ನಾನು ಬಿಜೆಪಿಗೆ ಮತ ಹಾಕುವವ, ಗೋ ರಕ್ಷಣೆಯ ಬೆಂಬಲಿಗ ಎಂದ ಮಾಹಿತಿ ಆಯುಕ್ತ ಆಚಾರ್ಯುಲು

ಶ್ರೀಧರ್ ಆಚಾರ್ಯುಲು, ಕೇಂದ್ರೀಯ ಮಾಹಿತಿ ಆಯುಕ್ತ

ಪ್ರಧಾನಿ ಮೋದಿ ತಮ್ಮ ಪದವಿ ಪೂರೈಸಿದ್ದರೆನ್ನಲಾದ ವರ್ಷವಾದ 1978ರ ಪದವಿ ದಾಖಲೆಗಳನ್ನು ಒದಗಿಸುವಂತೆ ದೆಹಲಿ ವಿಶ್ವವಿದ್ಯಾಲಯಕ್ಕೆ ಹಾಗೂ ಕೇಂದ್ರ  ಜವುಳಿ ಸಚಿವೆ ಸ್ಮøತಿ ಇರಾನಿ ಶೈಕ್ಷಣಿಕ ದಾಖಲೆಯೊದಗಿಸುವಂತೆ ಸಿಬಿಎಸ್ಸಿಗೆ  ಆದೇಶ ನೀಡಿ ಸರಕಾರಕ್ಕೆ ಮುಜುಗರ ಸೃಷ್ಟಿಸಿರುವುದರ ಜತೆಗೆ ಸಾಕಷ್ಟು ಸುದ್ದಿ ಮಾಡಿರುವವರು ಕೇಂದ್ರ ಮಾಹಿತಿ ಆಯುಕ್ತರಾದ  ಮದಭೂಷಣಂ ಶ್ರೀಧರ್ ಆಚಾರ್ಯುಲು.

ಮೋದಿ ಪದವಿ ಸಂಬಂಧಿತ ಪ್ರಕರಣದ ನಂತರ ಅವರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ಅಧಿಕಾರವನ್ನು ಈಗಾಗಲೇ ಹಿಂದೆಗೆದುಕೊಳ್ಳಲಾಗಿದೆ.

ಹತ್ತು ಮಂದಿ ಮಾಹಿತಿ ಆಯುಕ್ತರು ಹಾಗೂ ಮುಖ್ಯ ಮಾಹಿತಿ ಆಯುಕ್ತರ ಪೈಕಿ ಆಚಾರ್ಯುಲು ಅವರೊಬ್ಬರೇ  ಅಧಿಕಾರಿಯೇತರ  ಆಯುಕ್ತರಾಗಿದ್ದಾರೆ. ಆದರೆ ಆರ್ಟಿಐ ಕಾಯಿದೆಯ ಬಗ್ಗೆ ಅವರದ್ದು ಸ್ಪಷ್ಟ ಅಭಿಪ್ರಾಯ. “ಅದೊಂದು ಸರಳ, ಅನೌಪಚಾರಿಕ ಕಾನೂನು. ಜನಸ್ನೇಹಿ ಕೂಡ. ನಾನು ಇಲ್ಲಿ ದಂಡ ವಿಧಿಸಲು ಇರುವುದಲ್ಲ, ಬದಲಾಗಿ ಸಾರ್ವಜನಿಕ ಪ್ರಾಧಿಕಾರಿಗಳಿಂದ ನಿರಾಕರಿಸಲ್ಪಟ್ಟ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುವವನು” ಎಂದು ಅವರು ಹೇಳುತ್ತಾರೆ.

ಮೋದಿ ಹಾಗೂ ಇರಾನಿ ಶೈಕ್ಷಣಿಕ ದಾಖಲೆಗಳ ಬಗ್ಗೆ ತಮ್ಮ ಆದೇಶದ ಬಗ್ಗೆ ಅವರು “ಬೇರೆಯವರು ನೀಡಿದ ಹೇಳಿಕೆಗಳನ್ನು (ಅಫಿಡವಿಟ್) ನಾನು ಶಂಕಿಸುತ್ತಿಲ್ಲ. ಆದರೆ ಮಾಹಿತಿ ಬಹಿರಂಗವನ್ನು ಅವರು ವಿರೋಧಿಸಬಾರದು” ಎಂದಿದ್ದಾರೆ.

