾಯ ವೈದ್ಯರು ಅಲ್ಲಿಂದ ತೆರಳಿ ಇತರ  ರೋಗಿಗಳನ್ನು ಕಾಣಲು ಹಾಗೂ ತುರ್ತು ಶಸ್ತ್ರಕ್ರಿಯೆಯೊಂದನ್ನು  ನಡೆಸಲು ತೆರಳಿದರು” ಎಂದು ಮೂಲಗಳು ತಿಳಿಸಿವೆಯಲ್ಲದೆ  ಈ ಸಮಯದಲ್ಲೇ ಸಂಸದ ಅನಂತ್ ಕುಮಾರ್ ಆಸ್ಪತ್ರೆಗೆ ಧಾವಿಸಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಿವೆ.

ಅವರ ಬೆಂಬಲಿಗರು ಕೂಡ ಇಬ್ಬರು ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿದೆ. ನಂತರ ಆಸ್ಪತ್ರೆ ಆಡಳಿತದೊಂದಿಗೆ ನಡೆದ ರಾಜಿ ಪಂಚಾತಿಕೆ ಸಭೆಯಲ್ಲೂ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಸಂಸದ  ವಿಷಾದ ವ್ಯಕ್ತ ಪಡಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಅದರ ಬದಲು ಅವರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ “ನಾನು ಯಾವತ್ತೂ ಹೀಗೆಯೇ” ಎಂದು ಹೇಳಿದರೆನ್ನಲಾಗಿದೆ. ಆದರೆ ನಂತರ  ಆಸ್ಪತ್ರೆ ಆಡಳಿತದೊಂದಿಗೆ ರಾಜಿ ಮಾಡಿಕೊಳ್ಳಲು ತಾನು ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರೆನ್ನಲಾಗಿದೆ.

ಅನಂತಕುಮಾರ್ ಹೆಗಡೆ ತಪ್ಪಾದ ಕಾರಣಗಳಿಗೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಕೇವಲ ನಾಲ್ಕು ತಿಂಗಳುಗಳ ಹಿಂದೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಿಗೆ  ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕರೆಯಲಾದ ಸಭೆಯೊಂದರಲ್ಲಿ ಅವರು ಕುರ್ಚಿಯೊಂದನ್ನು ಪಕ್ಷದ ಶಾಸಕರತ್ತ ತೂರಿದ್ದರು. “ಶಾಸಕರು ದೈಹಿಕ ಹಲ್ಲೆಯಿಂದ ಪಾರಾದರೂ ಅವರು ಸಂಸದರಿಂದ ನಿಂದನೆಕ್ಕೊಳಗಾಗಿದ್ದರು” ಎಂದು ಬಿಜೆಪಿ ಮೂಲಗಳು ತಿಳಿಸಿವೆ.