ಪತ್ನಿ ವಿರುದ್ಧ ಪತಿ ವಂಚನೆ ದೂರು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಪತ್ನಿ ಹಾಗೂ ಆಕೆಯ ಮನೆಯವರು ತನಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದಾಗಿ ಪತಿ  ಮೂಡುಬಿದಿರೆ ಪೊಲೀಸ್‍ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ.

ಕಡಂದಲೆಯ ಸಂತೋಷ್ ಶೆಟ್ಟಿ ಎಂಬವರು ಪತ್ನಿ ಅಪೂರ್ವ ಶೆಟ್ಟಿ ಹಾಗೂ ಆಕೆಯ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತೋಷ್ ಶೆಟ್ಟಿ ಕುವೈಟಿನಲ್ಲಿ ಉದ್ಯೋಗದಲ್ಲಿದ್ದು 2011ರಲ್ಲಿ ಕಾಶಿಪಟ್ನದ ಅಪೂರ್ವ ಶೆಟ್ಟಿ ಎಂಬವರನ್ನು ವಿವಾಹವಾಗಿದ್ದರು.  ವಿದೇಶದಿಂದ ಲಕ್ಷಾಂತರ ರೂಪಾಯಿ ಪತ್ನಿಗೆ ಹಣ ಕಳುಹಿಸಿದ್ದು ಈ ಪೈಕಿ 63 ಲಕ್ಷ ರೂಪಾಯಿಯನ್ನು ಪತ್ನಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಠೇವಣಿ ಇರಿಸಲಾಗಿತ್ತೆನ್ನಲಾಗಿದೆ. ಮದುವೆಯ ಸಂದರ್ಭದಲ್ಲಿ 25 ಲಕ್ಷ ಮೌಲ್ಯದ ಚಿನ್ನ ಅಲ್ಲದೇ ಕಡಂದಲೆಯಲ್ಲಿ 28ಲಕ್ಷ ವೆಚ್ಚದ ಮನೆ, ಬೈಕ್, ಕೈನೆಟಿಕ್ ಹಾಗೂ ಒಂದು ಕಾರು ಕೂಡಾ ಪತ್ನಿ ಹೆಸರಿನಲ್ಲಿಯೇ ಇತ್ತು. ಜೊತೆಗೆ ಪತಿಯ ಎಲ್ಲಾ ದಾಖಲೆ ಪತ್ರಗಳು ಮನೆಯಲ್ಲಿತ್ತು.  ಈಗ ಕುವೈಟಿನಲ್ಲಿ ಉದ್ಯೋಗ ತೊರೆದಿದ್ದು ಕಡಂದಲೆಯಲ್ಲಿ ನೆಲೆಸಲು ನಿರ್ಧರಿಸಿದ್ದು ಇದಕ್ಕೆ ಪತ್ನಿ ಹಾಗೂ ಆಕೆಯ ಮನೆಯವರು ಆಕ್ಷೇಪಿಸಿ ಹಣ ಹಾಗೂ ಇತರ ಸೊತ್ತುಗಳು, ದಾಖಲೆಪತ್ರಗಳನ್ನು ನೀಡದೆ ವಂಚಿಸಿದ್ದು, ಮನೆಗೆ ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತಿ ಮೂಡುಬಿದಿರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.