“ನಿಮ್ಮನ್ನು ಯುಪಿಎ ಆಡಳಿತದ ಸಂದರ್ಭ ನೇಮಕ ಮಾಡಲಾಗಿರುವುದರಿಂದ ನೀವೀಗ ಎನ್ಡಿಎ ನಾಯಕರುಗಳಿಗೆ ಮುಜುಗರ ತಂದೊಡ್ಡುತ್ತಿದ್ದೀರಾ?” ಎಂಬ ಪ್ರಶ್ನೆಗೆ “ನನ್ನ ಹಲವು ಆದೇಶಗಳು ಕೇಜ್ರಿವಾಲ್ ನೇತೃತ್ವದ  ದೆಹಲಿ ಸರಕಾರಕ್ಕೆ ಮುಜುಗರ ಸೃಷ್ಟಿಸಿವೆ. ಒಂದು ಪ್ರಕರಣದಲ್ಲಿ ನಾನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೂ ನೊಟೀಸ್ ಕಳುಹಿಸಿದ್ದೆ” ಎಂದು ಆಚಾರ್ಯುಲು ಹೇಳಿದರು.

ಮುಂದುವರಿದು ಮಾತನಾಡಿದ ಅವರು, “ನಾನೊಬ್ಬ ಬಿಜೆಪಿಯ ಮತದಾರ ಎಂದು ಹೇಳಲೇಬೇಕು. ನಾನೊಬ್ಬ ವೈಷ್ಣವ ಹಾಗೂ ಗೋರಕ್ಷಣೆಯ ಪರವಾಗಿ ನಾನು ಇದ್ದೇನೆ” ಎನ್ನುತ್ತಾರೆ ಅವರು.

ನ್ಯಾಷನಲ್ ಲಾ ಸ್ಕೂಲ್ ಹೈದರಾಬಾದ್ ಇಲ್ಲಿನ ಮಾಜಿ ಪ್ರೊಫೆಸರ್ ಆಗಿರುವ ಆಚಾರ್ಯುಲು (60) ಅವರು  ಈಗಿನ ತೆಲಂಗಾಣದ ವಾರಂಗಲ್ ಮೂಲದವರು. ಅವರು ತಮ್ಮ ವೃತ್ತಿಯನ್ನು ಪತ್ರಕರ್ತರಾಗಿ ಆರಂಭಿಸಿದ್ದರು. ಯುಪಿಎ ಸರಕಾರದಲ್ಲಿ ಕಲ್ಲಿದ್ದಲು ಸಚಿವರಾಗಿದ್ದ ದಾಸರಿ ನಾರಾಯಣ ರಾವ್ ಅವರÀ ಒಡೆತನದ ಉದಯಂ ತೆಲುಗು ದೈನಿಕದಲ್ಲಿ  ಅವರು ಕೆಲಸ ನಿರ್ವಹಿಸುತ್ತಿದ್ದರು. ನವೆಂಬರ್ 22, 2013ರಲ್ಲಿ ಅವರನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಲಾಗಿತ್ತು.

ಆಂಧ್ರ ಸರಕಾರದ ಪಾರದರ್ಶಕತೆ ಕಾನೂನು ಕರಡು ತಯಾರಿ ಹಾಗೂ ಬಾಡಿಗೆ ನಿಯಂತ್ರಣ, ಕಡ್ಡಾಯ ಶಿಕ್ಷಣ ಮತ್ತು ಬಾಲಕಾರ್ಮಿಕ ನಿಷೇಧ ಸಂಬಂಧಿತ ಕರಡು ಶಾಸನಗಳ ತಯಾರಿಯಲ್ಲೂ ಅವರು ಸಕ್ರಿಯವಾಗಿ ಒಳಗೊಂಡಿದ್ದರು.

ಆಚಾರ್ಯುಲು ಅವರು  ಪತಿಕೋದ್ಯಮ ಹಾಗೂ  ಕಾನೂನಿನ ವಿಚಾರದಲ್ಲಿ  ಇಂಗ್ಲಿಷ್ ಹಾಗೂ ತೆಲುಗು ಭಾಷೆಗಳಲ್ಲಿ 30 ಕೃತಿಗಳನ್ನು ರಚಿಸಿದ್ದಾರೆ.