ದೃಷ್ಟಿ ಕಳೆದುಕೊಂಡರೂ ಬರಹಗಾರನಾಗುವ ಕನಸನ್ನು ನನಸಾಗಿಸಿಕೊಂಡ ಹುಸೈನ್ ಕಾಪು

 

ನಮ್ಮ ಪ್ರತಿನಿಧಿ ವರದಿ
ಉಡುಪಿ : ನಲ್ವತ್ತೆಂಟರ ಹರೆಯದ ಹುಸೈನ್ ಕಾಪು ಎಳವೆಯಲ್ಲಿಯೇ ಬರವಣಿಗೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಬರಹಗಾರನಾಗುವ ಕನಸನ್ನು ಹೊತ್ತಿದ್ದ ಹುಸೈನ್ ಕಾಪು 2008ರಲ್ಲಿ ಸಂಭವಿಸಿದ ಅಪಘಾತದಲ್ಲಿ ದೃಷ್ಟಿಗಳನ್ನೇ ಕಳಕೊಂಡರು. ಆದರೆ ಕಾಪು ಒಬ್ಬ ಛಲವಾದಿ. ದೃಷ್ಟಿಗಳನ್ನು ಕಳೆದುಕೊಂಡರೂ ತನ್ನ ಕನಸನ್ನು ಕೈ ಬಿಡಲಿಲ್ಲ. ಇದೀಗ ಆತ ಮೂರು ಪುಸ್ತಕಗಳ ಕರ್ತೃ.
ಈ ಮೂರೂ ಪುಸ್ತಕಗಳು ಜೀವನ ಪಾಠ ಮತ್ತು ಜೀವನದ ಹಾದಿಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಒಂದನೇಯದು ಸಾಮಾಜಿಕ ಅಸಮಾನತೆ ಬಗ್ಗೆ ಬೆಳಕು ಚೆಲ್ಲುವ `ಮನುಷ್ಯನ ಮನಸಿಗೆ ಜಾತಿ ಎಂಬ ಗ್ರಹಣ’, ಎರಡನೇಯದು ಮಾನವ ತನ್ನ ಜೀವನದಲ್ಲಿ ಏನಾದರೂ ಗುರಿ ಸಾಧಿಸುವ ಬಗೆಗಿನ ಸ್ಪೂರ್ತಿದಾಯಕ ಪುಸ್ತಕ `ಮರಳಿ ಬಾ ಮನಸೆ’ ಮತ್ತು ಮೂರನೇಯದು ಒಬ್ಬ ಬಡ ಮತ್ತು ಹೋರಾಟದ ವಿದ್ಯಾರ್ಥಿ `ಮುಗಿಲು ಮುಕ್ತ ಪಯಣ’. ಮೊದಲ ಎರಡು ಪುಸ್ತಕಗಳ 10,000 ಪ್ರತಿಗಳನ್ನು ಹುಸೈನ್ ವ್ಯಯಕ್ತಿಕವಾಗಿ ಮಾರಾಟ ಮಾಡಿದ್ದಾರೆ.
“ನಾನು 22 ಜಿಲ್ಲೆಗಳಿಗೆ ಭೇಟಿ ಕೊಟ್ಟು ಈ ಪುಸ್ತಕಗಳನ್ನು ಮಾರಾಟ ಮಾಡಿದ್ದೇನೆ. ಶಾಲೆಗಳಿಗೆ, ಖಾಸಗಿ ಮತ್ತು ಸರ್ಕಾರಿ ಕಚೇರಿಗಳಿಗೆ, ಪೊಲೀಸ್ ಸ್ಟೇಷನುಗಳಿಗೆ, ಬಸ್ ನಿಲ್ದಾಣಗಳಲ್ಲಿ ವ್ಯಯಕ್ತಿಕವಾಗಿ ಭೇಟಿ ನೀಡಿ ಪುಸ್ತಕಗಳನ್ನು ಮಾರಾಟ ಮಾಡಿದ್ದೇನೆ. ಕೆಲವರು ನನಗೆ ಗೌರವ ನೀಡಿದ್ದಾರೆ. ಆದರೆ ಮತ್ತೆ ಕೆಲವರು ನಾನೊಬ್ಬ ಭಿಕ್ಷುಕ ಎಂದು ಭಾವಿಸಿ ಹಣ ಎಸೆದಿದ್ದಾರೆ. ಹಣ ನನ್ನ ಅವಶ್ಯಕತೆ ಆಗಿದ್ದರೂ ಅದಕ್ಕೆ ಅಷ್ಟು ದೊಡ್ಡ ಪ್ರಾಮುಖ್ಯತೆ ನೀಡುವುದಿಲ್ಲ, ನನ್ನ ಬರಹಕ್ಕೆ ಗೌರವ ಮತ್ತು ಗುರುತಿಸುವಿಕೆ ಸಿಗುವುದು ನನಗೆ ಮುಖ್ಯ. ಇದುವರೆಗಿನ ಪುಸ್ತಕಗಳಲ್ಲಿ ನಾನು ಹೆಚ್ಚಿನದೇನು ಗಳಿಸಿಲ್ಲ. ಗಳಿಸಿದ್ದಕ್ಕಿಂತ ಹೆಚ್ಚು ಪುಸ್ತಕಗಳ ಮುದ್ರಣಕ್ಕೆ ಹಣ ಖರ್ಚು ಮಾಡಿದ್ದೇನೆ” ಎಂದು ಅವರು ಹೇಳಿದ್ದಾರೆ.